ಹುಬ್ಬಳ್ಳಿ: ಮುಖ್ಯಮಂತ್ರಿ ವಿವೇಚನೆಯಡಿ ಧಾರವಾಡ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾದ ₹10 ಕೋಟಿ ಅನುದಾನದ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ವಿಷಯವನ್ನು ಹೆಚ್ಚುವರಿ ವಿಷಯಪಟ್ಟಿಯಲ್ಲಿ ಸೇರಿಸಿಲ್ಲ ಎಂಬುದು ಬುಧವಾರ ಪಾಲಿಕೆ ಸಾಮಾನ್ಯಸಭೆಯಲ್ಲಿ ಆಡಳಿತ, ವಿಪಕ್ಷ ಸದಸ್ಯರ ವಾಗ್ವಾದಕ್ಕೆ ಕಾರಣವಾಯಿತು. ವಿರೋಧ ಪಕ್ಷದ ಸದಸ್ಯರ ಸಭಾತ್ಯಾಗದ ನಡುವೆಯೇ ಸಾಮಾನ್ಯ ಸಭೆ ಜರುಗಿತು.
ಸಭೆ ಆರಂಭವಾಗುತ್ತಿದ್ದಂತೆಯೇ, ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಮೇಯರ್ ಪೀಠದ ಎದುರು ಧರಣಿ ಆರಂಭಿಸಿದರು. ಇದರಿಂದ ಸಭೆ ಶುರುವಾಗುವುದು ಎರಡೂವರೆ ಗಂಟೆ ತಡವಾಯಿತು.
ಮೇಯರ್ ಜ್ಯೋತಿ ಪಾಟೀಲ ಅವರು ಹಲವು ಬಾರಿ ಎಚ್ಚರಿಕೆ ನೀಡಿ, ಎರಡು ಬಾರಿ ಸಭೆ ಮುಂದೂಡಿದರೂ ವಿಪಕ್ಷ ಸದಸ್ಯರು ಪಟ್ಟು ಬಿಡಲಿಲ್ಲ. ಆಗ ಮೇಯರ್, ಸದಸ್ಯರಾದ ಸುವರ್ಣ ಕಲ್ಲಕುಂಟ್ಲಾ, ದೊರೆರಾಜ ಮಣಿಕುಂಟ್ಲ ಹಾಗೂ ರಾಜಶೇಖರ ಕಮತಿ ಅವರನ್ನು ಸಭೆಯಿಂದ ಹೊರಹಾಕುವಂತೆ ಮಾರ್ಷಲ್‌ಗಳಿಗೆ ಸೂಚಿಸಿದರು.
ಮಾರ್ಷಲ್‌ಗಳು ಸುವರ್ಣಾ ಕಲ್ಲಕುಂಟ್ಲ ಅವರನ್ನು ಸಭಾಂಗಣದಿಂದ ಹೊರಗೆ ಕರೆದೊಯ್ಯುವಾಗ, ಅಸ್ವಸ್ಥರಾದರು. ಕೂಡಲೇ ಅವರಿಗೆ ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಶ್ರೀಧರ ದಂಡಪ್ಪನವರ ಪ್ರಾಥಮಿಕ ಚಿಕಿತ್ಸೆ ನೀಡಿದರು. ನಂತರ ಆಂಬುಲೆನ್ಸ್‌ನಲ್ಲಿ ಅವರನ್ನು ಚಿಟಗುಪ್ಪಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮೇಯರ್ ಜ್ಯೋತಿ ಪಾಟೀಲ ಅವರು ಭಾಷಣ ಆರಂಭಿಸಿದಾಗ, ವಿರೋಧ ಪಕ್ಷದ ಸದಸ್ಯರು ಮತ್ತೆ ಪ್ರತಿಭಟಿಸಿದರು. ಗದ್ದಲದಲ್ಲೇ ಅವರು ಭಾಷಣ ಮುಗಿಸಿದರು.
