ADVERTISEMENT

ಗಲಭೆ ನಿಯಂತ್ರಿಸಲು ಪೊಲೀಸ್ ವಾಹನ ಹತ್ತಿದ್ದೆ, ಪ್ರಚೋದಿಸಲು ಅಲ್ಲ: ಅಲ್ತಾಫ್‌‌ 

ಹುಬ್ಬಳ್ಳಿ-ಧಾರವಾಡ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 10:09 IST
Last Updated 19 ಏಪ್ರಿಲ್ 2022, 10:09 IST
ಅಲ್ತಾಫ್‌‌ ಹಳ್ಳೂರ
ಅಲ್ತಾಫ್‌‌ ಹಳ್ಳೂರ    

ಹುಬ್ಬಳ್ಳಿ: ಗಲಭೆ ನಿಯಂತ್ರಿಸಲು ಪೊಲೀಸ್ ವಾಹನದ ಮೇಲೆ ಹತ್ತಿದ್ದೇನೆಯೇ ಹೊರತು, ಪ್ರಚೋದನೆ ನೀಡಲು ಅಲ್ಲ. ಆ ಸಂದರ್ಭದಲ್ಲಿ ನನ್ನ ಮೇಲೂ ಕಲ್ಲು ತೂರಾಟ ನಡೆದಿದೆ ಎಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ ಹೇಳಿದರು.

ಪೊಲೀಸ್ ವಾಹನದ ಮೇಲೆ ತಾವು ಹತ್ತಿರುವ ವಿಡಿಯೋ ವೈರಲ್ ಆಗಿರುವ ಕುರಿತು ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ನಾನು ಪ್ರಚೋದನೆ ಮಾಡುತ್ತಿರಲಿಲ್ಲ. ಗಲಾಟೆ ಮಾಡಬೇಡಿ ಎಂದು ನಮ್ಮ ಜನರಿಗೆಸಮಾಧಾನ ಮಾಡುತ್ತಿದ್ದೆ. ಎತ್ತರದಲ್ಲಿ ನಿಂತು ಮಾತನಾಡಿದ್ರೆ ಜನರಿಗೆ ಧ್ವನಿ ಕೇಳುತ್ತದೆ ಎಂಬ ಕಾರಣಕ್ಕೆ ಪೊಲೀಸ್ ವಾಹನ ಏರಿದ್ದೆ. ಗಲಭೆಯಲ್ಲಿ ಪಾಲ್ಗೊಂಡವರಲ್ಲಿ ಹೆಚ್ಚಿನ ಸ್ಥಳೀಯರು ಇರಲಿಲ್ಲ ಎಂದರು.

ಕಪ್ಪು ಬಟ್ಟೆ ಕಟ್ಟಿಕೊಂಡು ಕಲ್ಲು ಎಸೆದವರು ಸ್ಥಳೀಯರಲ್ಲ. ಬೇರೆ ಬೇರೆ ಸಂಘಟನೆಯವರು ಕಲ್ಲು ತೂರಾಟ ನಡೆಸಿದ್ದಾರೆ. ನನಗೂ ಕೂಡ ಗಾಯಗಳಾಗಿವೆ. ನಾನು ಯಾವುದೇ ಕಾರಣಕ್ಕೂ ಗಲಭೆ ಸೃಷ್ಟಿಸುವ ಹಾಗೂ ದೇಶ ದ್ರೋಹದ ಕೆಲಸವನ್ನು ಮಾಡುವುದಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲಿ ಎಂದು ಅವರು ಹೇಳಿದರು.

ಇನ್ನೂ ಗಲಾಟೆ ಮಾಡಿದವರ ಬಗ್ಗೆ ನನಗೆ ಗೊತ್ತಿರುವಷ್ಟು ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಿದ್ದೇನೆ. ನಮಗೆ ಶಾಂತಿ ಮತ್ತು ಸೌಹಾರ್ದ ಮುಖ್ಯವಾಗಿದೆ. ನಾನು ಯಾವುದೇ ಕಾರಣಕ್ಕೂ ಪ್ರಚೋದನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.