
ಹುಬ್ಬಳ್ಳಿ: ‘ಅವಳಿ ನಗರದಲ್ಲಿ ಎಲ್‌ಇಡಿ ಬೀದಿ ದೀಪ ಅಳವಡಿಕೆ ಯೋಜನೆಯ ಅನುಷ್ಠಾನಕ್ಕೆ ಟೆಂಡರ್ ಪಡೆದ ಕಂಪನಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಕಾಮಗಾರಿ ಆರಂಭಿಸದಿದ್ದರೆ ಠೇವಣಿ ಮೊತ್ತವನ್ನು ಮುಟ್ಟುಗೋಲು ಹಾಕಿ, ಕಂಪನಿಯನ್ನು ಕಪ್ಟುಪಟ್ಟಿಗೆ ಸೇರಿಸಲಾಗುವುದು’ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.
ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಮಾತನಾಡಿದ ಅವರು, ‘ಯೋಜನೆ ಅನುಷ್ಠಾನ ಕುರಿತು ಒಂದು ವಾರದಲ್ಲಿ ಸರ್ವಪಕ್ಷ ನಿಯೋಗ ತೆರಳಿ ಸಂಬಂಧಪಟ್ಟ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಈ ಬಗ್ಗೆ ಪಾಲಿಕೆ ವಿರೋಧ ಪಕ್ಷದ ನಾಯಕರು ದಿನಾಂಕ ನಿಗದಿಪಡಿಸಬೇಕು’ ಎಂದರು.
ಗಮನ ಸೆಳೆಯುವ ಸೂಚನೆ ವೇಳೆ ವಿಷಯ ಪ್ರಸ್ತಾಪಿಸಿದ ಸಭಾನಾಯಕ ಈರೇಶ ಅಂಚಟಗೇರಿ, ಎನರ್ಜಿ ಎಫಿಷಿಯನ್ಸಿ ಯೋಜನೆ ಅಡಿ ಸಾಂಪ್ರದಾಯಿಕ ಬೀದಿ ದೀಪಗಳನ್ನು ತೆಗೆದು ಎಲ್‌ಇಡಿ ಬೀದಿ ದೀಪ ಅಳವಡಿಕೆಗೆ ಟೆಂಡರ್ ಅಂತಿಮಗೊಂಡು ಆರು ತಿಂಗಳಾಗಿದ್ದು, ಸರ್ಕಾರದ ಅನುಮೋದನೆ ಸಿಕ್ಕು ಮೂರು ತಿಂಗಳಾಗಿದೆ. ಈವರೆಗೂ ಯೋಜನೆ ಅನುಷ್ಠಾನವಾಗಿಲ್ಲ ಎಂದು ದೂರಿದರು.
ಯೋಜನೆ ಜಾರಿಗೆ ಆಯುಕ್ತರು ಈವರೆಗೂ ಕಾರ್ಯಾದೇಶ ನೀಡಿಲ್ಲ. ಇದಕ್ಕೆ ಯಾವ ಶಾಸಕರು, ಸಚಿವರ ಒತ್ತಡ ಇದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ದೀಪಾವಳಿ ವೇಳೆಗೆ ಯೋಜನೆ ಅನುಷ್ಠಾನವಾಗಿ ನಗರದಲ್ಲಿ ಎಲ್‌ಇಡಿ ದೀಪಗಳು ಬೆಳಗುತ್ತವೆ ಎಂದು ಮೇಯರ್ ಹೇಳಿದ್ದರು. ಸಂಕ್ರಾಂತಿ ಹಬ್ಬದ ಒಳಗಾಗದರೂ ಯೋಜನೆ ಅನುಷ್ಠಾನವಾಗಬೇಕು. ವಲಯವಾರು ಟೆಂಡರ್ ಕರೆದು ಯೋಜನೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಟೆಂಡರ್ ಪಡೆದವರು ಷರತ್ತು ಉಲ್ಲಂಘಿಸಿದ್ದು, ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅಂಚಟಗೇರಿ ಒತ್ತಾಯಿಸಿದರು.