‘ಇದು ಮುಂದುವರಿದ ಸಾಮಾನ್ಯ ಸಭೆಯಾಗಿದ್ದು, ಈಗಿನ ವಿಷಯಗಳ ಬಗ್ಗೆ ಚರ್ಚಿಸೋಣ. ಮುಂದಿನ ಸಭೆಯಲ್ಲಿ ₹10 ಕೋಟಿ ಅನುದಾನದ ಕ್ರಿಯಾಯೋಜನೆಗೆ ಅನುಮೋದನೆ ನೀಡುವ ವಿಷಯವನ್ನು ಹೆಚ್ಚುವರಿ ಪಟ್ಟಿಗೆ ಸೇರಿಸೋಣ. ಸಭೆ ನಡೆಸಲು ಅನುವು ಮಾಡಿಕೊಡಿ’ ಎಂದು ಮೇಯರ್ ಮನವೊಲಿಸಲು ಯತ್ನಿಸಿದರೂ ವಿಪಕ್ಷ ಸದಸ್ಯರು ಕಿವಿಗೊಡಲಿಲ್ಲ.
‘ರಾಜ್ಯ ಸರ್ಕಾರದಿಂದ ಅನುದಾನ ಬಂದಿದೆ. ಅದಕ್ಕೆ ಪಾಲಿಕೆಯಿಂದ ವಂತಿಗೆ ಕೊಡುವ ಅವಶ್ಯಕತೆ ಇಲ್ಲ. ಈ ಅನುದಾನದ ಕ್ರಿಯಾಯೋಜನೆಗೆ ಅನುಮೋದನೆ ನೀಡುವ ವಿಷಯವನ್ನು ಹೆಚ್ಚುವರಿ ಪಟ್ಟಿಗೆ ಸೇರಿಸಿಕೊಂಡು ಠರಾವು ಪಾಸು ಮಾಡಬೇಕು’ ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.
‘ನಮ್ಮ ವಾರ್ಡ್ ಅಭಿವೃದ್ಧಿಗೆ ಅನುದಾನ ಕೇಳಿದರೆ ಆರ್ಥಿಕ ಸ್ಥಿತಿ ಸರಿ ಇಲ್ಲ ಎಂದು ಮೇಯರ್, ಉಪಮೇಯರ್ ನೆಪ ಹೇಳುತ್ತಾರೆ. ರಾಜ್ಯ ಸರ್ಕಾರದಿಂದ ಕೊಟ್ಟಿರುವ ಅನುದಾನವನ್ನು ಬಳಸಿಕೊಳ್ಳುತ್ತಿಲ್ಲ. ಇದರಲ್ಲಿ ರಾಜಕೀಯ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದರು.
‘ಮೇಯರ್ ಚುನಾವಣೆ ಕಾರಣ ಕಳೆದ ಜೂನ್‌ನಲ್ಲಿ ಸಭೆ ನಡೆದಿರಲಿಲ್ಲ. ಹೀಗಾಗಿ ಇದು ಮುಂದುವರಿದ ಸಭೆ. ಹೆಚ್ಚುವರಿ ವಿಷಯ ತೆಗೆದುಕೊಳ್ಳಬೇಕೆ, ಬೇಡವೇ ಎಂಬುದು ತೀರ್ಮಾನವಾಗಿಲ್ಲ. ಮೇಯರ್ ಅವರ ಒಪ್ಪಿಗೆ ಇಲ್ಲದ, ಹೆಚ್ಚುವರಿ ವಿಷಯ ಪಟ್ಟಿ ಪ್ರತಿಗೆ ಪರಿಷತ್ ಕಾರ್ಯದರ್ಶಿ ಸಹಿ ಮಾಡಿದ್ದಾರೆ. ಇದು ವಿಪಕ್ಷ ಸದಸ್ಯರ ಸಿಕ್ಕಿದೆ. ಅಧಿಕಾರಿಗಳ ಈ ಧೋರಣೆ ಸರಿಯಲ್ಲ’ ಎಂದು ಸದಸ್ಯ ತಿಪ್ಪಣ್ಣ ಮಜ್ಜಗಿ ಆಕ್ರೋಶ ವ್ಯಕ್ತಪಡಿಸಿದರು.
