ADVERTISEMENT

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ: ಬಾಂಡ್‌ ಬಿಡುಗಡೆಗೆ ಸಿದ್ಧತೆ

ಶ್ರೀಕಾಂತ ಕಲ್ಲಮ್ಮನವರ
Published 26 ಜುಲೈ 2025, 5:34 IST
Last Updated 26 ಜುಲೈ 2025, 5:34 IST
ಹುಬ್ಬಳ್ಳಿಯಲ್ಲಿ ಇರುವ ಮಹಾನಗರ ಪಾಲಿಕೆ ಆವರಣ
ಹುಬ್ಬಳ್ಳಿಯಲ್ಲಿ ಇರುವ ಮಹಾನಗರ ಪಾಲಿಕೆ ಆವರಣ   

ಹುಬ್ಬಳ್ಳಿ: ಭವಿಷ್ಯದ ಯೋಜನೆಗಳಿಗೆ ಅನುದಾನ ಕ್ರೋಢೀಕರಣಕ್ಕೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯು ‘ಮುನ್ಸಿಪಲ್‌ ಬಾಂಡ್‌ (ಡಿಬೆಂಚರ್ಸ್‌- ಸಾಲಪತ್ರಗಳು)’ ಬಿಡುಗಡೆ ಮಾಡಲು ಮುಂದಾಗಿದೆ. ಈ ಸಂಬಂಧ ಪಾಲಿಕೆಯ ಸಾಮಾನ್ಯ ಸಭೆಯು ಠರಾವು ಮಾಡಿ, ಸರ್ಕಾರಕ್ಕೆ ಕಳುಹಿಸಿದೆ.

ಬಾಂಡ್‌ ಪ್ರಕ್ರಿಯೆಯ ಮೊದಲ ಹೆಜ್ಜೆಯಾಗಿ ನಗರಾಭಿವೃದ್ಧಿ ಇಲಾಖೆಯು, ಪಾಲಿಕೆಯ ಆರ್ಥಿಕ ಸ್ಥಿತಿಯ ಮೌಲ್ಯಮಾಪನ ಮಾಡಲು ಮತ್ತು ಕ್ರೆಡಿಟ್‌ ರೇಟಿಂಗ್‌ ನೀಡಲು ಖಾಸಗಿ ಏಜೆನ್ಸಿಗೆ ಟೆಂಡರ್‌ ನೀಡಿದೆ.

ಬಾಂಡ್‌ ಬಿಡುಗಡೆ ಯಶಸ್ವಿಯಾಗಿ ನಡೆದರೆ, ಪಾಲಿಕೆಯ ವಿವಿಧ ಯೋಜನೆಗಳಿಗೆ ಹಣ ಹರಿದುಬರಲಿದೆ. ಸರ್ಕಾರವನ್ನು ಅವಲಂಬಿಸದೇ, ಹೂಡಿಕೆಯ ಹಣವನ್ನೇ ಬಳಸಿ ಯೋಜನೆಗಳನ್ನು ಪೂರ್ಣಗೊಳಿಸಬಹುದು.

ADVERTISEMENT

ರೇಟಿಂಗ್‌ ಹೇಗೆ?:

