
ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಅವಳಿ ನಗರದಲ್ಲಿ ಅಕ್ರಮ ಬಡಾವಣೆಗಳ ಸಮಸ್ಯೆ ಬೃಹತ್ ಸ್ವರೂಪ ಪಡೆಯುತ್ತಿದೆ. ಇಲ್ಲಿ ನಿವೇಶನ ಖರೀದಿಸಿದವರ ಮತ್ತು ಮನೆ ಕಟ್ಟಿಕೊಂಡವರ ಸಂಕಷ್ಟ ಹೇಳತೀರದು. ಇದನ್ನು ಕೊನೆಗಾಣಿಸಲು ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಮುಂದಾಗಿದೆ. ಅನಧಿಕೃತ ಬಡಾವಣೆಗಳನ್ನು ಅಧಿಕೃತಗೊಳಿಸಲು ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.
‘ಕಳೆದ 10 ರಿಂದ 30 ವರ್ಷಗಳ ಅವಧಿಯಲ್ಲಿ ನಿರ್ಮಾಣವಾದ ಅನಧಿಕೃತ ಬಡಾವಣೆಗಳ ಮಾಹಿತಿ ಸಂಗ್ರಹಿಸಿ, ಪಟ್ಟಿ ಸಿದ್ಧಪಡಿಸಿ. ಇದರ ಜೊತೆಗೆ ಅಧಿಕೃತ ಮಾಡಬಹುದಾದ ಬಡಾವಣೆಗಳ ಪಟ್ಟಿ ಪ್ರತ್ಯೇಕವಾಗಿ ಸಿದ್ಧಪಡಿಸಿ’ ಎಂದು ಹುಡಾ ಅಧ್ಯಕ್ಷ ಶಾಕೀರ ಸನದಿ ಅವರು ಯೋಜನಾ ಶಾಖೆ, ತಾಂತ್ರಿಕ ಶಾಖೆ ಹಾಗೂ ಕಾನೂನು ವಿಭಾಗದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರತಿ ಬಡಾವಣೆಯ ಹೆಸರು, ಸ್ಥಳ, ಡೆವಲಪರ್ಸ್ ಹೆಸರು, ಅವರ ಸಂಪರ್ಕ ವಿಳಾಸ, ಅನುಮೋದಿತ ಯೋಜನೆಯಿದ್ದಲ್ಲಿ, ಅದರ ನಕಲು, ರಸ್ತೆ ಸೇರಿ ಅಲ್ಲಿರುವ ಮೂಲಸೌಕರ್ಯಗಳ ಸ್ಥಿತಿ (ಫೋಟೊ ಸಹಿತ), ವಾಸಿಸುತ್ತಿರುವ ಮನೆಗಳ ಸಂಖ್ಯೆ ಹಾಗೂ ಖರೀದಿದಾರರ ಮಾಹಿತಿ, ಉಲ್ಲಂಘನೆಯ ಸ್ವರೂಪ ಮತ್ತು ಪ್ರಮಾಣ, ಅಭಿವೃದ್ಧಿ ಪೂರ್ಣಗೊಳಿಸಲು ಬೇಕಾದ ಅಂದಾಜು ವೆಚ್ಚ ಹಾಗೂ ಪ್ರಕರಣವೇನಾದರೂ ಕೋರ್ಟ್‌ನಲ್ಲಿದ್ದರೆ, ಅದರ ಸಂಪೂರ್ಣ ಮಾಹಿತಿಯನ್ನು 15 ದಿನಗಳಲ್ಲಿ ನೀಡಲು ತಿಳಿಸಿದ್ದಾರೆ.