ಎಲ್ ಆ್ಯಂಡ್ ಟಿ ಕೆಯುಐಡಿಎಫ್‌ಸಿಗೆ ದಂಡ
ಒಂದು ಪಿಐಡಿ ಸಂಖ್ಯೆಗೆ ಒಂದು ನಳ ಸಂಪರ್ಕ ಎಂಬ ನಿಯಮಕ್ಕೆ ಪಾಲಿಕೆಯ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಶಿವು ಹಿರೇಮಠ ಒಂದು ಪಿಐಡಿ ಸಂಖ್ಯೆಗೆ ಒಂದೇ ನಳ ಸಂಪರ್ಕ ಎಂಬ ನಿಯಮ ಕೈಬಿಡಬೇಕು. ಕನಿಷ್ಠ 2 ರಿಂದ 3 ನಳ ಸಂಪರ್ಕ ನೀಡಬೇಕು ಎಂದು ಆಗ್ರಹಿಸಿದರು.
‘ಅವಳಿ ನಗರದಲ್ಲಿ 28 ಸಾವಿರ ಅಕ್ರಮ ನಳ ಸಂಪರ್ಕಗಳಿವೆ. ಆದರೆ ಶುಲ್ಕ ಭರಿಸುತ್ತೇವೆ ಎಂದು ಹೇಳಿದರೂ ನಳ ಸಂಪರ್ಕ ನೀಡುತ್ತಿಲ್ಲ. ಕುಡಿಯುವ ನೀರಿನ ಯೋಜನೆಗೆ ಪಾಲಿಕೆಯಿಂದ ವಂತಿಗೆ ಭರಿಸಲಗುತ್ತಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿಲ್ಲ. ಸಂಬಂಧಪಟ್ಟ ಕಂಪನಿಗೆ ದಂಡ ವಿಧಿಸಬೇಕು’ ಎಂದು ಸದಸ್ಯರು ಆಗ್ರಹಿಸಿದರು.
‘ನೀರು ಅಗತ್ಯ ಮೂಲಸೌಕರ್ಯವಾಗಿದ್ದು ಎಲ್ ಆ್ಯಂಡ್ ಟಿ ಕಂಪನಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು (ಕೆಯುಐಡಿಎಫ್‌ಸಿ) ಸಮರ್ಪಕವಾಗಿ ಪೂರೈಸುತ್ತಿಲ್ಲ. ಯೋಜನೆ ನಿರ್ವಹಣೆಯಲ್ಲಿ ಕಂಪನಿಗಳು ವಿಫಲವಾಗಿವೆ. ಹೀಗಾಗಿ ಎಲ್ ಆ್ಯಂಡ್ ಟಿ ಕಂಪನಿಗೆ ₹1 ಕೋಟಿ ಕೆಯುಐಡಿಎಫ್‌ಸಿಗೆ ₹50 ಲಕ್ಷ ದಂಡ ಹಾಕಬೇಕು’ ಎಂದು ಮೇಯರ್ ಆದೇಶಿಸಿದರು.
ಒಂದು ಪಿಐಡಿ ಸಂಖ್ಯೆಗೆ ಎರಡು ನಳ ಸಂಪರ್ಕ ನೀಡಬೇಕು. ಇಲ್ಲದಿದ್ದರೆ ಸೇವಾ ಶುಲ್ಕವನ್ನು ಭರಿಸುವುದಿಲ್ಲ ಎಂದು ತಿಳಿಸಿದರು.
