ADVERTISEMENT

Budget Expectations | ಹುಬ್ಬಳ್ಳಿ: ಸಿಗುವುದೇ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ

ಪೆಟ್‌ ಸ್ಕ್ಯಾನ್‌, ಲಿನ್ಯಾಕ್‌ ಯಂತ್ರ ಒದಗಿಸಲು ಪ್ರಸ್ತಾವ; ಡಾ.ಈಶ್ವರ ಹೊಸಮನಿ

ಸತೀಶ ಬಿ.
Published 3 ಮಾರ್ಚ್ 2026, 3:55 IST
Last Updated 3 ಮಾರ್ಚ್ 2026, 3:55 IST
ಕೆಎಂಸಿಆರ್‌ಐ ಆಸ್ಪತ್ರೆ 
ಕೆಎಂಸಿಆರ್‌ಐ ಆಸ್ಪತ್ರೆ    

ಹುಬ್ಬಳ್ಳಿ: ಇಲ್ಲಿನ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಕೆಎಂಸಿಆರ್‌ಐ) ಪ್ರಾದೇಶಿಕ ಕ್ಯಾನ್ಸರ್‌ ಕೇಂದ್ರ (ಆರ್‌ಸಿಸಿ) ಸ್ಥಾಪಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಈಡೇರಿಲ್ಲ. ಆದರೆ, ಪ್ರಸಕ್ತ ಸಾಲಿನ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಇದಕ್ಕೆ ಸ್ಪಂದನೆ ಎಂಬ ನಿರೀಕ್ಷೆಯಿದೆ.

ಹುಬ್ಬಳ್ಳಿ –ಧಾರವಾಡ ಮಾತ್ರವಲ್ಲದೆ ಸುತ್ತಲಿನ ಕೊಪ್ಪಳ, ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ಬಳ್ಳಾರಿ–ವಿಜಯನಗರ ಜಿಲ್ಲೆಗಳಿಂದ ಕೆಎಂಸಿಆರ್‌ಐ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ. 

ಕೆಎಂಸಿಆರ್‌ಐನ ಕ್ಯಾನ್ಸರ್ ಚಿಕಿತ್ಸಾ ವಿಭಾಗದಲ್ಲಿ ಬ್ರೇಕಿ ಥೆರಪಿ, ಕಿಮೊಥೆರಪಿ, ರೇಡಿಯೊಥೆರಪಿ ಸೇರಿ ಎಲ್ಲ ಸೌಲಭ್ಯಗಳಿವೆ. ಉಪಕರಣಗಳ ಕೊರತೆ ಇಲ್ಲ. ಪ್ರತಿ ದಿನ 80 ರಿಂದ 90 ರೋಗಿಗಳಿಗೆ ರೇಡಿಯೊಥೆರಪಿ ಇರುತ್ತದೆ. ಪ್ರತಿ ದಿನ 250ರಿಂದ 300 ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ.

ADVERTISEMENT

2404 ಹಾಸಿಗೆ ಸಾಮರ್ಥ್ಯದ ಕೆಎಂಸಿಆರ್‌ಐ ಆಸ್ಪತ್ರೆಗೆ ಕ್ಯಾನ್ಸರ್ ಕಾಯಿಲೆ ಹೊರತುಪಡಿಸಿ ಇತರ ರೋಗಗಳಿಗೆ ಸಂಬಂಧಿಸಿದಂತೆ ಪ್ರತಿ ದಿನ 800 ರಿಂದ 900 ರೋಗಿಗಳು ಒಳ ರೋಗಿ ವಿಭಾಗ ಮತ್ತು 1,500 ರಿಂದ 1,800 ರೋಗಿಗಳು ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಾರೆ.

‘₹250 ಕೋಟಿ ವೆಚ್ಚದಲ್ಲಿ ಪ್ರಾದೇಶಿಕ ಕ್ಯಾನ್ಸರ್‌ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದು ಸ್ಥಾಪನೆಯಾದರೆ ನಮ್ಮ ಆಸ್ಪತ್ರೆ ಮೇಲಿನ ಹೊರೆ ಕಡಿಮೆ ಆಗುತ್ತದೆ. ಸೌಲಭ್ಯ ಹೆಚ್ಚಿಸಿದರೆ ಇನ್ನೂ ಹೆಚ್ಚು ರೋಗಿಗಳು ಬರುತ್ತಾರೆ’ ಎಂದು ಕೆಎಂಸಿಆರ್‌ಐ ನಿರ್ದೇಶಕ ಡಾ.ಈಶ್ವರ ಹೊಸಮನಿ ಹೇಳಿದರು.

‘ಆರ್‌ಸಿಸಿ ಹೊರತುಪಡಿಸಿ ತಲಾ ₹25 ಕೋಟಿ ವೆಚ್ಚದಲ್ಲಿ ಹೊಸ ಪೆಟ್‌ ಸ್ಕ್ಯಾನ್ ಯಂತ್ರ ಮತ್ತು ಲಿನ್ಯಾಕ್‌ ಯಂತ್ರ ಒದಗಿಸುವಂತೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಈಗಿರುವ ಲಿನ್ಯಾಕ್ ಯಂತ್ರದ ಅವಧಿ ಮುಂದಿನ ವರ್ಷ ಮುಗಿಯಲಿದೆ’ ಎಂದರು. 

‘ಕ್ಯಾನ್ಸರ್ ದೇಹದ ಯಾವ ಭಾಗದಲ್ಲಿದೆ, ದೇಹದ ಇತರ ಭಾಗಗಳಿಗೆ ಅದು ಹರಡಿದೆಯೇ ಎಂಬುದನ್ನು ಪೆಟ್‌ ಸ್ಕ್ಯಾನ್‌ ಮೂಲಕ ತಿಳಿಯಬಹುದು. ಉತ್ತರ ಕರ್ನಾಟಕ ಭಾಗದ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಯಂತ್ರ ಇಲ್ಲ’ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಈಗಾಗಲೇ ಒಂದು ಸಿಟಿ ಸ್ಕ್ಯಾನ್‌, ಎಂಆರ್‌ಐ ಸ್ಕ್ಯಾನಿಂಗ್ ಯಂತ್ರಗಳಿದ್ದು, ಇವು ಸಾಕಾಗುತ್ತಿಲ್ಲ. ಹೀಗಾಗಿ ಹೆಚ್ಚುವರಿಯಾಗಿ  ಇನ್ನೊಂದು ಸಿಟಿ ಸ್ಕ್ಯಾನ್‌, ಎಂಆರ್‌ಐ ಸ್ಕ್ಯಾನಿಂಗ್‌ ಯಂತ್ರ  ಅಳವಡಿಸಲಾಗುತ್ತಿದೆ. ಇದಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಕೆಎಂಸಿಆರ್‌ಐ ನರ್ಸಿಂಗ್ ಕಾಲೇಜಿನಲ್ಲಿ ಬಿಎಸ್‌ಸಿ ನರ್ಸಿಂಗ್ ಸೀಟುಗಳ ಸಂಖ್ಯೆ 200ಕ್ಕೆ ಏರಿಕೆ ಆಗಿದೆ. ₹20 ಕೋಟಿ ವೆಚ್ಚದಲ್ಲಿ ನೂತನ ನರ್ಸಿಂಗ್ ಹಾಸ್ಟೆಲ್‌ ಮತ್ತು ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧಪಡಿಸಿ ಮನವಿ ಸಲ್ಲಿಸಲಾಗಿದೆ.
ಡಾ.ಈಶ್ವರ ಹೊಸಮನಿ ನಿರ್ದೇಶಕ ಕೆಎಂಸಿಆರ್‌ಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.