
ಸಂಗ್ರಹ ಚಿತ್ರ
ಹುಬ್ಬಳ್ಳಿ: ನಗರದ ಕುಸಗಲ್ ರಸ್ತೆಯ ಮೈದಾನದಲ್ಲಿ ಸಂಸದರ ಸಾಂಸ್ಕೃತಿಕ ಮಹೋತ್ಸವದ ಪ್ರಯುಕ್ತ ಎರಡು ದಿನ ನಡೆದ ‘ಹುಬ್ಬಳ್ಳಿ ಅಂತರರಾಷ್ಟ್ರೀಯ ಗಾಳಿಪಟ ಹಾಗೂ ಸಾಂಸ್ಕೃತಿಕ ಉತ್ಸವ’ಕ್ಕೆ ಭಾನುವಾರ ಅದ್ದೂರಿಯಾಗಿ ಸಂಪನ್ನಗೊಂಡಿತು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ನಡೆದ ಉತ್ಸವದಲ್ಲಿ ಅಂತರರಾಷ್ಟ್ರೀಯ ಗಾಳಿಪಟ ಪಟುಗಳು ವೈವಿಧ್ಯಮಯ ಗಾಳಿಪಟ ಹಾರಿಸಿ ಸಂಭ್ರಮಿಸಿದರು. ಹಗ್ಗಜಗ್ಗಾಟ, ಗೋಣಿಚೀಲ ಕಟ್ಟಿಕೊಂಡು ಜಿಗಿತ, ಲಗೋರಿ, ಬುಗುರಿ, ಚಿನ್ನಿ-ದಾಂಡು ಸೇರಿದಂತೆ ವಿವಿಧ ದೇಸಿ ಕ್ರೀಡೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ವಿಜೇತರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಭಾನುವಾರ ಸಂಜೆ ನಡೆದ ಮನರಂಜನೆ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಹುಬ್ಬಳ್ಳಿಯ ಬಾಲ ಕಲಾವಿದೆ ಮಹನ್ಯಾ ಪಾಟೀಲ ಜೊತೆ ಕೇಂದ್ರ ಸಚಿವ ಪ್ರಹ್ಲಾದ ಜೊಶಿ ಅವರು, ‘ಕಾಣದಂತೆ ಮಾಯವಾದನೋ, ನಮ್ಮ ಶಿವ’ ಹಾಡು ಹಾಡಿ ಸಂಭ್ರಮಿಸಿದರು.
ಸೋನು ನಿಗಮ್ ಹಾಗೂ ಅವರ ತಂಡದಿಂದ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಪ್ರೇಕ್ಷಕರನ್ನು ಮನಸೂರೆಗೊಳಿಸಿತು. ಮುಂಗಾರು ಮಳೆ, ಮಾಯಾವಿ ಸೇರಿದಂತೆ ಹಲವು ಹಾಡುಗಳನ್ನು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.