ಪೇಯ್ಡ್ ಪಾರ್ಕಿಂಗ್ ರದ್ದುಪಡಿಸಲು ಆಗ್ರಹ
ನಗರದಲ್ಲಿ ಪಾವತಿಸಿ ವಾಹನ ನಿಲುಗಡೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದ್ದು ಟೆಂಡರ್ ಪಡೆದವರು ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸುತ್ತಿದ್ದಾರೆ. ಪೇಯ್ಡ್ ಪಾರ್ಕಿಂಗ್ ವ್ಯವಸ್ಥೆ ರದ್ದುಪಡಿಸಬೇಕು ಎಂದು ಸದಸ್ಯರು ಆಗ್ರಹಿಸಿದರು. ಟೆಂಡರ್ ಪಡೆದವರು ನಿಗದಿಗಿಂತ ಹೆಚ್ಚು ಶುಲ್ಕ ಪಡೆಯುತ್ತಿದ್ದಾರೆ. ಈ ಮೂಲಕ ಜನರನ್ನು ಲೂಟಿ ಮಾಡುತ್ತಿದ್ದಾರೆ. ಬೀದಿ ವ್ಯಾಪಾರಿಗಳ ಮೇಲೂ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಸದಸ್ಯರು ದೂರಿದರು.
‘ಪೇಯ್ಡ್ ಪಾರ್ಕಿಂಗ್ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಿದೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಪಾದಚಾರಿ ಮಾರ್ಗ ಒತ್ತುವರಿಯಾಗಿದ್ದರೆ ತೆರವು ಮಾಡಬೇಕು’ ಎಂದು ಮೇಯರ್ ಆದೇಶಿಸಿದರು.
‘ವಾರ್ಡ್ 67ರಲ್ಲಿ ಸಾರ್ವಜನಿಕ ಶೌಚಾಲಯವನ್ನು ನೆಲಸಮ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ’ ಸದಸ್ಯ ಶಿವು ಮೆಣಸಿಕಕಾಯಿ ಹೇಳಿದರು.
‘ಸಾರ್ವಜನಿಕ ಸ್ಥಳದಲ್ಲಿ ಮೂತ್ರಾಲಯದ ಅವಶ್ಯಕತೆ ಇರುತ್ತದೆ. ಮೂತ್ರಾಲಯದ ಪಕ್ಕ ಶಾಲೆ ಇದ್ದು ಅವರಿಂದ ದೂರು ಬಂದ ಹಿನ್ನೆಲೆಯಲ್ಲಿ ನೆಲಸಮ ಮಾಡಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಮರು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮೇಯರ್ ಹೇಳಿದರು.
ಮೇಯರ್ ಭಾಷಣದ ಪ್ರಮುಖ ಅಂಶ
ಬೆಳಕು ಯೋಜನೆ ಅಡಿ ಎಲ್‌ಇಡಿ ಬೀದಿ ದೀಪ ಅಳವಡಿಕೆಯಿಂದ ವಿದ್ಯುತ್ ಶುಲ್ಕದಲ್ಲಿ ಶೇ 47ರಷ್ಟು ಉಳಿತಾಯ
ಪಾಲಿಕೆಯ ಎಲ್ಲ ವಲಯ ಕಚೇರಿಗಳಿಗೆ ‘ಜನಸ್ನೇಹಿ ವಲಯ ಕಚೇರಿ’ ಎಂದು ನಾಮಕರಣ ಮಾಡಿ ಜನರಿಗೆ ಹತ್ತಿರವಾಗಿಸಲು ಕ್ರಮ
