
ಹುಬ್ಬಳ್ಳಿ: ‘ಈಗಿರುವ ರಾಣಿ ಚನ್ನಮ್ಮ ಪ್ರತಿಮೆಯನ್ನು ಸ್ಥಳಾಂತರಿಸಿ, ಹೊಸ ಮಾದರಿಯ ಪ್ರತಿಮೆ ಪ್ರತಿಷ್ಠಾಪಿಸುವ ಭರವಸೆಯನ್ನು ಮೇಲ್ಸೇತುವೆ ಕಾಮಗಾರಿಗೂ ಮುನ್ನ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಈ ನಿರ್ಣಯದ ವಿರುದ್ಧವೇನಾದರೂ ನಡೆದುಕೊಂಡರೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಪಂಚಮಸಾಲಿ ಸಮಾಜದ ಮುಖಂಡ ರಾಜಶೇಖರ ಮೆಣಸಿನಕಾಯಿ ಎಚ್ಚರಿಸಿದ್ದಾರೆ.
‘ಸಮಾಜದ ಮುಖಂಡರಿಗೆ ಅಧಿಕಾರಿಗಳು ಕೊಟ್ಟ ಮಾತಿನಂತೆಯೇ ನಡೆದುಕೊಳ್ಳಬೇಕು. ರಾಣಿ ಚನ್ನಮ್ಮ ಪ್ರತಿಮೆ ಹುಬ್ಬಳ್ಳಿಯ ಗೌರವದ ಹಾಗೂ ಹೆಮ್ಮೆಯ ಪ್ರತೀಕ. ಮೇಲ್ಸೇತುವೆ ಕಾಮಗಾರಿಯಿಂದಾಗಿ ಅದು ಅಸ್ತಿತ್ವವನ್ನೇ ಕಳೆದುಕೊಂಡಿದೆ. ಕಾಮಗಾರಿ ಮುಕ್ತಾಯವಾದ ನಂತರ ಗೌರವಯುತವಾಗಿ ಅದೇ ಜಾಗದಲ್ಲಿ ಹೊಸ ಮಾದರಿಯ ಪ್ರತಿಮೆ ಪ್ರತಿಷ್ಠಾಪಿಸಬೇಕು’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
‘ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು, ಸಮಾಜದ ಮುಖಂಡ ಬಸವರಾಜ ಹೊರಟ್ಟಿ ಹಾಗೂ ಸಂಸದ ಜಗದೀಶ ಶೆಟ್ಟರ್ ಅವರಿಗೆ, ‘ಅದೇ ಸ್ಥಳದಲ್ಲಿ ಹೊಸ ಮಾದರಿಯ ಪ್ರತಿಮೆ ಪ್ರತಿಷ್ಠಾಪಿಸಿ, ಚನ್ನಮ್ಮ ಹಾಗೂ ಸಮಾಜದ ಗೌರವ ಕಾಪಾಡುವುದಾಗಿ ಹೇಳಿದ್ದರು. ಅದಕ್ಕೆ ಪೂರಕವಾಗಿ ನಕ್ಷೆಯನ್ನು ಸಹ ಸಿದ್ಧಪಡಿಸಿ, ತೋರಿಸಿದ್ದರು. ಸಮಾಜಕ್ಕೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಳ್ಳದೆ, ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪಿಸಬೇಕು’ ಎಂದು ವಿನಂತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.