
ಹುಬ್ಬಳ್ಳಿ: ‘ರಾಜ್ಯವನ್ನು ಮಾದಕ ವಸ್ತು ಮುಕ್ತವಾಗಿಸುವುದು ಸರ್ಕಾರದ ಮುಖ್ಯ ಗುರಿ. ಮಾದಕ ವಸ್ತು ಜಾಲವನ್ನು ಬೇರುಸಹಿತ ಕಿತ್ತುಹಾಕಲು ಪೊಲೀಸ್ ಇಲಾಖೆ ಕೈಗೊಳ್ಳುವ ಕಟ್ಟುನಿಟ್ಟಿನ ಕ್ರಮದ ಅರಿವು ಮೂಡಿಸುವುದೇ ಪೊಲೀಸ್ ರನ್ ಉದ್ದೇಶ’ ಎಂದು ಜಿಲ್ಲಾಧಿಕಾರಿ ಆರ್. ಸ್ನೇಹಲ್ ಹೇಳಿದರು.
ನಗರದ ತೋಳನಕೆರೆ ಬಳಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಮತ್ತು ಧಾರವಾಡ ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಶೀರ್ಷಿಕೆಯಡಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ‘ಪೊಲೀಸ್ ರನ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಯುವ ಪೀಳಿಗೆಯನ್ನು ಮಾದಕ ವಸ್ತು ವ್ಯಸನದಿಂದ ರಕ್ಷಿಸುವುದು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಆದ್ಯತೆ’ ಎಂದರು.
‘ಫಿಟ್ನೆಸ್ ಫಾರ್ ಆಲ್’, ‘ಡ್ರಗ್ ಮುಕ್ತ ಕರ್ನಾಟಕ’ ಮತ್ತು ‘ಸೈಬರ್ ಕ್ರೈಂ ಜಾಗೃತಿ’ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಓಟದಲ್ಲಿ ನೂರಾರು ಜನರು ಭಾಗಿಯಾದರು. ‘ರಸ್ತೆ ಸುರಕ್ಷೆ ಜೀವನ ರಕ್ಷೆ’ ಎಂಬ ಘೋಷವಾಕ್ಯದಡಿ, 10 ಕಿ.ಮೀ. ಮತ್ತು 5 ಕಿ.ಮೀ. ವಿಭಾಗದ ಓಟಕ್ಕೆ ಬಲೂನ್ ಹಾರಿಸಿ ಚಾಲನೆ ನೀಡಲಾಯಿತು.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಡಿಸಿಪಿ ರವೀಶ್ ಸಿ.ಆರ್., ಉದ್ಯಮಿ ವಿ.ಎಸ್.ವಿ. ಪ್ರಸಾದ ಹಾಜರಿದ್ದರು.
ಚಿಕ್ಕ ಮಕ್ಕಳು, ಯುವಜನರು, ಮಹಿಳೆಯರು, ವಯಸ್ಕರು ಭಾಗವಹಿಸಿದ್ದರು. ವಿಜೇತರಿಗೆ ನಗದು ಬಹುಮಾನ, ಟ್ರೋಫಿ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.