ಹಳೇ ತ್ಯಾಜ್ಯ ವಿಲೇವಾರಿಗೆ 26.40 ಕೋಟಿ ವೆಚ್ಚದಲ್ಲಿ ಬಯೋಮೈನಿಂಗ್; ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣ
ಪಾಲಿಕೆಯ ಲೀಸ್ ಆಸ್ತಿ ಮಾರಾಟ ಮಾಡಿ ಆ ಆದಾಯದಲ್ಲಿ ಪಾಲಿಕೆ ಸುತ್ತಮುತ್ತ ಭೂಮಿ ಖರೀದಿಸಿ ಲ್ಯಾಂಡ್ ಬ್ಯಾಂಕ್ ಮಾಡುವ ಉದ್ದೇಶ
ನೀರಿನ ಉಳಿತಾಯಕ್ಕಾಗಿ 125 ಮೂತ್ರಖಾನೆಗಳನ್ನು ‘ವಾಟರ್‌ಲೆಸ್ ಯೂರಿನಲ್ಸ್’ ಆಗಿ ಪರಿವರ್ತಿಸುವುದು
ಪಾಲಿಕೆಯ ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ಅವುಗಳಿಂದ ಆದಾಯ ಸಂಗ್ರಹಿಸುವ ಗುರಿ
ಕುಡಿಯುವ ನೀರು ಎಲ್‌ಇಡಿ ಬೀದಿ ದೀಪ ಅಳವಡಿಕೆಯಂತಹ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಸಂಪನ್ಮೂಲ ಸಂಗ್ರಹಕ್ಕೆ ಒತ್ತು ನೀಡಬೇಕು.–ವೀರಣ್ಣ ಸವಡಿ, ಸದಸ್ಯ
ಮೇಯರ್ ಭಾಷಣಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ಸದಸ್ಯರ ವರ್ತನೆ ಖಂಡನೀಯ. ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸದೇ ಈ ರೀತಿ ವರ್ತಿಸಿದ್ದು ಸರಿಯಲ್ಲ.– ತಿಪ್ಪಣ್ಣ ಮಜ್ಜಗಿ, ಸದಸ್ಯ
ಪೇಯ್ಡ್ ಪಾರ್ಕಿಂಗ್ ವ್ಯವಸ್ಥೆ ರದ್ದುಪಡಿಸಿದರೆ ಸಂಚಾರ ಅಸ್ತವ್ಯಸ್ತವಾಗುತ್ತದೆ. ಬದಲಿಗೆ ಟೆಂಡರ್ ಪಡೆದವರು ಹೆಚ್ಚುವರಿ ಶುಲ್ಕ ಸಂಗ್ರಹಿಸಿದರೆ ಅವರ ಮೇಲೆ ಕ್ರಮ ಕೈಗೊಳ್ಳುವ ಕೆಲಸ ಆಗಬೇಕುನಜೀರ್ ಅಹ್ಮದ್ ಹೊನ್ಯಾಳ, ಸದಸ್ಯ, ಎಐಎಂಐಎಂ
ಎಲ್ ಆ್ಯಂಡ್ ಟಿ ಕಂಪನಿಗೆ ಈ ಹಿಂದೆಯೂ ದಂಡ ವಿಧಿಸಲಾಗಿತ್ತು. ಅವರು ಭರಿಸಿಲ್ಲ. ಪಾಲಿಕೆಯಿಂದ ನೀಡುವ ವಂತಿಗೆಯಲ್ಲಿ ಅದನ್ನು ಕಡಿತ ಮಾಡಬೇಕು.ಈರೇಶ ಅಂಚಟಗೇರಿ, ಸಭಾನಾಯಕ, ಹು–ಧಾ ಮಹಾನಗರ ಪಾಲಿಕೆ
ಅಸ್ವಸ್ಥಗೊಂಡಿದ್ದ ಕಾಂಗ್ರೆಸ್ ಸದಸ್ಯೆ ಸುವರ್ಣಾ ಕಲ್ಲಕುಂಟ್ಲ ಅವರನ್ನು ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಶ್ರೀಧರ ದಂಡಪ್ಪನವರ ಆಸ್ಪತ್ರೆಗೆ ಕರೆದೊಯ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.