ಏನಿದು ಅಕ್ರಮ?: ಹಲವು ವರ್ಷಗಳ ಕೃಷಿ ಮಾಡದೆ ಪಾಳು ಬಿದ್ದ ಜಮೀನುಗಳನ್ನು ರೈತರು ಬಾಂಡ್ ಪೇಪರ್ ಮೂಲಕ ಅಥವಾ ನೋಟರಿ ದಾಖಲೆಗಳ ಮೂಲಕ ಮಾರಿದ್ದರು. ಆದರೆ, ಇದು ಕಾನೂನಿನ ಪ್ರಕಾರ ನೋಂದಣಿ ಆಗಿರಲಿಲ್ಲ. ನಗರಾಭಿವೃದ್ಧಿ ಕಾಯ್ದೆಯಡಿ ಅನುಮೋದನೆಯೂ ಆಗಿಲ್ಲ. ಈ ಜಾಗದಲ್ಲಿ ಡೆವಲಪರ್‌ಗಳು ನಿವೇಶನಗಳನ್ನು ಮಾಡಿ, ಮಾರಿದ್ದಾರೆ. ಅವುಗಳನ್ನು ಖರೀದಿಸಿರುವ ಜನರು ಮನೆಗಳನ್ನು ಕಟ್ಟಿಕೊಂಡು ವಾಸವಿದ್ದಾರೆ. ತಮ್ಮ ಹಣದಲ್ಲೇ ರಸ್ತೆ, ಒಳಚರಂಡಿ, ಬೀದಿದೀಪಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಸಮಸ್ಯೆ ಉದ್ಭವ: ಇತ್ತೀಚಿನ ವರ್ಷಗಳಲ್ಲಿ ಮೂಲ ಭೂಮಿಯ ಮಾಲೀಕರ ಮೊಮ್ಮಕ್ಕಳು, ವಾರಸುದಾರರು ಈ ಪ್ರದೇಶಗಳ ನಿವಾಸಿಗಳ ಬಳಿ ಬಂದು ಈ ಭೂಮಿ ತಮಗೆ ಸೇರಿದ್ದೆಂದು ವಾದ ಮಾಡುತ್ತಿದ್ದಾರೆ. ಭೂಮಿ ವಶಪಡಿಸಿಕೊಳ್ಳುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಇಲ್ಲದಿದ್ದರೆ ಲಕ್ಷಾಂತರ ರೂಪಾಯಿ ಹಣ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಇದು ಸಮಸ್ಯೆಯಾಗಿ ಉದ್ಭವಿಸಿದೆ. ಇಂಥ ಸಂಕಷ್ಟ ಎದುರಿಸುತ್ತಿರುವ ನಿವಾಸಿಗಳು, ವಕೀಲರ ಮತ್ತು ಕಂದಾಯ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಸಮಸ್ಯೆ ಪರಿಹರಿಸಲು ಕೋರಿದ್ದಾರೆ.
‘ಮುಖ್ಯಮಂತ್ರಿಗೆ ಪತ್ರ’
‘ಅನಧಿಕೃತ ಬಡಾವಣೆಗಳನ್ನು ಗುರುತಿಸಿ ಪರಿಶೀಲಿಸಿ ಕಾನೂನುಬದ್ಧವಾಗಿ ಅಧಿಕೃತಗೊಳಿಸಲು ಸರ್ಕಾರದ ಮಟ್ಟದಲ್ಲಿ ಸಮಗ್ರ ನೀತಿ ರೂಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವೆ’ ಎಂದು ಹುಡಾ ಅಧ್ಯಕ್ಷ ಶಾಕೀರ ಸನದಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ರಾಜ್ಯದ ಬಹುತೇಕ ನಗರಗಳಲ್ಲಿ ಈ ಸಮಸ್ಯೆ ಇದೆ. ಬಡ ಹಾಗೂ ಮಧ್ಯಮ ವರ್ಗದ ನಿವಾಸಿಗಳಿಗೆ ಮನೆಯ ಭದ್ರತೆ ಸಿಗಬೇಕು. ಅನಧಿಕೃತ ಬಡಾವಣೆಗಳಿಗೆ ಅಂಕುಶ ಬೀಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.