
ಅಶೋಕ ಫಿರೋಜಿ
ಹುಬ್ಬಳ್ಳಿ: ಕೃಷಿಯಲ್ಲಿ ಆಸಕ್ತಿ, ಹೊಸ ಹೊಸ ಪ್ರಯೋಗ ಮಾಡುತ್ತ ನೆಮ್ಮದಿಯ ಬದುಕಿನೊಂದಿಗೆ ಕೈ ತುಂಬ ಆದಾಯ ಪಡೆಯುತ್ತಿದ್ದಾರೆ ಹುಬ್ಬಳ್ಳಿ ತಾಲ್ಲೂಕಿನ ಅಂಚಟಗೇರಿಯ ಯುವರೈತ ಅಶೋಕ ಫಿರೋಜಿ.
ಬಿ.ಕಾಂ, ಎಲ್‌ಎಲ್‌ಬಿ ಪದವೀಧರರಾಗಿರುವ ಅಶೋಕ, ಈ ಮೊದಲು ಬೇರೆ ಬೇರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿ, ಉತ್ತಮ ಸಂಬಳ ಪಡೆಯುತ್ತಿದ್ದರೂ, ಕೃಷಿಯಲ್ಲಿನ ಆಸಕ್ತಿಯಿಂದ ಕೆಲಸ ಬಿಟ್ಟು, 12 ವರ್ಷದಿಂದ ಕೃಷಿಯಲ್ಲಿ ನಿರತರಾಗಿದ್ದಾರೆ.
ವಿವಿಧ ಹೂಗಳನ್ನು ಬೆಳೆಯಬೇಕೆಂದು ಕೃಷಿಯತ್ತ ಮುಖ ಮಾಡಿದ ಅಶೋಕ ಅವರಿಗೆ ಆರಂಭದಲ್ಲೆ ಕಾರ್ಮಿಕರ ಕೊರತೆ ಉಂಟಾಗಿದ್ದರಿಂದ ವಿವಿಧ ಕಾಳು ಬೆಳೆಗಳನ್ನು ಬೆಳೆಯಲು ಮುಂದಾದರು. ನಂತರ ಕಾಡು ಪ್ರಾಣಿಗಳ ಸಮಸ್ಯೆ ಎದುರಿಸಿದ ಅವರು, ಹೊಸ ಪ್ರಯೋಗವೆಂದು ಬಾಳೆ ಬೆಳೆದು ಬದುಕು ಹಸನಾಗಿಸಿಕೊಂಡರು.
8 ಎಕರೆ ಕೃಷಿ ಭೂಮಿಯಲ್ಲಿ 2 ಎಕರೆ ಬಾಳೆ, 1 ಎಕರೆ ಪಪ್ಪಾಯಿ, 5 ಎಕರೆ ಅಡಿಕೆ ಬೆಳೆಯುತ್ತಿರುವ ಅಶೋಕ ಬಳಿ 10 ದನ, ಐದಾರು ಕುರಿ ಸಹ ಇವೆ. 10 ಸಾವಿರ ಕೋಳಿ ಮರಿಗಳಿವೆ. ಕೋಳಿ ಫಾರಂ ಸಹ ಅವರಿಗೆ ಆದಾಯದ ಮೂಲವಾಗಿದೆ. ನಿತ್ಯ 30 ಲೀಟರ್ ಹಾಲನ್ನು ಡೇರಿಗೆ ನೀಡುತ್ತ ವಾರ್ಷಿಕ ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಎರಡು ವರ್ಷದ ಹಿಂದೆ ಶಿರಸಿಯಿಂದ 1,500 ಏಲಕ್ಕಿ ಬಾಳೆ ಅಗಿ ಹಚ್ಚಿದರು, ನಂತರ ಅವರಿಗೆ ಬಾಳೆ ಬೆಳೆಯೇ ವರದಾನವಾಯಿತು. ಸದ್ಯ ಬಾಳೆ ನಿರಂತರ ಫಸಲು ನೀಡುತ್ತಿದ್ದು, ಗ್ರಾಹಕರು ನೇರವಾಗಿ ತೋಟಕ್ಕೆ ಬಂದು ಖರೀದಿಸುತ್ತಿರುವುದರಿಂದ ಮಾರುಕಟ್ಟೆಯ ಅಗತ್ಯವಿಲ್ಲ. ಕೆಜಿಗೆ ₹25 ರಂತೆ ಮಾರಾಟ ಮಾಡುತ್ತಿದ್ದಾರೆ.