ಪಾಲಿಕೆಯ ಆರ್ಥಿಕ ಸ್ಥಿತಿಗತಿಯನ್ನು ಅಳೆಯುವ ಖಾಸಗಿ ಏಜೆನ್ಸಿಯು, ಪಾಲಿಕೆಯ ವ್ಯಾಪ್ತಿಯಲ್ಲಿನ ಆಸ್ತಿಗಳು ಮತ್ತು ಆಸ್ತಿ ಕರ ಬಗ್ಗೆ ಮಾಹಿತಿ ಪಡೆಯುತ್ತದೆ. ನೀರಿನ ತೆರಿಗೆಯಿಂದ ಎಷ್ಟು ಆದಾಯ ಬರುತ್ತದೆ, ಪಾಲಿಕೆ ಮಾಡುವ ಆಡಳಿತಾತ್ಮಕ ವೆಚ್ಚಗಳೆಷ್ಟು? ರಾಜ್ಯ ಸರ್ಕಾರದಿಂದ ಬರುವ ಅನುದಾನವೆಷ್ಟು ಸೇರಿ ಎಲ್ಲ ಆರ್ಥಿಕ ಮೂಲಗಳನ್ನು ಪರಿಶೀಲಿಸುತ್ತದೆ. ಪಾಲಿಕೆ ಬಳಿ ಇರುವ ಆರ್ಥಿಕ ಸಂಪನ್ಮೂಲಗಳನ್ನು ಲೆಕ್ಕ ಹಾಕಿ, ಆಡಿಟ್‌ ಮಾಡಲಾಗುತ್ತದೆ. ಇವೆಲ್ಲವನ್ನೂ ಕ್ರೋಢೀಕರಿಸಿ ʼಕ್ರೆಡಿಟ್‌ ರೇಟಿಂಗ್‌ʼ ನೀಡಲಾಗುತ್ತದೆ.

ರೇಟಿಂಗ್‌ ಆಧಾರದ ಮೇಲೆ ಸರ್ಕಾರ ಬಾಂಡ್‌ ಬಿಡುಗಡೆ ಮಾಡಲು ಅನುಮತಿ ನೀಡುತ್ತದೆ. ಉತ್ತಮ ಕ್ರೆಡಿಟ್‌ ರೇಟಿಂಗ್‌ ಸಿಕ್ಕರೆ ಬಾಂಡ್‌ಗಳಲ್ಲಿ ಹಣ ಹೂಡಿಕೆ ಮಾಡಲು ಸಂಸ್ಥೆಗಳು ಮುಂದೆ ಬರುತ್ತವೆ. ಸಾಂಸ್ಥಿಕ ಹೂಡಿಕೆದಾರರು, ಬ್ಯಾಂಕ್‌ಗಳು ಅಥವಾ ವೈಯಕ್ತಿಕವಾಗಿ ಜನರು ಕೂಡ ನೇರ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಬಾಂಡ್‌ಗಳನ್ನು ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಅಥವಾ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್‌ ಮಾಡಲಾಗುತ್ತದೆ. ಇದರ ಮೂಲಕ ಬಾಂಡ್‌ ಖರೀದಿ- ಮಾರಾಟ ನಡೆಯಲಿದೆ. ಬಾಂಡ್‌ ಖರೀದಿಸುವವರಿಗೆ ಪ್ರತಿವರ್ಷ ನಿಶ್ಚಿತ ಬಡ್ಡಿ ದೊರೆಯಲಿದೆ.

‘ನೇರವಾಗಿ ಸಾಲ ಪಡೆಯಲು ಪಾಲಿಕೆಗೆ ಅವಕಾಶವಿಲ್ಲ. ಅದಕ್ಕೆ ರಾಜ್ಯ ಸರ್ಕಾರದ ಜೊತೆಗೂಡಿ ಬಾಂಡ್‌ ಬಿಡುಗಡೆ ಮಾಡುವ ಯೋಜನೆ ಹಮ್ಮಿಕೊಂಡಿದ್ದೇವೆ. ಪಾಲಿಕೆಗೆ ಉತ್ತಮ ರೇಟಿಂಗ್‌ ಸಿಕ್ಕ ಬಳಿಕ ಮುಂದಿನ ಪ್ರಕ್ರಿಯೆ ಆರಂಭಗೊಳ್ಳಲಿದೆ’ ಎಂದು ಪಾಲಿಕೆಯ ಹೆಚ್ಚುವರಿ ಆಯುಕ್ತ ವಿಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾಲಿಕೆಯಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲು ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡಲು ಬಾಂಡ್‌ ಬಿಡುಗಡೆ ಮಾಡಬೇಕು. ಹೂಡಿಕೆದಾರರಿಗೂ ಇದು ಒಳ್ಳೆಯ ಅವಕಾಶ.
ವೀರಣ್ಣ ಸವಡಿ ಸದಸ್ಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.