ADVERTISEMENT

ಫೋನ್‌ ನಂಬರ್‌ ಬ್ಲಾಕ್‌ ಲಿಸ್ಟ್‌ಗೆ: ದೂರು

‘ಮೇಯರ್‌ ಜೊತೆ ಮಾತುಕತೆ’ ಫೋನ್‌ಇನ್‌: 33 ದೂರು, ಪರಿಹಾರಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 4:54 IST
Last Updated 6 ನವೆಂಬರ್ 2025, 4:54 IST
ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಮೇಯರ್‌ ಕಚೇರಿಯಲ್ಲಿ ಬುಧವಾರ ‘ಮೇಯರ್‌ ಜೊತೆ ಮಾತುಕತೆ’ ಫೋನ್‌ಇನ್‌ ಕಾರ್ಯಕ್ರಮ ನಡೆಯಿತು
ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಮೇಯರ್‌ ಕಚೇರಿಯಲ್ಲಿ ಬುಧವಾರ ‘ಮೇಯರ್‌ ಜೊತೆ ಮಾತುಕತೆ’ ಫೋನ್‌ಇನ್‌ ಕಾರ್ಯಕ್ರಮ ನಡೆಯಿತು ಪ್ರಜಾವಾಣಿ ಚಿತ್ರ   

ಪ್ರಜಾವಾಣಿ ವಾರ್ತೆ

ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯಿಂದ ‘ಮೇಯರ್‌ ಜೊತೆ ಮಾತುಕತೆ’ ಹತ್ತನೇ ಆವೃತ್ತಿಯ ಫೋನ್‌ಇನ್‌ ಕಾರ್ಯಕ್ರಮ ಬುಧವಾರ ಪಾಲಿಕೆಯ ಮೇಯರ್‌ ಕಚೇರಿಯಲ್ಲಿ ನಡೆಯಿತು. ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಒಟ್ಟು 33 ದೂರುಗಳು ಬಂದವು. ಅದರಲ್ಲಿ ಬಹುತೇಕ ಬೀದಿದೀಪಕ್ಕೆ ಸಂಬಂಧಿಸಿದ ಸಮಸ್ಯೆಗಳೇ ಇದ್ದವು.

ಹಾಳಾದ ರಸ್ತೆ, ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ, ಒಳಚರಂಡಿ ಸಮಸ್ಯೆ, ರಸ್ತೆ ಬದಿ ತ್ಯಾಜ್ಯ ಸಂಗ್ರಹ, ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣ, ಬೀದಿ ನಾಯಿ ಹಾವಳಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರು ಗಮನ ಸೆಳೆದರು.

ADVERTISEMENT

ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದರೂ ಪ್ರಯೋಜವಿಲ್ಲ. ಕೆಲವು ಅಧಿಕಾರಿಗಳಿಗೆ ಕರೆ ಮಾಡಿದರೆ, ನಮ್ಮ ನಂಬರನ್ನೇ ಬ್ಲಾಕ್‌ ಲೀಸ್ಟ್‌ಗೆ ಹಾಕುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದರು.

ಕರ್ಕಿಬಸವೇಶ್ವರ ನಗರ ಹಾಗೂ ರವಿನಗರದ ಹೌಸಿಂಗ್‌ ಬೋರ್ಡ್‌ನಿಂದ ಕರೆ ಮಾಡಿದ ಸಾರ್ವಜನಿಕರು, ‘ವಾರಕ್ಕೊಮ್ಮೆ ಕುಡಿಯುವ ನೀರನ್ನು ಮಧ್ಯರಾತ್ರಿ ಪೂರೈಕೆ ಮಾಡಲಾಗುತ್ತಿದೆ.  ನೀರಿಗಾಗಿ ನಿದ್ದೆ ಬಿಟ್ಟು ಕಾದು ಕುಳಿತುಕೊಳ್ಳಬೇಕು. ಹಗಲಿನ ವೇಳೆ ಪೂರೈಸುವಂತೆ ವಿನಂತಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೃಪತುಂಗ ಬೆಟ್ಟ, ಅಮರನಗರ, ಸಪ್ತಗಿರಿ ಬಡಾವಣೆ, ಶಿಮ್ಲಾನಗರ, ನೇಕಾರ ನಗರ, ಕೇಶ್ವಾಪುರ ಭಾಗದ ಸಾರ್ವಜನಿಕರು ಬೀದಿ ದೀಪ ಸಮಸ್ಯೆ ಕುರಿತು ಅಳಲು ತೋಡಿಕೊಂಡರು. ‘ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರ ಮಾಡುವಾಗ ಸಮಸ್ಯೆಯಾಗುತ್ತದೆ. ಸಹಾವಾಣಿಗೆ ಕರೆ ಮಾಡಿದರೂ, ಪರಿಹಾರ ಸಿಗುತ್ತಿಲ್ಲ’ ಎಂದರು.

ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ಮೇಯರ್‌ ಜ್ಯೋತಿ ಪಾಟೀಲ,  ಬೀದಿ ದೀಪ, ಗಟಾರದಂತಹ ಸಮಸ್ಯೆಗಳನ್ನು 24 ಗಂಟೆಯೊಳಗೆ ಪರಿಹರಿಸಬೇಕು. ಸಹಾಯವಾಣಿಗೆ ಬಂದ ದೂರುಗಳನ್ನು ಪರಿಶೀಲಿಸಿ, ತುರ್ತು ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ಭರವಸೆ ನೀಡಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕರಿಂದ ಬೀದಿ ದೀಪ ಸಮಸ್ಯೆ ಕುರಿತಾದ ಕರೆಗಳೇ ಹೆಚ್ಚಿಗೆ ಬಂದಿದ್ದು, ಶೀಘ್ರ ಪರಿಹಾರ ಸೂಚಿಸಲಾಗುವುದು. ಅಲ್ಲದೆ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಿಂದಾಗಿ ಸಾರ್ವಜನಿಕರ ಕೆಲಸಗಳು ವಿಳಂಬವಾಗಿದೆ’ ಎಂದರು.

‘ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ, ಹಳೇ ಪೈಪ್‌ಲೈನ್ ದುರಸ್ತಿ ಮಾಡುತ್ತಿದ್ದೇವೆ. ಹಳೇ ಹುಬ್ಬಳ್ಳಿ ಭಾಗದಲ್ಲಿ ಹೆಚ್ಚಾಗಿ ಪೈಪ್‌ಗಳು ಸೋರಿಕೆಯಾಗುವುದರಿಂದ, ಕೆಲವು ಭಾಗದಲ್ಲಿ ನೀರು ನಿಧಾನವಾಗಿ ಹೋಗುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ತಡವಾಗಿ ಬಂದ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಆಯುಕ್ತ ರುದ್ರೇಶ ಘಾಳಿ, ‘ಉದ್ದೇಶಪೂರ್ವಕವಾಗಿ ತಡವಾಗಿ ಬರುತ್ತಿದ್ದೀರಿ. ವಲಯಾಧಿಕಾರಿಗಳಿಗೂ ಗಂಭೀರತೆ ಇಲ್ಲವಾಗಿದೆ.  ಮುಂದಿನ ಕಾರ್ಯಕ್ರಮಕ್ಕೆ ಬೆಳಿಗ್ಗೆ 10.45ರ ಒಳಗೆ ಇಲ್ಲಿರಬೇಕು. ಇಲ್ಲಿದ್ದರೆ, ನೋಟಿಸ್‌ ನೀಡಲಾಗುವುದು’ ಎಂದರು.

ಉಪಮೇಯರ್‌ ಸಂತೋಷ ಚವ್ಹಾಣ್‌, ಉಪ ಆಯುಕ್ತ ವಿಜಯಕುಮಾರ, ಮುಖ್ಯ ಎಂಜಿನಿಯರ್‌ ಸಂತೋಷ ಯರಂಗಳಿ ಸೇರಿ ವಲಯಾಧಿಕಾರಿಗಳು ಇದ್ದರು.

Cut-off box - ‘ಹರಾಜು ಕರೆದು ಮಳಿಗೆ ಹಂಚಿಕೆ’ ‘ಸಿಬಿಟಿಯಲ್ಲಿ ನಿರ್ಮಿಸಲಾಗಿರುವ ಮೀನು ಮಾರುಕಟ್ಟೆಯನ್ನು ಮೀನು ಮಾರಾಟಗಾರರ ಸಂಘ ತಮಗೆ ನೀಡಿ ಎನ್ನುತ್ತಿದೆ. ಹರಾಜಿನಲ್ಲಿ ಪಡೆಯುವಂತೆ ಹೇಳಿದ್ದೇವೆ. ಮೂರು ಬಾರಿ ಹರಾಜು ಕರೆದರೂ ಮಳಿಗೆ ಬಾಡಿಗೆ ಪಡೆಯಲು ಯಾರೂ ಬಂದಿಲ್ಲ. ಜನತಾ ಬಜಾರ್‌ ಮಾರುಕಟ್ಟೆಯಲ್ಲಿನ ಖಾಲಿ ಮಳಿಗೆಗಳನ್ನು ಎರಡು ದಿನಗಳಲ್ಲಿ ಹರಾಜು ಮೂಲಕ ಹಂಚಿಕೆ ಮಾಡಲಾಗುವುದು’ ಎಂದು ಆಯುಕ್ತ ರುದ್ರೇಶ ಘಾಳಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.