ADVERTISEMENT

ಮರ್ಯಾದೆಗೇಡು ಹತ್ಯೆ ಅಮಾನುಷ ಕೃತ್ಯ, ತಪ್ಪಿತಸ್ಥರಿಗೆ ಶಿಕ್ಷೆ: ಸಚಿವ ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:10 IST
Last Updated 1 ಜನವರಿ 2026, 7:10 IST
<div class="paragraphs"><p>ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಗೃಹ ಸಚಿವ ಜಿ. ಪರಮೇಶ್ವರ ಅವರು&nbsp;ಚಿಕಿತ್ಸೆ ಪಡೆಯುತ್ತಿರುವ ರೇಣವ್ವ ದೊಡಮನಿ ಅವರ ಆರೋಗ್ಯ ವಿಚಾರಿಸಿದರು. ಶಾಸಕರಾದ ಎನ್‌.ಎಚ್‌. ಕೋನರಡ್ಡಿ, ಪ್ರಸಾದ ಅಬ್ಬಯ್ಯ ಇತರರು ಹಾಜರಿದ್ದರು</p></div>

ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಗೃಹ ಸಚಿವ ಜಿ. ಪರಮೇಶ್ವರ ಅವರು ಚಿಕಿತ್ಸೆ ಪಡೆಯುತ್ತಿರುವ ರೇಣವ್ವ ದೊಡಮನಿ ಅವರ ಆರೋಗ್ಯ ವಿಚಾರಿಸಿದರು. ಶಾಸಕರಾದ ಎನ್‌.ಎಚ್‌. ಕೋನರಡ್ಡಿ, ಪ್ರಸಾದ ಅಬ್ಬಯ್ಯ ಇತರರು ಹಾಜರಿದ್ದರು

   

–ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ತಾಲ್ಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ ಗೃಹ ಸಚಿವ ಜಿ.ಪರಮೇಶ್ವರ ಅವರು ಬುಧವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ದೌರ್ಜನ್ಯಕ್ಕೆ ಒಳಗಾದ ದೊಡಮನಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಕೃತ್ಯದ ಮಾಹಿತಿ ಪಡೆದು ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಹಾಗೂ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.

ADVERTISEMENT

ಮರ್ಯಾದೆಗೇಡು ಹತ್ಯೆಯಾದ ಮಾನ್ಯಾ ಅವರ ಪತಿ ವಿವೇಕಾನಂದ ಅವರು ಸಚಿವರಿಗೆ ಪ್ರಕರಣದ ಮಾಹಿತಿ ನೀಡಿದರು. ಸಿಸಿಟಿವಿ ಕ್ಯಾಮೆರಾ ಒಡೆದಿರುವುದು, ಗರ್ಭಿಣಿ ಮಾನ್ಯಾಳ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಏಳು ವರ್ಷದ ಅನನ್ಯಾಳಿಗೆ ಬೆದರಿಕೆ ಹಾಕಿದ್ದು, ತಾಯಿ ರೇಣವ್ವಗೆ ಊರಿನ ಮನೆಯೊಂದರಲ್ಲಿ ಹಲ್ಲೆ ನಡೆಸಿದ್ದು ಹೀಗೆ ಕೃತ್ಯ ನಡೆದ ದಿನದ ಘಟನಾವಳಿಗಳನ್ನು ವಿವರವಾಗಿ ತಿಳಿಸಿದರು.

ದಲಿತ ವಿಮೋಚನಾ ಸಮಿತಿ ಸದಸ್ಯರು ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕುಟುಂಬದ ಪರವಾಗಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

‘ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕುಟುಂಬದ ಜೊತೆಯಿದ್ದು, ಭಯಪಡದೆ ಬದುಕು ನಡೆಸಬೇಕು’ ಎಂದ ಸಚಿವ ಪರಮೇಶ್ವರ, ವೈಯಕ್ತಿಕವಾಗಿ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದರು. ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ನಂತರ ನಗರದ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೇಣವ್ವ ಅವರನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ‘ತುಂಬು ಗರ್ಭಿಣಿ ಮಗಳನ್ನು ತಂದೆಯೇ ಕೊಲೆ ಮಾಡಿರುವ ಕೃತ್ಯ ಅಮಾನುಷವಾಗಿದೆ. ಆಧುನಿಕ ಜಗತ್ತಿನಲ್ಲಿ ನಾವಿದ್ದು, ಇಂತಹ ಘಟನೆಗಳು ಎಲ್ಲಿಯೂ ನಡೆಯಬಾರದು’ ಎಂದರು.

