ಹುಬ್ಬಳ್ಳಿ: ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಭ್ರಮ ಸಡಗರದಿಂದ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ. ಮನೆ ಹಾಗೂ ಅಂಗಡಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಹಬ್ಬ ಕಳೆಗಟ್ಟಿದೆ. ಮನೆ–ಮನಗಳಲ್ಲಿ ಪ್ರಣತಿಯ ಬೆಳಕು ಪ್ರಜ್ವಲಿಸುತ್ತಿದೆ.
ಸೋಮವಾರ ನರಕ ಚತುರ್ದಶಿ ಆಚರಿಲಾಯಿತು. ಸೂರ್ಯೋದಯಕ್ಕೂ ಮುನ್ನವೇ ಮಂಗಳಸ್ನಾನ ಮಾಡಿ, ಮನೆದೇವರಿಗೆ ತುಪ್ಪದ ದೀಪದ ಹಚ್ಚಿ, ಬಾಗಿಲಿಗೆ ರಂಗೋಲಿ ಇಟ್ಟು, ತಳಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ದೇವರ ಕೋಣೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ, ಸಾಂಪ್ರದಾಯಿಕವಾಗಿ ಕದಳಿ ಕಂಬ ಹಾಗೂ ಕಬ್ಬು ನೆಟ್ಟು ಮಂಟಪ ತಯಾರಿಸಿ, ದೇವರಿಗೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಮಹಿಳೆಯರು, ಮಕ್ಕಳು ದೇವಸ್ಥಾನಗಳಿಗೆ, ಗುಡಿಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಕರಾವಳಿ ಹಾಗೂ ಮಲೆನಾಡು ಭಾಗದಿಂದ ವಲಸೆ ಬಂದ ಕುಟುಂಬದವರು, ಬೆಳಿಗ್ಗೆಯೇ ಬಿಸಿ ನೀರಿನ ಸ್ನಾನ ಮಾಡಿ, ಬೇವು ತಿಂದು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಕೆಲವರು ಮನೆಗಳಲ್ಲಿ ಬೋರಜ್ಜಿ ಹಾಗೂ ನರಕಾಸುರ ಬಲಿಚಕ್ರವರ್ತಿ ಮೂರ್ತಿಯನ್ನು ಕುಳ್ಳಿರಿಸಿ ಪೂಜೆ ನೆರವೇರಿಸಿದರು. ಮೊಗೆಕಾಯಿ ಕಡುಬು ಹಾಗೂ ವಿಶೇಷ ಅಡುಗೆ ತಯಾರಿಸಿ ನೈವೇದ್ಯ ಅರ್ಪಿಸಿದರು.
ಸಂಜೆ ವೇಳೆ ಕೆಲವು ವ್ಯಾಪಾರಸ್ಥರು ಅಂಗಡಿ, ವಾಣಿಜ್ಯ ಕಟ್ಟಡಗಳಲ್ಲಿ ಹಾಗೂ ಮನೆಗಳಲ್ಲಿ ಅಮಾವಾಸ್ಯೆ ಪ್ರಯುಕ್ತ ಲಕ್ಷ್ಮಿಪೂಜೆಯನ್ನು ಸಂಭ್ರಮ ಸಡಗರದಿಂದ ಮಾಡಿದರು. ದೇವಿಯ ಫೋಟೊಕ್ಕೆ ಹಾಗೂ ಮೂರ್ತಿಗೆ ವೈವಿಧ್ಯಮಯ ಅಲಂಕಾರ ಮಾಡಿ, ನಾನಾಬಗೆಯ ಹೂವುಗಳಿಂದ ಸಿಂಗರಿಸಿದ್ದರು. ಧನ, ಧಾನ್ಯ, ಪುಸ್ತಕ, ಪ್ರತಿನಿತ್ಯ ವ್ಯಾಪಾರ– ವಹಿವಾಟಿನಲ್ಲಿ ಬಳಸುವ ಸಾಮಗ್ರಿಗಳಿಗೆ ಗಂಧ, ಹೂವು ಇಟ್ಟು ಪೂಜೆ ಸಲ್ಲಿಸಿದರು. ವಾಹನಗಳನ್ನು ಶುಚಿಗೊಳಿಸಿ, ದೀಪ ಬೆಳಗಿದರು.
ಬುಧವಾರದಂದು ನಡೆಯಲಿರುವ ಬಲಿಪಾಡ್ಯ ಮತ್ತು ಗೋವು ಪೂಜೆಗೆ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗದವರ ಸಿದ್ಧತೆ ಭರದಿಂದ ಸಾಗಿದೆ. ಕೊಟ್ಟಿಗೆಗಳನ್ನು ಶುಚಿಗೊಳಿಸಿ, ಗೋವುಗಳ ಅಲಂಕಾರಕ್ಕೆ ಬಗೆಬಗೆಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದಾರೆ.
