ADVERTISEMENT

ಹೊಸ ವರ್ಷ ಸ್ವಾಗತಕ್ಕೆ ಹುಬ್ಬಳ್ಳಿ ಸಜ್ಜು

ಮೋಜು–ಮಸ್ತಿ ನೆಪದಲ್ಲಿ ನಿಯಮ ಮೀರಿದರೆ ಕಠಿಣ ಕ್ರಮ: ಕಮಿಷನರ್‌ ಎನ್‌. ಶಶಿಕುಮಾರ್‌

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 4:48 IST
Last Updated 31 ಡಿಸೆಂಬರ್ 2025, 4:48 IST
ಹುಬ್ಬಳ್ಳಿಯಲ್ಲಿ ಮಂಗಳವಾರ ಹು–ಧಾ ಮಹಾನಗರ ಪೊಲೀಸರು ಹೊಸ ವರ್ಷಾಚರಣೆ ಹಾಗೂ ಮಾದಕ ವಸ್ತುಗಳ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲು ಬೈಕ್‌ ರ‍್ಯಾಲಿ ನಡೆಸಿದರು      –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಮಂಗಳವಾರ ಹು–ಧಾ ಮಹಾನಗರ ಪೊಲೀಸರು ಹೊಸ ವರ್ಷಾಚರಣೆ ಹಾಗೂ ಮಾದಕ ವಸ್ತುಗಳ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲು ಬೈಕ್‌ ರ‍್ಯಾಲಿ ನಡೆಸಿದರು      –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಹೊಸ ವರ್ಷದ ಸ್ವಾಗತಕ್ಕೆ ಹುಬ್ಬಳ್ಳಿ ಮಹಾನಗರ ಜನರು ಸಜ್ಜಾಗಿದ್ದು, ಐಷಾರಾಮಿ ಹಾಗೂ ಪ್ರಮುಖ ಹೋಟೆಲ್‌ಗಳು ವಿದ್ಯುದ್ದೀಪಗಳಿಂದ ಸಿಂಗಾರಗೊಂಡಿವೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಇಲಾಖೆ ನಗರದಾದ್ಯಂತ ಕಟ್ಟೆಚ್ಚರ ವಹಿಸಿದ್ದು, ಆಯ ಕಟ್ಟಿನ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್‌ ಮಾಡಿಕೊಂಡಿದೆ.

ಕೆಲ ಬಡಾವಣೆಗಳಲ್ಲಿನ ಸಂಘಟನೆಗಳು ಸುತ್ತಮುತ್ತಲಿನವರ ಜೊತೆ ಸೇರಿ ರಾತ್ರಿ ಪಾರ್ಟಿಗೆ ಯೋಜನೆ ರೂಪಿಸಿದ್ದರೆ, ಯುವಕರು ನಗರದ ಹೊರವಲಯದ ಹೊಲಗಳಲ್ಲಿ ಭರ್ಜರಿ ಪಾರ್ಟಿಗೆ ಸಿದ್ಧವಾಗಿದ್ದಾರೆ. ಗ್ರಾಹಕರನ್ನು ಆಕರ್ಷಿಸಲು ಕೆಲ ಹೋಟೆಲ್‌ಗಳು, ಸಂಗೀತ ರಾತ್ರಿ, ರೇನ್‌ ಡಾನ್ಸ್, ಡಿಜೆ ವ್ಯವಸ್ಥೆ ಮಾಡಿಕೊಂಡು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಕೆಲ ಹೋಟೆಲ್‌ಗಳಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ತಲಾ ₹2 ಸಾವಿರದಿಂದ ₹3ಸಾವಿರದವರೆಗೆ ಶುಲ್ಕ ನಿಗದಿಪಡಿಸಲಾಗಿದೆ. ಮಾಂಸಾಹಾರ, ಸಸ್ಯಾಹಾರದ ಜೊತೆಗೆ ತರಹೇವಾರಿ ಭಕ್ಷ್ಯಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು ಕೆಲವು ಹೋಟೆಲ್‌ಗಳು ಪ್ರವೇಶ ಶುಲ್ಕ ₹600 ರಿಂದ ₹1000ದವರೆಗೆ ನಿಗದಿಪಡಿಸಿ, ಹೊರಗಡೆಯಿಂದ ಊಟ ತರಲು ಅವಕಾಶ ಕಲ್ಪಿಸಿವೆ.

