ADVERTISEMENT

ಹು–ಧಾ ಮಹಾನಗರ: ಮದ್ಯ ಸೇವಿಸಿ ವಾಹನ ಚಾಲನೆ ಪ್ರಕರಣ ಹೆಚ್ಚಳ

₹2.49 ಕೋಟಿ ದಂಡ ಪಾವತಿಸಿದ ಪಾನಮತ್ತ ಚಾಲಕರು

ಜಿ.ಎನ್.ನಾಗರಾಜ್
Published 15 ಫೆಬ್ರುವರಿ 2026, 5:08 IST
Last Updated 15 ಫೆಬ್ರುವರಿ 2026, 5:08 IST
ರವೀಶ ಸಿ.ಆರ್‌., ಡಿಸಿಪಿ
ರವೀಶ ಸಿ.ಆರ್‌., ಡಿಸಿಪಿ   

ಹುಬ್ಬಳ್ಳಿ: ಮದ್ಯ ಸೇವಿಸಿ ವಾಹನ ಚಲಾಯಿಸದಂತೆ ಜಾಗೃತಿ ಮೂಡಿಸಿ, ಎಚ್ಚರಿಕೆ ನೀಡುತ್ತಿದ್ದರೂ ಅದ್ಯಾವುದೂ ತಮಗಲ್ಲ ಎಂಬಂತೆ ಕೆಲ ಪಾನಮತ್ತರು ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ವಾಹನಗಳನ್ನು ಚಲಾಯಿಸುತ್ತಾರೆ. ತಪಾಸಣೆಯಲ್ಲಿ ಸಿಕ್ಕಿಬಿದ್ದಾಗ, ₹10 ಸಾವಿರ ದಂಡವನ್ನೂ ಪಾವತಿಸುತ್ತಾರೆ.

ರಾತ್ರಿ ಅಲ್ಲದೇ, ಕೆಲಸದ ಸಮಯದಲ್ಲೂ ಕಂಠಪೂರ್ತಿ ಕುಡಿದು ವಾಹನ ಚಲಾಯಿಸುತ್ತಾರೆ. ಕೆಲ ಸರ್ಕಾರಿ ಇಲಾಖೆಯ ಸಿಬ್ಬಂದಿ, ಅಧಿಕಾರಿಯೂ ಇದಕ್ಕೆ ಹೊರತಾಗಿಲ್ಲ. ಅಮಲಿನಲ್ಲಿ ವಾಹನ ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸುವುದಲ್ಲದೆ, ಅಮಾಯಕ ಸವಾರರಿಗೆ, ಪಾದಚಾರಿಗಳಿಗೆ, ವಾಹನಗಳಿಗೆ ಡಿಕ್ಕಿ ಹೊಡೆದು ಅಪಘಾತಗಳಿಗೆ ಕಾರಣರಾಗುತ್ತಾರೆ. ಕಾರ್ಯಾಚರಣೆ ನಡೆಸಿ ದಂಡ ಕಟ್ಟಿಸಿಕೊಂಡು, ಚಾಲನಾ ಪರವಾನಗಿ ತಾತ್ಕಾಲಿಕವಾಗಿ ರದ್ದು ಪಡಿಸಿದರೂ, ಕೆಲವು ಸವಾರರು ಮಾತ್ರ ಎಚ್ಚೆತ್ತುಕೊಂಡಿಲ್ಲ.

ಅವಳಿನಗರದಲ್ಲಿ ಮದ್ಯಸೇವನೆ ಮಾಡಿ ವಾಹನ ಚಲಾಯಿಸಿದವರಿಂದ ಕಳೆದ ವರ್ಷ(2025) ಸಂಚಾರ ಪೊಲೀಸರು, ಬರೋಬ್ಬರಿ ₹2.49 ಕೋಟಿ ದಂಡ ಪಾವತಿಸಿಕೊಂಡಿದ್ದಾರೆ. 2,395 ಮಂದಿ ತಲಾ ₹10 ಸಾವಿರದಂತೆ ಕೋರ್ಟ್‌ ಹಾಗೂ ಠಾಣೆಗಳಲ್ಲಿ ದಂಡ ತೆತ್ತಿದ್ದಾರೆ. 200ಕ್ಕೂ ಹೆಚ್ಚು ಮಂದಿಯ ಚಾಲನಾ ಪರವಾನಗಿ ರದ್ದುಪಡಿಸುವಂತೆ ಆರ್‌ಟಿಒ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.

ADVERTISEMENT

ಚನ್ನಮ್ಮ ವೃತ್ತ, ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತ, ಇಂಡಿಪಂಪ್‌ ವೃತ್ತ, ಕಾರವಾರ ರಸ್ತೆ, ನವನಗರ, ವಿದ್ಯಾನಗರ,  ಧಾರವಾಡದ ಸವದತ್ತಿ ರಸ್ತೆ, ವಿದ್ಯಾಗಿರಿ, ಸರಸ್ವತಿಪುರ, ಸಾಧನಕೆರೆ, ಬೆಳಗಾವಿ ರಸ್ತೆ ಸೇರಿದಂತೆ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಕಳೆದ ವರ್ಷ ಸುಮಾರು 2 ಲಕ್ಷಕ್ಕೂ ಹೆಚ್ಚು ವಾಹನಗಳ ಚಾಲಕರನ್ನು ತಪಾಸಣೆ ನಡೆಸಿದ್ದರು.

