ಹುಬ್ಬಳ್ಳಿ: ಆಟಗಾರರಿಗೆ ಉತ್ತಮ ಸೌಲಭ್ಯ ಒದಗಿಸಲು ಇಲ್ಲಿನ ರಾಜನಗರದಲ್ಲಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಕ್ರೀಡಾಂಗಣದಲ್ಲಿ ನಿರ್ಮಿಸಲಾಗುತ್ತಿರುವ ‘ಕ್ರೀಡಾ ಕೇಂದ್ರ’ (ಕ್ಲಬ್‌ಹೌಸ್) ಕಾಮಗಾರಿ ಎರಡೂವರೆ ವರ್ಷಗಳಿಂದ ನನೆಗುದಿಗೆ ಬಿದ್ದಿದೆ.
₹35 ಕೋಟಿ ಮೊತ್ತದ ಯೋಜನೆ ಇದಾಗಿದ್ದು, 2015–16ನೇ ಸಾಲಿನಲ್ಲಿ ಕಾಮಗಾರಿ ಆರಂಭವಾಗಿತ್ತು. 2022ರ ನವೆಂಬರ್‌ನಿಂದ ಕಾಮಗಾರಿ ಸ್ಥಗಿತವಾಗಿದೆ. ₹30 ಕೋಟಿ ಮೊತ್ತದ ಕಾಮಗಾರಿ ನಡೆದಿದ್ದು, ಚಾವಣಿಗೆ ಅಳವಡಿಸಿದ್ದ ಪಿಒಪಿ ಹಾಳಾಗಿದ್ದು, ಮಳೆ ನೀರು ಸೋರಿ ಗೋಡೆಗಳು ಪಾಚಿಗಟ್ಟಿವೆ. ಈಗಾಗಲೇ ಅಳವಡಿಸಿರುವ ಸಾಮಗ್ರಿಗಳು ಸಹ ಹಾಳಾಗಿವೆ.
ಆಟಗಾರರ ಡ್ರೆಸ್ಸಿಂಗ್ ಕೊಠಡಿ, ವೀಕ್ಷಕ ವಿವರಣೆಗಾರರ ಕೊಠಡಿ, ಈಜುಕೊಳ, ಆಟಗಾರರು ಉಳಿದುಕೊಳ್ಳಲು 60 ಬೆಡ್‌ಗಳ ಡಾರ್ಮೆಟರಿ, ಕ್ಲಬ್ ಸದಸ್ಯರಿಗಾಗಿ 22 ಕೊಠಡಿಗಳನ್ನು ನಿರ್ಮಿಸಲಾಗಿದೆ. ರೆಸ್ಟೋರೆಂಟ್, ಡೈನಿಂಗ್, ಕಿಚನ್, ಜಿಮ್, ಒಳವಿನ್ಯಾಸ ಸೇರಿದಂತೆ ಇನ್ನೂ ಕೆಲವು ಕಾಮಗಾರಿಗಳು ಬಾಕಿ ಇವೆ.
‘ಪಂದ್ಯಗಳು ನಡೆದಾಗ ಆಟಗಾರರು, ಸಿಬ್ಬಂದಿ ಉಳಿದುಕೊಳ್ಳಲು ಜಿಮ್ಖಾನ ಕ್ಲಬ್, ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಬಾಡಿಗೆಗೆ ಪಡೆಯಲಾಗುತ್ತಿದೆ. ಕ್ರೀಡಾ ಕೇಂದ್ರದ ಕಾಮಗಾರಿ ಪೂರ್ಣಗೊಂಡರೆ ಇಲ್ಲಿಯೇ ಆಟಗಾರರಿಗೆ ವ್ಯವಸ್ಥೆ ಕಲ್ಪಿಸಬಹುದು. ವೆಚ್ಚ ಸಹ ಉಳಿತಾಯವಾಗುತ್ತದೆ’ ಎಂದು ಕ್ರೀಡಾಪಟುಗಳು ತಿಳಿಸಿದರು.
