ADVERTISEMENT

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ | 'ಪೇ ಪಾರ್ಕಿಂಗ್‌; ಗುತ್ತಿಗೆದಾರರಿಗೆ ದಂಡ'

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 3:06 IST
Last Updated 27 ಸೆಪ್ಟೆಂಬರ್ 2025, 3:06 IST
ಧಾರವಾಡದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮೇಯರ್‌ ಜ್ಯೋತಿ ಪಾಟೀಲ ಮಾತನಾಡಿದರು ಪ್ರಜಾವಾಣಿ ಚಿತ್ರ
ಧಾರವಾಡದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮೇಯರ್‌ ಜ್ಯೋತಿ ಪಾಟೀಲ ಮಾತನಾಡಿದರು ಪ್ರಜಾವಾಣಿ ಚಿತ್ರ    

ಧಾರವಾಡ: ಅವಳಿ‌ನಗರಗಳಲ್ಲಿ ‘ಪೇ ಅಂಡ್‌ ಪಾರ್ಕಿಂಗ್‌’ ಗುತ್ತಿಗೆದಾರರಿಗೆ ದಂಡ ವಿಧಿಸಲು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

ಪಾಲಿಕೆ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಧಾರವಾಡದ ಗುತ್ತಿಗೆದಾರಗೆ ₹ 10 ಲಕ್ಷ ಹಾಗೂ ಹುಬ್ಬಳ್ಳಿಯ ‌ಗುತ್ತಿಗೆದಾರಗೆ ₹ 25 ಲಕ್ಷ ದಂಡ ವಿಧಿಸಲು ನಿರ್ಧರಿಸಲಾಯಿತು.

ಪಾರ್ಕಿಂಗ್‌ ಗುತ್ತಿಗೆ ಪಡೆದಿರುವವರ ದುರ್ವತನೆ ತೋರತ್ತಾರೆ ಎಂದು ಸಭಾನಾಯಕ ಈರೇಶ ಅಂಚಟಗೇರಿ ಹೇಳಿದರು. ರಸ್ತೆ ಬದಿ ಬಾಳೆಗಿಡ ಇತ್ಯಾದಿ ಮಾರಾಟಗಾರರಿಗೆ ದಬಾಯಿಸಿ ಹಣ ವಸೂಲಿ ಮಾಡುತ್ತಾರೆ ಸದಸ್ಯೊಬ್ಬರು ಹೇಳಿದರು.

ADVERTISEMENT

ಧಾರವಾಡದಲ್ಲಿ ಕಸಾಯಿಖಾನೆಗಳು ಎಷ್ಟಿವೆ? ಎಂಬ ಪ್ರಶ್ನೆಗೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರ ನೀಡಿಲ್ಲ ಎಂದು ಸದಸ್ಯ ಶಂಕರ ಶೆಳಕೆ ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಎರಡು ವಧಾಲಯಗಳು ಇವೆ. ಶಿವಾಜಿ ವೃತ್ತದ ಸಮೀಪ (ಹೆಬ್ಬಳ್ಳಿ ರಸ್ತೆ) ಸೇಂಟ್‌ ಜಾನ್‌ ಥ್ಯಾಕರೆ ಸಮಾಧಿ ಪ್ರದೇಶದಲ್ಲಿ ಕೂಡಿದ್ದ ದನಗಳನ್ನು ಗೋಶಾಲೆಗೆ ರವಾನಿಸಿ, ಪ್ರಕರಣ ದಾಖಲಿಸಲಾಗಿದೆ. ಕೆಲವು ಮಾಂಸದ‌ಂಡಿಗಳವರು ಪರವಾನಗಿ ಪಡೆದಿಲ್ಲ. ಆ ಅಂಗಡಿಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸಮಿತಿ ರಚನೆಗೆ ಸಲಹೆ

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಜಾಗಗಳನ್ನುಕೆಲವರು ಬಳಕೆ ಮಾಡುತ್ತಿದ್ದಾರೆ. ಬಾಡಿಗೆ ನೀಡುತ್ತಿಲ್ಲ ಎಂದು ಅಂಚಟಗೇರಿ ಸಹಿತ, ಕೆಲವು ಸದಸ್ಯರು ಹೇಳಿದರು.

