ಹುಬ್ಬಳ್ಳಿ: ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾದ ಜಮೀನುಗಳಿಗೆ ಬೆಂಗಳೂರಿನಿಂದ ಆಗಮಿಸಿದ್ದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಹಶೀಲ್ದಾರ್ ಮಂಜುಳಮ್ಮ ನೇತೃತ್ವದ ಅಧಿಕಾರಿಗಳ ತಂಡವು ಮಂಗಳವಾರ ಭೇಟಿ ನೀಡಿ, ಉದ್ದು, ಹೆಸರು ಬೆಳೆ ಹಾನಿಯನ್ನು ವೀಕ್ಷಿಸಿತು.
ಅಧಿಕಾರಿಗಳ ತಂಡವು ಉಣಕಲ್, ಗೋಪನಕೊಪ್ಪ ಭಾಗದ ಜಮೀನುಗಳಿಗೆ ಭೇಟಿ ನೀಡಿ, ಹೆಸರು, ಉದ್ದು ಬೆಳೆಹಾನಿ ಪರೀಶಿಲಿಸಿ, ರೈತರ ಸಮಸ್ಯೆಯನ್ನು ಆಲಿಸಿತು.
‘ನಿರಂತರ ಮಳೆಯಿಂದಾಗಿ ಉದ್ದು, ಹೆಸರು ಬೆಳೆ ಹಾನಿಯಾಗಿದ್ದು, ಸಾಕಷ್ಟು ನಷ್ಟವಾಗಿದೆ. ಕೂಡಲೇ ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು‘ ಎಂದು ರೈತರು ಅಧಿಕಾರಿಗಳಲ್ಲಿ ಮನವಿ ಮಾಡಿದರು.
‘ಅತಿವೃಷ್ಟಿಯಿಂದಾಗಿ ಉಣಕಲ್ ಗ್ರಾಮೀಣದಲ್ಲಿನ 306 ಹೆಕ್ಟೆರ್ ಪ್ರದೇಶದಲ್ಲಿ ಹೆಸರು ಬೆಳೆ ಹಾನಿಯಾಗಿದೆ. 14 ಹೆಕ್ಟೆರ್‌ನಲ್ಲಿ ಉದ್ದು ಬೆಳೆ ಹಾನಿಯಾಗಿದೆ. ಗೋಪನಕೊಪ್ಪದಲ್ಲಿ 393 ಹೆಕ್ಟೆರ್‌ನಲ್ಲಿ ಹೆಸರು. 8 ಹೆಕ್ಟೆರ್‌ನಲ್ಲಿ ಉದ್ದು ಬೆಳೆ ಹಾನಿಯಾಗಿದೆ‘ ಎಂದು ತಾಲ್ಲೂಕು ಕೃಷಿ ಇಲಾಖೆಯ ಸಹಾಯ ನಿರ್ದೇಶಕಿ ಮಂಜುಳಾ ತೆಂಬದ ಮಾಹಿತಿ ನೀಡಿದರು.
ಅಧಿಕಾರಿಗಳ ತಂಡವು ಸೋಮವಾರವೂ ಶಿರಗೊಪ್ಪ, ಉಮಚಗಿ, ಕೋಳಿವಾಡ ಹಾಗೂ ಮಲ್ಲಿಗೆವಾಡ ಗ್ರಾಮಗಳಲ್ಲಿನ ಜಮೀನುಗಳಿಗೂ ಭೇಟಿ ನೀಡಿ, ಅತಿವೃಷ್ಟಿಯಿಂದಾಗಿ ಹಾಳಾಗಿರುವ ಹೆಸರು ಹಾಗೂ ಉದ್ದು ಬೆಳೆ ಹಾನಿಯನ್ನು ವೀಕ್ಷಿಸಿತು.
‘ಹುಬ್ಬಳ್ಳಿ ಗ್ರಾಮೀಣದಲ್ಲಿ ಒಟ್ಟು 17,805 ಹೆಕ್ಟೆರ್ ಪ್ರದೇಶದಲ್ಲಿ ಹೆಸರು ಬೆಳೆ ಹಾನಿಯಾಗಿದೆ. 192 ಹೆಕ್ಟೆರ್‌ನಲ್ಲಿ ಉದ್ದು ಬೆಳೆಹಾನಿಯಾಗಿದೆ. ಹುಬ್ಬಳ್ಳಿ ನಗರ ಪ್ರದೇಶದ ವ್ಯಾಪ್ತಿಯಲ್ಲಿ 1,104 ಹೆಕ್ಟೆರ್‌ನಲ್ಲಿ ಹೆಸರು, 198 ಹೆಕ್ಟೆರ್‌ನಲ್ಲಿ ಉದ್ದು ಬೆಳೆ ಹಾನಿಯಾಗಿದೆ’ ಎಂದು ಮಂಜುಳಾ ತೆಂಬದ ಮಾಹಿತಿ ನೀಡಿದರು.
‘ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಜಮೀನುಗಳಿಗೆ ಎರಡೂ ದಿನ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ತಂಡ ಭೇಟಿ ನೀಡಿ, ಬೆಳೆಹಾನಿ ಪರೀಶೀಲಿಸಿ, ರೈತರಿಂದ ಮಾಹಿತಿ ಪಡೆಯಿತು. ಬೆಳೆ ಹಾನಿ ಕುರಿತು ಸಮಗ್ರ ವರದಿ ತಯಾರಿಸಿ, ಸಲ್ಲಿಸುವಂತೆ ಅಧಿಕಾರಿಗಳಿಗೂ ಸೂಚಿಸಿತು‘ ಎಂದು ತಿಳಿಸಿದರು.
ಬೆಳೆ ಹಾನಿ ಸಮೀಕ್ಷೆ ನಡೆಸಿದ ಅಧಿಕಾರಿಗಳ ತಂಡದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಹುಬ್ಬಳ್ಳಿ ನಗರ ತಹಶೀಲ್ದಾರ್ ಮಹೇಶ ಬಿ.ಗಸ್ತೆ, ಗ್ರಾಮೀಣ ತಹಶೀಲ್ದಾರ್ ಜೆ.ಬಿ.ಮಜ್ಜಿಗೆ, ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.