ಆಲ್ಕೋಮೀಟರ್‌ ಸಾಧನದ ವರದಿಯಾಧರಿಸಿ ನೋಟಿಸ್‌ ನೀಡಿ ದಂಡ ತುಂಬಿಸಿಕೊಂಡಿದ್ದಾರೆ. ಆಟೊ, ಕ್ಯಾಬ್‌, ಕಾರ್‌, ಲಾರಿ, ಟ್ಯಾಕ್ಸಿ, ಸ್ಕೂಲ್‌ ಬಸ್‌ ಚಾಲಕರು ದಂಡ ಕಟ್ಟಿದ್ದಾರೆ. ಶೇ 50ಕ್ಕಿಂತ ಹೆಚ್ಚು ಬೈಕ್‌ ಸವಾರರು ದಂಡ ಪಾವತಿಸಿದ್ದಾರೆ. ಶೇ 90ರಷ್ಟು ದಂಡ ಕೋರ್ಟ್‌ನಲ್ಲಿ ಪಾವತಿಯಾಗಿದೆ.

‘ಶಾಲಾ ಬಸ್‌ ಚಾಲಕರನ್ನು ಸಹ ತಪಾಸಣೆಗೊಳಪಡಿಸಿರುವ ಪೊಲೀಸರು, ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುತ್ತಿದ್ದ 10ಕ್ಕೂ ಹೆಚ್ಚು ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡ್ರಂಕ್‌ ಆ್ಯಂಡ್ ಡ್ರೈವ್ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ₹10 ಸಾವಿರ ದಂಡದ ಜೊತೆಗೆ, ಚಾಲನಾ ಪರವಾನಗಿಯನ್ನು ಸಹ ಅಮಾನತುಗೊಳಿಸಲು ಸಾರಿಗೆ ಅಧಿಕಾರಿಗಳಿಗೆ ಸೂಚಿಸುತ್ತೇವೆ. ಮೊದಲ ಬಾರಿ ಸಿಕ್ಕಿ ಬಿದ್ದಾಗ ಮೂರು ತಿಂಗಳು ಡಿಎಲ್‌ ರದ್ದಾಗುತ್ತದೆ, ನಂತರ ಶಾಶ್ವತವಾಗಿಯೂ ರದ್ದು ಮಾಡಬಹುದು’ ಎಂದು ಪೊಲೀಸರು ಹೇಳುತ್ತಾರೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದೊಡ್ಡಮೊತ್ತದ ದಂಡ ಪಾವತಿಸಿಕೊಳ್ಳುತ್ತಿದ್ದೇವೆ. ಸವಾರರೆಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಬೇಕು
–ರವೀಶ ಸಿ.ಆರ್‌ ಡಿಸಿಪಿ ಸಂಚಾರ ಮತ್ತು ಅಪರಾಧ ವಿಭಾಗ

‘ಪ್ರತಿಷ್ಠಿತ ಬಡಾವಣೆಗಳಲ್ಲೇ ಹೆಚ್ಚು’

ಹಬ್ಬ ಹಾಗೂ ವಾರಾಂತ್ಯದ ದಿನಗಳಲ್ಲಿ ಕಾರ್ಯಾಚರಣೆ ನಡೆಸಿದಾಗ ಪಾನಮತ್ತ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಾರೆ. ಉಳಿದ ದಿನಗಳಲ್ಲಿ ಹೆಚ್ಚಾಗಿ ರಾತ್ರಿವೇಳೆ ಸಿಕ್ಕಿಬೀಳುತ್ತಾರೆ. ಪ್ರತಿಷ್ಠಿತ ಬಡಾವಣೆಗಳಲ್ಲಿ ವಾಸಿಸುವ ಗಣ್ಯವ್ಯಕ್ತಿಗಳು ಸಹ ಪಾನಮತ್ತರಾಗಿ ಕಾರು ಚಲಾಯಿಸುತ್ತಾರೆ. ಆಟೊ ಚಾಲಕರು ಸಹ ಮದ್ಯಪಾನ ಮಾಡಿ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದು ಕಂಡು ಬಂದಿದೆ. ಮದ್ಯಪಾನ ಮಾಡಿ ಶಾಲಾ ವಾಹನಗಳನ್ನು ಚಲಾಯಿಸಿದವರ ವಿರುದ್ಧ ಶಾಲಾ ಆಡಳಿತ ಮಂಡಳಿಗೆ ತಿಳಿಸಲಾಗಿದೆ ಎಂದು ಪೊಲೀಸರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.