ಸಮಿತಿ ರಚಿಸಿ ಪಾಲಿಕೆ ಜಾಗಗಳ ಗುರುತಿಸಬೇಕು. ಆಸ್ತಿಗಳು ಎಷ್ಟಿವೆ? ಭೂಬಾಡಿಗೆ ಪಾವತಿಸುತ್ತಿರುವವರು ಎಷ್ಟು? ಎಂದು ಸಮಗ್ರ ಪರಿಶೀಲನೆ ಮಾಡಬೇಕು. ಭೂಬಾಡಿಗೆ ಹೆಚ್ಚಳ ಮಾಡಬೇಕು ಎಂದು ಕೆಲವು ಸದಸ್ಯರು ಸಲಹೆ ನೀಡಿದರು.

ಸವಿಸ್ತಾರ ಅಧ್ಯಯನಕ್ಕೆ ಸಲಹೆ: 

ಹುಬ್ಬಳಿ–ಧಾರವಾರ ಮಹಾನಗರ ಪಾಲಿಕೆಯಿಂದ ‘ಮುನ್ಸಿಪಲ್‌ ಬಾಂಡ್‌’, ‘ಹಸಿರು ಬಾಂಡ್‌‘, ‘ಹ‌ವಾಮಾನ ಬಾಂಡ್‌’ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆಗೆ ವಿಶೇಷ ಸಮಿತಿ ರಚನೆಯಾಗಬೇಕು. ಸುಸ್ಥಿರ ಬೆಳಕು, ಘನತ್ಯಾಜ್ಯ ನಿರ್ವಹಣೆ, ಕೆರೆ ಮತ್ತು ಜಾಲೆ ಪುನರುಜ್ಜೀವನ ಉದ್ದೇಶದಿಂದ ಇದನ್ನು ಪ್ರಸ್ತಾಪಿಸಲಾಗಿದೆ. ವಡೋಧರಾ, ಇಂದೋರ್‌, ಅಹಮದಾಬಾದ್‌ ಹಾಗೂ ಸೂರತ್‌ನಲ್ಲಿ ಈ ಬಾಂಡ್‌ಗಳು ಇವೆ ಎಂದು ಪಾಲಿಕೆ ಆಯುಕ್ತ ಡಾ.ರುದ್ರೇಶ್‌ ಘಾಳಿ ತಿಳಿಸಿದರು.

‘ಮುನ್ಸಿಪಲ್‌ ಬಾಂಡ್‌’, ‘ಹಸಿರು ಬಾಂಡ್‌‘, ‘ಹ‌ವಾಮಾನ ಬಾಂಡ್‌’ಗಳಿಗೆ ಸಂಬಂಧಿಸಿದಂತೆ ಕಾರ್ಯಾಗಾರ ಆಯೋಜಿಸಬೇಕು. ಪಾಲಿಕೆ ಸದಸ್ಯರಿಗೆ ಸಮಗ್ರ ಮಾಹಿತಿ ತಿಳಿಸಬೇಕು ಎಂದು ತಿಪ್ಪಣ್ಣ ಮಜ್ಜಗೆ ತಿಳಿಸಿದರು.

ವಡೋಧರಾ, ಸೂರತ್ ಪಾಲಿಕೆಗಳಿಗೆ ತಂಡ ಕಳಿಸಿ ಸವಿಸ್ತಾರವಾಗಿ ಅಧ್ಯಯನ ನಡೆಸಬೇಕು. ಸಬ್ಸಿಡಿ ಇತ್ಯಾದಿ ಕುರಿತು ಮಾಹಿತಿ ಪಡೆದು ಮುಂದಿನ ಸಭೆಯಲ್ಲಿ ಪ್ರಸ್ತಾವ ಮಂಡಿಸಬೇಕು ಎಂದು ಸದಸ್ಯರು ಸಲಹೆ ನೀಡಿದರು.

ನೀರಸಾಗರ ಅಣೆಕಟ್ಟು ದುರಸ್ತಿ ಮತ್ತು ನಿರ್ವಹಣೆಗೆ ₹ 5.87 ಕೋಟಿಗೆ ಪ್ರಸ್ತಾವ ಸಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ಮಾಡಬೇಕು. ಅಣೆಕಟ್ಟು ನಿರ್ವಹಣೆ ಕುರಿತು ಪೂರ್ಣ ವಿವರದೊಂದಿಗೆ ಮುಂದಿನ ಸಭೆಯಲ್ಲಿ ಪ್ರಸ್ತಾವ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಮೇಯರ್‌ ಜ್ಯೋತಿ ಪಾಟೀಲ ತಿಳಿಸಿದರು.

ನಗರದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ನಾಯಿಗಳು ಅನೇಕ ಮಕ್ಕಳು, ಸಾರ್ವಜನಿಕರಿಗೆ ಕಡಿದಿವೆ. ಬೀದಿ ನಾಯಿಗಳು ಹಿಂಡುಹಿಂಡಾಗಿ ರಸ್ತೆಯಲ್ಲಿ ಮಲಗಿರುತ್ತವೆ. ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸುವರ್ಣಾ ಕಲ್ಲಕುಂಟ್ಲ ಒತ್ತಾಯಿಸಿದರು.

ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಅವುಗಳನ್ನು ದತ್ತು ನೀಡಲಾಗುತ್ತಿದೆ. ಉಳಿದಿರುವ ನಾಯಿಗಳನ್ನು ಎರಡು ತಿಂಗಳ ಒಳಗಾಗಿ ಶಿವಳ್ಳಿಯ ಆಶ್ರಯ ತಾಣಕ್ಕೆ ಸ್ಥಳಾಂತರಿಸಲಾಗುವುದು ಎಂದು ಮೇಯರ್ ಜ್ಯೋತಿ ಪಾಟೀಲ ತಿಳಿಸಿದರು.

ಧಾರವಾಡದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ವಾಗ್ವಾದ ನಡೆಯಿತು ಪ್ರಜಾವಾಣಿ ಚಿತ್ರ

ಜಿಎಸ್‌ಟಿ ಕಡಿತ ಮೋದಿಗೆ ಅಭಿನಂದನೆ; ವಾಗ್ವಾದ ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ಕಡಿತಗೊಳಿಸಿ ಜನರಿಗೆ ಅನುಕೂಲ ಮಾಡಿದ್ಧಾರೆ. ಪಾಲಿಕೆಯಿಂದ ಅಭಿನಂದನಾ ಪತ್ರ ಬರೆಯಬೇಕು ಎಂದು ಸಭಾನಾಯಕ ಈರೇಶ ಅಂಚಟಗೇರಿ ಹೇಳಿದರು. ಜಿಎಸ್‌ಟಿ ಇಳಿಕೆಯಿಂದ ಅಚ್ಚೇದಿನ ಅರಂಭಾಗಿದೆ ಎಂದು ಬಿಜೆಪಿ ಸದಸ್ಯರೊಬ್ಬರು ಹೇಳಿದರು. ಮೋದಿ ಅವರು ಎಂಟು ವರ್ಷ ಜಿಎಸ್‌ಟಿ ಸಂಗ್ರಹಿಸಿ ಈಗ ಕಡಿಮೆ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಇಮ್ರಾನ್‌ ಯಲಿಗಾರ ಸಹಿತ ಕಾಂಗ್ರೆಸ್‌ ಸದಸ್ಯರು ಹೇಳಿದಾಗ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಕೆಲಕಾಲ ಗದ್ದಲ ಉಂಟಾಯಿತು. ರಾಜ್ಯ ಕಾಂಗ್ರೆಸ್‌ ಸರ್ಕಾರ ಹಾಲ ಮೊಸರು ವಿದ್ಯುತ್‌ ದರ ಹೆಚ್ಚಿಸಿದೆ ಎಂದು ಬಿಜೆಪಿ ಸದಸ್ಯರು ದೂರಿದರು. ಜಿಎಸ್‌ಟಿಯನ್ನು ಮೋದಿಯವರು ತೆಗೆದು ಹಾಕಬೇಕು ಎಂದು ಕಾಂಗ್ರೆಸ್‌ ಸದಸ್ಯರೊಬ್ಬರು ಹೇಳಿದರು. ಈ ವಿಚಾರದಲ್ಲಿ ವಾದ–ಪ್ರತಿವಾದ ಬೇಡ. ಜಿಎಸ್‌ಟಿ ಕಡಿಮೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸೋಣ ಎಂದು ಮೇಯರ್‌ ಜ್ಯೋತಿ ಪಾಟೀಲ ಅವರು ಗದ್ದಲಕ್ಕೆ ತೆರೆ ಎಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.