ಆಯುಕ್ತ ರುದ್ರೇಶ ಘಾಳಿ ಪ್ರತಿಕ್ರಿಯಿಸಿ, ಹೊಸ ನಿಯಮದ ಅನ್ವಯ ಟೆಂಡರ್ ಪಡೆದ ಕಂಪನಿ 94 ತಿಂಗಳ ಬ್ಯಾಂಕ್ ಗ್ಯಾರಂಟಿ (₹4.40 ಕೋಟಿ) ನೀಡಬೇಕಿದೆ. ಅವರು ಕೇವಲ 24 ತಿಂಗಳ ಬ್ಯಾಂಕ್ ಗ್ಯಾರಂಟಿ ನೀಡಿದ್ದಾರೆ. ಆ ಕಾರಣಕ್ಕೆ ಕಾರ್ಯಾದೇಶ ನೀಡಿಲ್ಲ. ಈ ಬಗ್ಗೆ ಕಂಪನಿಗೆ ನೋಟಿಸ್ ನೀಡಲಾಗಿದ್ದು, ಯಾರ ಒತ್ತಡವೂ ಇಲ್ಲ ಎಂದು ಹೇಳಿದರು.
ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ, ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಿಸಿದ ಸಚಿವರ ಬಳಿ ಸರ್ವ ಪಕ್ಷ ನಿಯೋಗ ಹೋಗಿ ಮನವಿ ಮಾಡೋಣ. ಇಲ್ಲದಿದ್ದರೆ ಯೋಜನೆ ಅನುಷ್ಠಾನ ವಿಳಂಬವಾಗುತ್ತದೆ ಎಂದರು.
ರಾಮಪ್ಪ ಬಡಿಗೇರ, ‘ನಾನು ಮೇಯರ್ ಆಗಿದ್ದಾಗ 15 ಬಾರಿ ಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಂಬಂಧಿಸಿದ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಅವರಿಂದ ಯಾವ ಸ್ಪಂದನೆಯೂ ಬರಲಿಲ್ಲ’
‘94 ತಿಂಗಳ ಬ್ಯಾಂಕ್ ಗ್ಯಾರಂಟಿ ನೀಡಬೇಕು ಎಂಬುದು ಟೆಂಡರ್ ನಿಯಮದಲ್ಲೇ ಇದೆ. ಅದು ಗೊತ್ತಿದ್ದೂ ಕಂಪನಿ ಟೆಂಡರ್‌ನಲ್ಲಿ ಏಕೆ ಭಾಗವಹಿಸಿತು ? ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಎಲ್ಲರೂ ಕತ್ತಲಲ್ಲಿ ಇದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಹೋದರೂ ಏನೂ ಆಗುವುದಿಲ್ಲ ಎಂದಿದ್ದಕ್ಕೆ ವಿಪಕ್ಷ ಸದಸ್ಯರು ಕೆರಳಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ನಡೆದ ಸ್ಮಾರ್ಟ್ ಹೆಲ್ತ್ ಕೇರ್ ಯೋಜನೆಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ನೀಡಿರುವ ವರದಿಯನ್ನು ಆಯುಕ್ತ ರುದ್ರೇಶ ಘಾಳಿ ಅವರು ಸಭೆಯಲ್ಲಿ ಓದಿದರು.
‘ಯೋಜನೆ ವಿಫಲವಾಗಿದ್ದು, ಸಾಕಷ್ಟು ನ್ಯೂನತೆಗಳು ಕಂಡು ಬಂದಿವೆ ಎಂಬುದು ಸಮಿತಿಯ ವರದಿಯಿಂದ ಸ್ಪಷ್ಟವಾಗಿದೆ. ಈ ವರದಿ ಆಧರಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಆಯುಕ್ತರು ಕ್ರಮ ಕೈಗೊಳ್ಳಬೇಕು’ ಎಂದು ತಿಪ್ಪಣ್ಣ ಮಜ್ಜಗಿ ಆಗ್ರಹಿಸಿದರು.
ಇಮ್ರಾನ್ ಯಲಿಗಾರ, ಬೀಡಾಡಿ ದನ, ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ₹2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಅದು ಎಷ್ಟರ ಮಟ್ಟಿಗೆ ಅನುಷ್ಠಾನವಾಗಿದೆ. ಅವಳಿ ನಗರದಲ್ಲಿ ದೂಳು ಹೆಚ್ಚಾಗಿದ್ದು, ಮಕ್ಕಳು, ವೃದ್ಧರು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಬೀದಿ ನಾಯಿಗಳನ್ನು ಹಿಡಿಯಲು ಒಂದೇ ಏಜೆನ್ಸಿ ಇದೆ. ಇನ್ನೊಂದು ಏಜೆನ್ಸಿಯನ್ನು ನೇಮಿಸಬೇಕು ಎಂದು ರಾಜಣ್ಣ ಕೊರವಿ ಹೇಳಿದರು.
