
ಹುಬ್ಬಳ್ಳಿ: ಇಲ್ಲಿನ ಚಾಣಕ್ಯಪುರಿ ಮತ್ತು ಕಾರವಾರ ರಸ್ತೆಯ ಪೊಲೀಸ್ ಕ್ವಾರ್ಟರ್ಸ್‌ನಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮನೆ ಬಾಗಿಲ ಬೀಗ ಮುರಿದು, ಒಳಗೆ ನುಗ್ಗಿರುವ ಕಳ್ಳರು ಚಿನ್ನಾಭರಣ ಹಾಗೂ ನಗದು ಕಳವು ಮಾಡಲಾಗಿದೆ.
ಚಾಣಕ್ಯಪುರಿಯ ಯಲ್ಲಪ್ಪ ದೊಡ್ಡಮನಿ ಅವರ ಮನೆಯಲ್ಲಿ 40 ಗ್ರಾಂ ತೂಕದ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ ₹40 ಸಾವಿರ ನಗದು ಕಳವು ಮಾಡಲಾಗಿದೆ. ಅಲ್ಲದೆ, ಸಿಎಆರ್ ಮೈದಾನದ ಬಳಿಯ ಸುನೀಲಕುಮಾರ ಲಂಬಾಣಿ ಅವರ ಮನೆಯಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣ ಕಳವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಉಪನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಕಾಲುವೆಗೆ ಬಿದ್ದ ಕಾರು; ಯುವಕ ಸಾವು: ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಬಿದ್ದು ಒಬ್ಬ ಮೃತಪಟ್ಟು, ಮತ್ತೊಬ್ಬ ನಾಪತ್ತೆಯಾದ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಯರಿಗೇರಿ ಗ್ರಾಮದ ಬಳಿ ಭಾನುವಾರ ನಡೆದಿದೆ.
ಹುಬ್ಬಳ್ಳಿಯ ಸುನಿಲ (21) ಮೃತಪಟ್ಟಿದ್ದು, ಮಣಿಕಂಠ ನಾಪತ್ತೆಯಾಗಿದ್ದಾರೆ. ಸ್ಥಳೀಯ ಜನರು ಮತ್ತು ಎಸ್‌ಡಿಆರ್‌ಎಫ್ ತಂಡದವರು ಕಾರ್ಯಾಚರಣೆ ನಡೆಸಿ ಕಾರಿನಲ್ಲಿದ್ದ ಹುಪ್ಪಯ್ಯ, ಮಂಜುನಾಥ, ಅವಿನಾಶ ಹಾಗೂ ಇಂದೂಧರ ಅವರನ್ನು ರಕ್ಷಿಸಿದ್ದಾರೆ. ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿದ್ದಾಗ ಅವಘಡ ಸಂಭವಿಸಿದೆ. ನಾಪತ್ತೆಯಾದ ಯುವಕನ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ: ಬಸ್ ನಿಲ್ದಾಣಕ್ಕೆ ಬಿಡುವುದಾಗಿ ಪ್ರಯಾಣಿಕರೊಬ್ಬರನ್ನು ಆಟೊದಲ್ಲಿ ಕರೆದುಕೊಂಡ ಬಂದ ಚಾಲಕ, ಸಹಚರರನ್ನು ಕರೆಸಿಕೊಂಡು ಆತನ ಮೇಲೆ ಹಲ್ಲೆ ನಡೆಸಿ ₹58 ಸಾವಿರ ನಗದು ಕಿತ್ತುಕೊಂಡು ಜೀವ ಬೆದರಿಕೆ ಹಾಕಿರುವ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲ್ಲಾಪುರದ ದಿನೇಶ ಕಲಾನಿ ಹಲ್ಲೆಗೊಳಗಾದವರು. ಅವರು ಗದಗಿನಿಂದ ಹುಬ್ಬಳ್ಳಿಗೆ ಶನಿವಾರ ರಾತ್ರಿ 12.30ಕ್ಕೆ ಬಂದಿದ್ದು, ಬಸ್ ನಿಲ್ದಾಣಕ್ಕೆ ಹೋಗಲು ಆಟೊ ಹತ್ತಿದ್ಧಾರೆ. ಚಾಲಕ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದ. ನಂತರ ಹಲ್ಲೆ ನಡೆಸಿ ಹಣ ದೋಚಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸರ ಕಳವು: ಇಲ್ಲಿನ ಕೇಶ್ವಾಪುರದ ಪ್ರಸನ್ನ ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿದ್ದ ರೇವತಿ ಶಿಂಧೆ ಅವರ ಕೊರಳಲ್ಲಿದ್ದ ₹80 ಸಾವಿರ ಮೌಲ್ಯದ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.