ನಗರದ ಚನ್ನಮ್ಮ ವೃತ್ತ, ದಾಜಿಬಾನ್‌ಪೇಟೆ, ಕೇಶ್ವಾಪುರ ರಸ್ತೆ, ಗೋಕುಲ ರಸ್ತೆ, ರಾಯಣ್ಣ ವೃತ್ತದ ಸುತ್ತಮುತ್ತ ವೈವಿಧ್ಯಮಯ ಆಲಂಕಾರಿಕ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ. ಬಣ್ಣಬಣ್ಣದ ಕೋಡಂಚು, ಜುವಲಾ, ಮಕ್ಕಾಡಾ, ಹಣೆಪಟ್ಟಿ, ಗೆಜ್ಜೆಸರ, ಗಂಟೆ, ದಾಬಾಗಳ ಖರೀದಿಯೂ ಜೋರಾಗಿ ನಡೆಯುತ್ತಿದೆ.
ನಗರದ ನೆಹರೂ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡಲಾಗಿದ್ದು, 20ಕ್ಕೂ ಹೆಚ್ಚು ಮಳಿಗೆಗಳಲ್ಲಿ ಮಾರಾಟ ನಡೆಯುತ್ತಿದೆ. ಬಗೆಬಗೆಯ ಪಟಾಕಿಗಳು ಮಕ್ಕಳನ್ನು ಆಕರ್ಷಿಸುತ್ತಿದ್ದು, ಪಾಲಕರ ಜೊತೆಗೂಡಿ ಖರೀದಿಯಲ್ಲಿ ಮುಗಿಬಿದ್ದಿದ್ದಾರೆ.
ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿದ ಮನೆ, ಮಳಿಗೆಗಳು ಸಿಹಿ ಕೊಳ್ಳಲು ಅಂಗಡಿ ಮುಂದೆ ಮುಗಿಬಿದ್ದ ಜನತೆ ಬಗೆಬಗೆಯ ಪಟಾಕಿಗೆ ಮನಸೋತ ಮಕ್ಕಳು
‘ಗೋವುಗಳಿಗೆ ವಿಶೇಷ ಖಾದ್ಯ’
ಶ್ರೀಕೃಷ್ಣನು ಗೋವರ್ಧನ ಪರ್ವತ ಎತ್ತಿ ಗೋಕುಲದ ಜನರನ್ನು ಇಂದ್ರನ ಕೋಪದಿಂದ ರಕ್ಷಿಸಿದ್ದಕ್ಕಾಗಿ ಗೋವುಗಳ ದೀಪಾವಳಿಯಂದು ಗೋವುಪೂಜೆ ಮಾಡುತ್ತೇವೆ. ಗೋವುಗಳಿಗೆ ಸ್ನಾನ ಮಾಡಿಸಿ ಅರಿಸಿಣ ಕುಂಕುಮ ಹಚ್ಚಿ ಹೂಮಾಲೆ ಹಾಕಿ ಆಲಂಕಾರಿಕ ವಸ್ತುಗಳಿಂದ ಸಿಂಗರಿಸುತ್ತೇವೆ. ಹೊಲದಲ್ಲಿ ಬೆಳೆದಿರುವ ಎಳ್ಳುಕಟ್ಟಿಗೆ ತಂದು ಮನೆ ಬಾಗಿಲು ಎದುರು ಬೆಂಕಿಹಾಕಿ ಕರಿ ಹಾಯಿಸುತ್ತೇವೆ. ನಂತರ ಬೆಲ್ಲ ಜೋಳದ ನುಚ್ಚು ಕುದಿಸಿರುವ ಖಾದ್ಯ ನೀಡಿ ಆರತಿ ಬೆಳಗಿ ಪೂಜೆ ಮಾಡುತ್ತೇವೆ’ ಎಂದು ಬೈರಿದೇವರಕೊಪ್ಪದ ರೈತ ಮಂಜುನಾಥ ಕೊಪ್ಪದ ತಿಳಿಸಿದರು.
ಕುಂಬಳಕಾಯಿ ಮಾರಾಟ ಜೋರು ನಗರದಾದ್ಯಂತ ಕುಂಬಳಕಾಯಿ ಖರೀದಿ ಜೋರಾಗಿ ನಡೆಯುತ್ತಿದೆ. ಸಾಮಾನ್ಯ ದಿನಗಳಲ್ಲಿ ₹40 ರಿಂದ ₹60ಗೆ ಮಾರಾಟವಾಗುತ್ತಿದ್ದ ಕುಂಬಳಕಾಯಿ ಹಬ್ಬದ ಪ್ರಯುಕ್ತ ₹80 ರಿಂದ ₹100ರವರೆಗೂ ಮಾರಾಟವಾಗುತ್ತಿದೆ. ಲಕ್ಷ್ಮಿ ಪೂಜೆ ವೇಳೆ ಕುಂಬಳಕಾಯಿ ಒಡೆಯುವುದು ಸಂಪ್ರದಾಯವಾಗಿದ್ದರಿಂದ ಅದಕ್ಕೆ ಬೇಡಿಕೆ ಹೆಚ್ಚಿದೆ. ಅದೇ ರೀತಿ ಚಂಡು ಹೂವು ಕಬ್ಬು ಮತ್ತು ಕದಳಿ ಮಾರಾಟವೂ ಜೋರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.