‘ಕುಟುಂಬಸ್ಥರು ನೋವನ್ನು ತೋಡಿಕೊಂಡು, ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಅಪರಾಧಿಗಳಿಗೆ ತ್ವರಿತ ಶಿಕ್ಷೆ, ಮಾನ್ಯಾ ಅವರ ಪತಿ ವಿವೇಕಾನಂದ ಅವರಿಗೆ ಸರ್ಕಾರಿ ಉದ್ಯೋಗ ಹಾಗೂ ಪರಿಹಾರಕ್ಕೆ ವಿನಂತಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ. ಬೇಡಿಕೆ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್.ಕೋನರಡ್ಡಿ, ವಿಧಾನ ಪರಿಷತ್ ಸದಸ್ಯ ಎಫ್‌. ಎಚ್. ಜಕ್ಕಪ್ಪನವರ, ಜಿಲ್ಲಾಧಿಕಾರಿ ದಿವ್ಯಪ್ರಭು, ಐಜಿ ಚೇತನಸಿಂಗ್ ರಾಠೋಡ, ಸಿಇಒ ಭುವನೇಶ ಪಾಟೀಲ, ಎಸ್ಪಿ ಗುಂಜನ್‌ ಆರ್ಯ, ಡಿವೈಎಸ್ಪಿ ವಿನೋದ ಮುಕ್ತೆದಾರ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್‌ ಜೆ.ಬಿ. ಮಜ್ಜಗಿ, ಇನ್‌ಸ್ಪೆಕ್ಟರ್‌ ಮುರಗೇಶ ಚನ್ನಣ್ಣವರ, ಮುಖಂಡರಾದ ಅನಿಲಕುಮಾರ ಪಾಟೀಲ, ಅನ್ವರ್‌ ಮುಧೋಳ, ಶ್ರೀಧರ ಕಂದಗಲ್‌, ಪ್ರೇಮನಾಥ ಚಿಕ್ಕತುಂಬಳ ಇತರರು ಇದ್ದರು.

ಕೃತ್ಯದ ಕುರಿತು ಸರ್ಕಾರವನ್ನು ದೂಷಿಸುವ ಬದಲು ಎಲ್ಲರೂ ಪಕ್ಷಾತೀತವಾಗಿ ತನಿಖೆಗೆ ಸಹಕರಿಸಬೇಕು. ಕುಟುಂಬದ ಪರ ಸರ್ಕಾರಿ ವಿಶೇಷ ವಕೀಲರನ್ನು ನೇಮಕ ಮಾಡಲಾಗುವುದು
–ಜಿ. ಪರಮೇಶ್ವರ ಗೃಹ ಸಚಿವ

‘ಕುಟುಂಬಕ್ಕೆ ನಗರದಲ್ಲಿ ಆಶ್ರಯ ಮನೆ’

‘ಹುಬ್ಬಳ್ಳಿ ನಗರ ಪ್ರದೇಶದಲ್ಲಿ ಆಶ್ರಯ ಮನೆ ನೀಡುವುದಾಗಿ ಸಚಿವ ಜಿ. ಪರಮೇಶ್ವರ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಭರವಸೆ ನೀಡಿದ್ದಾರೆ’ ಎಂದು ವಿವೇಕಾನಂದ ದೊಡಮನಿ ತಿಳಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ಪ್ರಕರಣದಿಂದ ನಾವೆಲ್ಲ ಭಯ–ಭೀತರಾಗಿದ್ದು ಊರಲ್ಲಿ ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಸದ್ಯ ಪೊಲೀಸ್‌ ರಕ್ಷಣೆಯಲ್ಲಿ ಕುಟುಂಬದವರಿದ್ದು ಎಷ್ಟು ದಿನ ಈ ರಕ್ಷಣೆ ಇರಲು ಸಾಧ್ಯ? ಈ ಕುರಿತು ಸಚಿವರು ನಮ್ಮನ್ನು ವಿಚಾರಿಸಿ ಆಶ್ರಯ ಮನೆ ಕೊಡಿಸುವ ಭರವಸೆ ನೀಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.