
ಬಂಧನ (ಸಾಂದರ್ಭಿಕ ಚಿತ್ರ)
ಹುಬ್ಬಳ್ಳಿ: ಕಳೆದ ತಿಂಗಳು ನಗರದ ಮಂಟೂರ ರಸ್ತೆಯ ಬ್ಯಾಳಿ ಪ್ಲಾಟ್ ಬಳಿ ನಡೆದಿದ್ದ ಮಲಿಕ್ ಜಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ರವಿ ಜಾಧವನನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಹೊರವಲಯದ ಅಂಚಟಗೇರಿಯ ಹೊಲವೊಂದರ ಶೆಡ್‌ನಲ್ಲಿ ರವಿ ಇದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಇನ್‌ಸ್ಪೆಕ್ಟರ್ ಎಸ್.ಆರ್. ನಾಯಕ ನೇತೃತ್ವದ ತಂಡ ದಾಳಿ ನಡೆಸಿ ಸೋಮವಾರ ಬಂಧಿಸಿದೆ. ಪ್ರಕರಣದಲ್ಲಿ ಒಟ್ಟು 16 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಂಟೂರ ರಸ್ತೆಯ ಎಂ.ಡಿ. ದಾವೂದ್ ಮತ್ತು ಸೆಟ್ಲಮೆಂಟ್‌ನ ಶ್ಯಾಮ್ ಜಾಧವ ಗುಂಪಿನ ಮಧ್ಯೆ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಶ್ಯಾಮ್ ಜಾಧವ ಗುಂಪಿನಲ್ಲಿ ಗುರುತಿಸಿಕೊಂಡಿದ್ದವರು ರೌಡಿ ದಾವೂದನ ಜೊತೆಗಿರುತ್ತಿದ್ದ ಮಲಿಕ್ ಜಾನ್ ಅವರನ್ನು ಚಾಕುವಿನಿಂದ ಇರಿತು ಕೊಲೆ ಮಾಡಿದ್ದರು. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಮಿಗೆ ₹30 ಲಕ್ಷ ವಂಚನೆ: ನಗರದ ರಿಯಲ್ ಎಸ್ಟೇಟ್ ಉದ್ಯಮಿ ವಿನೋದ ಅವರಿಗೆ ನಕಲಿ ಸಂದೇಶ ಕಳುಹಿಸಿದ ವ್ಯಕ್ತಿ, ₹30 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ವಿನೋದ ಅವರಿಗೆ ಅವರ ಕಂಪನಿ ವ್ಯವಸ್ಥಾಪಕ ಮಹ್ಮದ್ ಸಾದಿಕ್ ಹೆಸರಲ್ಲಿ ವಂಚಕ ನಕಲಿ ಸಂದೇಶ ರವಾನಿಸಿ, ತುರ್ತಾಗಿ ಹಣ ವರ್ಗಾಯಿಸುವಂತೆ ವಿನಂತಿಸಿದ್ದಾನೆ. ಅದನ್ನು ನಂಬಿ ಹಣ ವರ್ಗಾಯಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧನ: ಇಲ್ಲಿನ ಶಿವಸೋಮೇಶ್ವರ ನಗರದ ಮಹಿಳೆ ಜತೆ ಅನುಚಿತವಾಗಿ ವರ್ತಿಸಿ, ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕಸಬಾಪೇಟೆ ಠಾಣೆ ಪೊಲೀಸರು, ಹಳೇಹುಬ್ಬಳ್ಳಿಯ ಬಸವರಾಜ ಹೊಸಮನಿ ಅವರನ್ನು ಬಂಧಿಸಿದ್ದಾರೆ.
ಶಾರ್ಟ್ ಸರ್ಕಿಟ್, ಗಾದಿ ಅಂಗಡಿಗೆ ಬೆಂಕಿ: ಇಲ್ಲಿನ ಕೇಶ್ವಾಪುರದ ಬೆಂಗೇರಿಯಲ್ಲಿರುವ ರಾಜ ಗಾದಿ ವರ್ಕ್ಸ್ ಅಂಗಡಿ ಶಾರ್ಟ್ ಸರ್ಕಿಟ್‌ನಿಂದ ಸೋಮವಾರ ರಾತ್ರಿ ಹೊತ್ತಿ ಉರಿದಿದ್ದು, ಹತ್ತಿ, ಬಟ್ಟೆ ಹಾಗೂ ಗಾದಿ ಸಾಮಗ್ರಿಗಳೆಲ್ಲ ಸುಟ್ಟು ಭಸ್ಮವಾಗಿದೆ.
ರಾತ್ರಿ 8 ಗಂಟೆ ವೇಳೆ ಅಂಗಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದು ಪ್ರಯೋಜನವಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಕೇಶ್ವಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.