ADVERTISEMENT

ಈಗಾಗಲೇ ಯುವಕರು ಹಾಗೂ ಕುಟುಂಬದ ಕೆಲವು ಸದಸ್ಯರು ಹೋಟೆಲ್‌, ರೆಸಾರ್ಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಇನ್ನು ಕೆಲವರು ಉತ್ತರ ಕನ್ನಡ, ಗೋವಾ ಕಡೆಗೆ ಪ್ರವಾಸಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಬೇಕರಿ ಅಂಗಡಿಗಳಲ್ಲಿ ವೈವಿಧ್ಯಮಯ ಕೇಕ್‌ಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಚಾಕಲೆಟ್‌, ಫೈನಾಪಲ್‌, ಸ್ಟ್ರಾಬೇರಿ, ವೆನಿಲ್ಲಾ, ಬಟರ್‌ ಸ್ಕಾಚ್‌, ಪಿಸ್ತಾ, ಕೋಲ್ಡ್‌ ಕೇಕ್‌ಗಳ ಖರೀದಿ ಜೋರಾಗಿದೆ. ಪಟಾಕಿ ಮಳಿಗೆಗಳಲ್ಲಿ ಸಿಡಿಮದ್ದುಗಳು ಹಾಗೂ ಮದ್ಯದ ಅಂಗಡಿಗಳಲ್ಲಿ ಮದ್ಯದ ಮಾರಾಟ ಹೆಚ್ಚಾಗಿದೆ.

ಜಾಗೃತಿ ರ‍್ಯಾಲಿ: ಹೊಸ ವರ್ಷದ ಹಿನ್ನೆಲೆ ಹಾಗೂ ಮಾದಕ ವಸ್ತುಗಳ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು ಮಂಗಳವಾರ ನಗರದಲ್ಲಿ ಬೈಕ್ ರ‍್ಯಾಲಿ ನಡೆಸಿದರು. ಕಮಿಷನರ್ ಎನ್‌. ಶಶಿಕುಮಾರ್‌, ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್. ಹಾಗೂ ಠಾಣಾಧಿಕಾರಿಗಳು ಪಾಲ್ಗೊಂಡಿದ್ದರು.

ಭದ್ರತೆಗೆ 2 ಸಾವಿರ ಸಿಬ್ಬಂದಿ: ‘ಹೊಸ ವರ್ಷದ ಸಂಭ್ರಮಾಚರಣೆಗೆ ಸರ್ಕಾರದ ನಿಯಮಾವಳಿಯಲ್ಲಿ ಯಾವುದೇ ಸಡಿಲಿಕೆಯಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತ 2 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆ ಕೈಗೊಳ್ಳಲಾಗುವುದು’ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ತಿಳಿಸಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ವ್ಯಾವಹಾರಿಕವಾಗಿ ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸುವವರು ಕಟ್ಟುನಿಟ್ಟಾಗಿ ನಿಯಮಾವಳಿಗಳನ್ನು ಪಾಲಿಸಬೇಕು’ ಎಂದರು.

ದಿವ್ಯ ಪ್ರಭು ಜಿಲ್ಲಾಧಿಕಾರಿ
ಕಾನೂನು ಪರಿಧಿಯೊಳಗೆ ಹೊಸ ವರ್ಷದ ಸಂಭ್ರಮಾಚರಣೆ ಶಾಂತಿಯುತವಾಗಿ ನಡೆಸಬೇಕು ಎಂದು ಜನರಲ್ಲಿ ವಿನಂತಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಪೊಲೀಸ್‌ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ
–ದಿವ್ಯಪ್ರಭು ಜಿಲ್ಲಾಧಿಕಾರಿ

25 ಕಡೆ ಚೆಕ್‌ ಪೋಸ್ಟ್‌: ಕಮಿಷನರ್‌

‘ಕಾರ್ಯಕ್ರಮ ಆಯೋಜಕರು ಪೊಲೀಸ್‌ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ರಾತ್ರಿ 10ರ ನಂತರ ಡಿಜೆ ಬಳಕೆ ನಿಷಿದ್ಧ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಹಾಗೂ ವೀಲಿಂಗ್‌ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ನಗರದಾದ್ಯಂತ 25 ಕಡೆ ಚೆಕ್‌ ಪೋಸ್ಟ್‌ ಹಾಕಿ ಕಾರ್ಯಾಚರಣೆ ನಡೆಸಲಾಗುವುದು. ಸಿಸಿಟಿವಿ ಕ್ಯಾಮೆರಾಗಳಲ್ಲಿ ನಿರಂತರ ಪರಿಶೀಲನೆ ನಡೆಸಲು ಪ್ರತ್ಯೇಕ ತಂಡ ರಚಿಸಲಾಗಿದೆ’ ಎಂದು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಹೇಳಿದರು.

ಶ್ರೀರಾಮ ಸೇನೆ ಮನವಿ

‘ಹೊಸ ವರ್ಷಾಚರಣೆ ನೆಪದಲ್ಲಿ ಡಿ. 31ರ ರಾತ್ರಿ ಡಿಜೆ ಹಚ್ಚಿ ಸಾರ್ವಜನಿಕ ಸ್ಥಳದಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಅವಕಾಶ ನೀಡಬಾರದು’ ಎಂದು ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಪೊಲೀಸ್‌ ಕಮಿಷನರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರಮುಖರಾದ ಅಣ್ಣಪ್ಪ ದಿವಟಗಿ ಮಂಜು ಕಾಟಕರ ಬಸು ದುರ್ಗದ ಕರಣ ಶಿಕ್ಕಲಗಾರ ವೆಂಕಟೇಶ ದಾಸರ ಚಂದ್ರು ಕೋಳೂರ ವಿಠ್ಠಲ ಮಿಸ್ಕಿನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.