ಬೀದಿ ನಾಯಿಗಳನ್ನು ಹಿಡಿದು ಲಸಿಕೆ ನೀಡಿ, ಅವುಗಳನ್ನು ಅಲ್ಲಿಯೇ ಬಿಡಬಾರದು. ‘ಡಾಗ್ ಪಾಂಡ್’ ಮಾಡಬೇಕು ಎಂಬ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನವಿದೆ. ಇದಕ್ಕಾಗಿ ಹುಬ್ಬಳ್ಳಿಗೆ ₹3 ಕೋಟಿ, ಧಾರವಾಡಕ್ಕೆ 2 ಕೋಟಿ ಸೇರಿ ₹5 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಆಯುಕ್ತ ರುದ್ರೇಶ ಘಾಳಿ ಹೇಳಿದರು.
‘ಪಾಲಿಕೆಯ 39 ಗುಂಟೆ ಜಾಗವನ್ನು ಕಾನೂನು ವಿ.ವಿಗೆ ನೀಡಲಾಗಿದೆ. ನಗರದ ಹಳೇ ಕೋರ್ಟ್ ಆವರಣದಲ್ಲಿರುವ ಕಟ್ಟಡವನ್ನು ಒಪ್ಪಂದದ ಪ್ರಕಾರ ಕಾನೂನು ಇಲಾಖೆ ಪಾಲಿಕೆಗೆ ನೀಡಬೇಕು. ಈ ಬಗ್ಗೆ ಕಾನೂನು ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿ, ಕಟ್ಟಡವನ್ನು ಪಡೆಯಲು ಪ್ರಯತ್ನಿಸೋಣ’ ಎಂದು ಮೇಯರ್ ಹೇಳಿದರು.
ಸದಸ್ಯ ನಜೀರ್ ಅಹ್ಮದ್ ಹೊನ್ಯಾಳ, ಪಡದಯ್ಯನ ಹಕ್ಕಲದಲ್ಲಿ ಕಸ ಸಂಗ್ರಹಿಸುವ ಆಟೊ ಟಿಪ್ಪರ್‌ಗಳನ್ನು ಮನೆಗಳ ಎದುರು ನಿಲ್ಲಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಗೋಕುಲ ರಸ್ತೆಯಲ್ಲಿ ಮಾಲ್‌ಗಳು ಹೆಚ್ಚಾಗಿದ್ದು ರಸ್ತೆ ಬದಿಯೇ ವಾಹನ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಕ್ರಮ ಜರುಗಿಸಬೇಕು
ಪಾಲಿಕೆಯ ಸದಸ್ಯರಿಗೆ ಸಿವಿಲ್ ಕಾಮಗಾರಿಗಾಗಿ ₹25 ಲಕ್ಷ ಮತ್ತು ಎಲೆಕ್ಟ್ರಿಕ್ ಕಾಮಗಾರಿಗಾಗಿ ₹10 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆಜ್ಯೋತಿ ಪಾಟೀಲ ಮೇಯರ್
ಭದ್ರತೆ ದೃಷ್ಟಿಯಿಂದ ಪ್ರಮುಖ ವೃತ್ತಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಬೇಕು. ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು ಈ ಬಗ್ಗೆ ಪೊಲೀಸ್ ಸಿಬ್ಬಂದಿ ಜತೆ ಸಭೆ ನಡೆಸಬೇಕುರಾಜಣ್ಣ ಕೊರವಿ ಸದಸ್ಯ
ನಾಯಿ ಕಚ್ಚಿದ ಪ್ರಕರಣಗಳಲ್ಲಿ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಮಾಡಬೇಕು. ಆಸ್ಪತ್ರೆಗಳಲ್ಲಿ ಈ ಪ್ರಕರಣಕ್ಕೆ ಅಗತ್ಯ ಔಷಧಗಳು ದಾಸ್ತಾನು ಇರುವಂತೆ ನೋಡಿಕೊಳ್ಳಬೇಕುಇಕ್ಬಾಲ್ ನವಲೂರು ಸದಸ್ಯ
ಗೋಕುಲ ರಸ್ತೆಯಲ್ಲಿ ಮಾಲ್‌ಗಳು ಹೆಚ್ಚಾಗಿದ್ದು ರಸ್ತೆ ಬದಿಯೇ ವಾಹನ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಕ್ರಮ ಜರುಗಿಸಬೇಕುರಾಮಪ್ಪ ಬಡಿಗೇರ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.