‘ಕೆಎಸ್‌ಸಿಎ ಹೊಸ ಆಡಳಿತ ಮಂಡಳಿ ಬಂದ ನಂತರ ಅಭಿವೃದ್ಧಿ ಸ್ಥಗಿತವಾಗಿದೆ. ಬೆಂಗಳೂರು ಆಚೆಗೆ ಇರುವ ಕ್ರೀಡಾಂಗಣಗಳನ್ನು ಅಭಿವೃದ್ಧಿ ಪಡಿಸಲು ಕೆಎಸ್‌ಸಿಎ ಆಡಳಿತ ಮಂಡಳಿ ಆಸಕ್ತಿ ತೋರುತ್ತಿಲ್ಲ’ ಎಂದು ಕೋಚ್ ಪ್ರಮೋದ್ ಕಾಮತ್ ತಿಳಿಸಿದರು.
‘ಅಗತ್ಯ ಮೂಲಸೌಕರ್ಯ ಕಲ್ಪಿಸಿ ಉತ್ತರ ಕರ್ನಾಟಕ ಭಾಗವನ್ನು ಕ್ರಿಕೆಟ್ ಹಬ್ ಮಾಡಲಾಗುವುದು ಎಂದು ಕೆಎಸ್‌ಸಿಎಯ ಈ ಹಿಂದಿನ ಆಡಳಿತ ಮಂಡಳಿ ಹೇಳಿತ್ತು. ಮುಂಬೈನ ವಾಸ್ತುಶಿಲ್ಪಿಯನ್ನು ಕರೆಸಿ ಕ್ರೀಡಾ ಕೇಂದ್ರಕ್ಕೆ ವಿನ್ಯಾಸ ರೂಪಿಸಲಾಗಿತ್ತು. ಆದರೆ, ಹುಬ್ಬಳ್ಳಿಯ ಜತೆಗೆ ಆರಂಭವಾದ ಬೆಳಗಾವಿಯ ಕ್ರೀಡಾಕೇಂದ್ರದ (₹25 ಕೋಟಿ) ಕಾಮಗಾರಿಯೂ ಸ್ಥಗಿತವಾಗಿದೆ’ ಎಂದರು.
‘16.5 ಎಕರೆ ಕ್ರೀಡಾಂಗಣದ ಜಾಗ ಇದ್ದು, ಎಂಟು ಮುಖ್ಯ ಪಿಚ್, 10 ಅಭ್ಯಾಸ ಪಿಚ್ ಮತ್ತು 2 ಕಾಂಕ್ರೀಟ್ ಪಿಚ್‌ಗಳಿವೆ. ಶುಲ್ಕ ಪಾವತಿಸುತ್ತೇವೆ ಎಂದರೂ ಅಭ್ಯಾಸ ಪಂದ್ಯಗಳಿಗಾಗಿ ಕ್ರೀಡಾಂಗಣವನ್ನು ನೀಡುವುದಿಲ್ಲ. ಭಾರತ ‘ಎ’ ಮತ್ತು ನ್ಯೂಜಿಲೆಂಡ್ ‘ಎ’ ನಡುವಿನ ಪಂದ್ಯ, ಕೆಲವು ರಣಜಿ ಪಂದ್ಯಗಳನ್ನು ಹೊರತುಪಡಿಸಿದರೆ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಬಿಸಿಸಿಐ ಪಂದ್ಯಗಳು ನಡೆದಿಲ್ಲ. ಇಲ್ಲಿನ ಮೂಲಸೌಕರ್ಯ ಕೊರತೆಯೇ ಅದಕ್ಕೆ ಕಾರಣ’ ಎಂದು ದೂರಿದರು.
ಕಾಮಗಾರಿ ಪರಿಶೀಲನೆ ಬಾಕಿ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಸ್ಥಗಿತವಾಗಿರಬಹುದು. ನನಗೆ ಹೆಚ್ಚಿನ ಮಾಹಿತಿ ಇಲ್ಲ. ಕಾಮಗಾರಿ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನು ಕೆಎಸ್‌ಸಿಎ ಅಧ್ಯಕ್ಷರನ್ನೇ ಕೇಳಬೇಕುನಿಖಿಲ್ ಭೂಸದ್ ನಿಮಂತ್ರಕ ಕೆಎಸ್‌ಸಿಎ ಧಾರವಾಡ ವಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.