ADVERTISEMENT

ಮರ್ಯಾದೆಗೇಡು ಹತ್ಯೆ | ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ: ಮೂರ್ತಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 8:36 IST
Last Updated 25 ಡಿಸೆಂಬರ್ 2025, 8:36 IST
<div class="paragraphs"><p>ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಕುಟುಂಬದವರನ್ನು ರಾಜ್ಯ ಅನುಸೂಚಿತ ಜಾತಿಗಳು‌ ಹಾಗೂ ಅನುಸೂಚಿತ ಬುಡಕಟ್ಟುಗಳು ಆಯೋಗದ ಅಧ್ಯಕ್ಷ ಡಾ. ಎಲ್. ಮೂರ್ತಿ ಅವರು ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಯಲ್ಲಿ ಗುರುವಾರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು</p></div>

ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಕುಟುಂಬದವರನ್ನು ರಾಜ್ಯ ಅನುಸೂಚಿತ ಜಾತಿಗಳು‌ ಹಾಗೂ ಅನುಸೂಚಿತ ಬುಡಕಟ್ಟುಗಳು ಆಯೋಗದ ಅಧ್ಯಕ್ಷ ಡಾ. ಎಲ್. ಮೂರ್ತಿ ಅವರು ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಯಲ್ಲಿ ಗುರುವಾರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು

   

ಹುಬ್ಬಳ್ಳಿ: 'ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಯಾವುದೇ ಅಧಿಕಾರಿ ನಿರ್ಲಕ್ಷ್ಯ ವಹಿಸಿದ್ದರೆ, ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ' ಎಂದು ರಾಜ್ಯ ಅನುಸೂಚಿತ ಜಾತಿಗಳು‌ ಹಾಗೂ ಅನುಸೂಚಿತ ಬುಡಕಟ್ಟುಗಳು ಆಯೋಗದ ಅಧ್ಯಕ್ಷ ಡಾ. ಎಲ್. ಮೂರ್ತಿ ಹೇಳಿದರು.

ನಗರದ ವಿವೇಕಾನಂದ ಆಸ್ಪತ್ರೆಯಲ್ಲಿ ಸಂತ್ರಸ್ತ ಕುಟುಂಬದವರ ಆರೋಗ್ಯ ವಿಚಾರಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ADVERTISEMENT

'ಈ ಪ್ರಕರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ವಹಿಸಿರುವ ಕುರಿತು ಆರೋಪ ಕೇಳಿಬಂದಿದೆ. ದೂರುಗಳು ಸಹ ಸಲ್ಲಿಕೆಯಾಗಿವೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕೂಲಂಕಶವಾಗಿ ಚರ್ಚಿಸಿ, ಲೋಪದೋಷಗಳನ್ನು ಪತ್ತೆ ಮಾಡಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದರು.

'ಇಂತಹ ಅಮಾನವೀಯ ಘಟನೆ ಮರುಕಳಿಸದಂತೆ ಅಗತ್ಯ ಕ್ರಮ ವಹಿಸಲು ಸರ್ಕಾರದ ಗಮನ ಸೆಳೆಯುವೆ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಪರಿಹಾರ ಕೊಡಿಸಲಾಗುವುದು. ಸಂತ್ರಸ್ತ ಕುಟುಂಬದವರು ಭಯಭೀತರಾಗಿದ್ದು, ಹೆಚ್ಚುವರಿ ಭದ್ರತೆ, ಆರ್ಥಿಕ‌ ನೆರವಿನೊಂದಿಗೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗೆ ಪತ್ರ ಬರೆದು, ಖುದ್ದಾಗಿ ಸಲ್ಲಿಸುವೆ' ಎಂದು ಹೇಳಿದರು.

ಸಭೆಯಲ್ಲಿ ಚರ್ಚೆ: ಇದಕ್ಕೂ ಮೊದಲು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, 'ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಅಧಿಕಾರಿಗಳ ನಿರ್ಲಕ್ಷ್ಯ, ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ, ಆಸ್ಪತ್ರೆ‌ ವೆಚ್ಚ ಭರಿಸುವುದರ ಕುರಿತು ನಾಳೆ ಬೆಂಗಳೂರಿನಲ್ಲಿ ನಡೆಯುವ

ರಾಜ್ಯ ಅನುಸೂಚಿತ ಜಾತಿಗಳು‌ ಹಾಗೂ ಅನುಸೂಚಿತ ಬುಡಕಟ್ಟುಗಳು ಆಯೋಗದ ಸಭೆಯಲ್ಲಿ ಚರ್ಚಿಸುವೆ' ಎಂದರು.

ಗುಂಡಿಟ್ಟು ಕೊಲ್ಲಿ: 'ಇಂತಹ ಅಮಾನವೀಯ ಕೃತ್ಯ ಎಸಗಿದವರನ್ನು ಬಂಧಿಸಿ, ಜೈಲಿನಲ್ಲಿ ಇಡುವ ಬದಲು ಗುಂಡಿಟ್ಟು ಕೊಲ್ಲಬೇಕು' ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

'ಈ ಪ್ರಕರಣ ಸಂಬಂಧ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿದ್ದು ತಪ್ಪು. ನಿರ್ಲಕ್ಷ್ಯದ ಆರೋಪ ಹೊತ್ತಿರುವ ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ‌ ಇಲಾಖೆಯವರ ವಿರುದ್ಧ ಕ್ರಮವಾಗಬೇಕು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.