ಪಪ್ಪಾಯಿಯ ಇಳುವರಿಯೂ ಉತ್ತಮವಾಗಿದ್ದು, ಗ್ರಾಹಕರೇ ನೇರವಾಗಿ ಬಂದು ಖರೀದಿಸುತ್ತಾರೆ. ಋತುಮಾನಕ್ಕೆ ತಕ್ಕಂತೆ ಸೋಯಾಬಿನ್, ಸಾಮೆ, ಗೋವಿನ ಜೋಳ ಸೇರಿದಂತೆ ಇತ್ಯಾದಿ ಬೆಳೆಗಳನ್ನು ಬೆಳೆಯುವ ಅಶೋಕ, ಮನೆಗೆ ಬೇಕಾದ ವಿವಿಧ ರೀತಿಯ ತರಕಾರಿಯನ್ನು ಬೆಳೆಯುತ್ತಾರೆ.
ಈಚೆಗೆ ಮೀನುಕೃಷಿಗೆ ಮುಂದಾಗಿ ನೀರಸಾಗರ ಕೆರೆಯಿಂದ 500 ಕಾಟ್ಲಾ ಮೀನಿನ ಮರಿಗಳನ್ನು ಹೊಂಡದಲ್ಲಿ ಬಿಟ್ಟಿದ್ದೇನೆ. ಕೃಷಿ ನಿರಂತರ ಪರಿಶ್ರಮ ಬೇಡುವ ಕೆಲಸವಾಗಿದ್ದು, ಪತ್ನಿ ಹಾಗೂ ಅಳಿಯ ಸಾಥ್ ನೀಡುತ್ತಿದ್ದಾರೆ ಎನ್ನುತ್ತಾರೆ ಅಶೋಕ.
ಸಮಗ್ರ ಕೃಷಿ ಮಾಡುತ್ತಿರುವ ಅಶೋಕ ಎಲ್ಲ ವೆಚ್ಚವನ್ನು ಕಳೆದು ವಾರ್ಷಿಕ ₹8ರಿಂದ ₹10 ಲಕ್ಷ ಆದಾಯ ಪಡೆಯುತ್ತಿದ್ದಾರೆ.
ಕೃಷಿಯಲ್ಲಿನ ಅಶೋಕ ಅವರ ಸಾಧನೆಗೆ 2025ರಲ್ಲಿ ಧಾರವಾಡ ಜಿಲ್ಲಾಡಳಿತ ‘ಯುವಕೃಷಿಕ’ ಪ್ರಶಸ್ತಿ ನೀಡಿದೆ.
ಕಾರ್ಮಿಕರ ಕೊರತೆಯಿಂದ ಹೊಸ ಪ್ರಯೋಗಕ್ಕೆ ಮುಂದಾಗಿ ಬಾಳೆ ಹಾಗೂ ಅಡಿಕೆ ಕೃಷಿಗೆ ಆದ್ಯತೆ ನೀಡುತ್ತಿದ್ದೇನೆ
-ಅಶೋಕ ಫಿರೋಜಿ ರೈತ
---
ಕಲ್ಲಡಿಕೆ ಬೆಳೆಯುತ್ತಿರುವ ರೈತ
5 ಎಕರೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದಿಂದ 2500 ಕಲ್ಲಡಿಕೆ ಅಗಿಗಳನ್ನು ಹಚ್ಚಿರುವ ಅಶೋಕ ಅವರು ಹೊಸ ಪ್ರಯೋಗದೊಂದಿಗೆ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಅಂಚಟಗೇರಿ ಅರೆಮಲೆನಾಡು ಪ್ರದೇಶವಾಗಿರುವುದರಿಂದ ಅಡಿಕೆ ಬೆಳೆಗೆ ಪೂರಕವಾಗಿದೆ. ಕೆಲ ವರ್ಷಗಳ ನಂತರ ಉತ್ತಮ ಇಳುವರಿ ಪಡೆಯಬಹುದು. ಅಡಿಕೆ ಅಗಿಗಳನ್ನು ಹಚ್ಚಿ ಎರಡೂವರೆ ವರ್ಷವಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಫಸಲು ದೊರಕುತ್ತದೆ. ಭವಿಷ್ಯದಲ್ಲಿ ಇದು ನಿರಂತರ ಆದಾಯದ ಮೂಲವೂ ಆಗುತ್ತದೆ ಎನ್ನುತ್ತಾರೆ ರೈತ ಅಶೋಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.