ADVERTISEMENT

₹100 ಕೋಟಿಯಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ: ಶಾಸಕ ಮಹೇಶ ಟೆಂಗಿನಕಾಯಿ

ಪಾಲಿಕೆಯ ಸರ್ವ ಪಕ್ಷಗಳ ಸದಸ್ಯರ ಸಭೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 4:30 IST
Last Updated 4 ಡಿಸೆಂಬರ್ 2025, 4:30 IST
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ಸರ್ವ ಪಕ್ಷಗಳ ಸದಸ್ಯರ ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ಸರ್ವ ಪಕ್ಷಗಳ ಸದಸ್ಯರ ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು   

ಹುಬ್ಬಳ್ಳಿ: ‘ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ₹100 ಕೋಟಿ ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಹುಬ್ಬಳ್ಳಿಯಲ್ಲಿನ ಹು-ಧಾ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ನಡೆದ ಪಾಲಿಕೆಯ ಸರ್ವ ಪಕ್ಷಗಳ ಸದಸ್ಯರ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕೇಂದ್ರ ಸರ್ಕಾರದ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರ ಜತೆ ಚರ್ಚಿಸಲಾಗಿದ್ದು, ಅನುದಾನ ಕೋರಿ ಶೀಘ್ರ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ರಸ್ತೆ ಕಾಮಗಾರಿ ಆರಂಭವಾಗುವುದಕ್ಕೂ ಮುನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ 24X7 ಕುಡಿಯುವ ನೀರು ಪೂರೈಕೆ ಯೋಜನೆಯ ಪೈಪ್‌ಲೈನ್‌ ಅಳವಡಿಕೆ, ಒಳಚರಂಡಿ ಹಾಗೂ ಗ್ಯಾಸ್ ಪೈಪ್‌ ಅಳವಡಿಕೆ ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಸಂಬಂಧಿಸಿದ ಅಧಿಕಾರಿಗಳು, ಎಲ್‌ ಆ್ಯಂಡ್ ಕಂಪನಿ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದರು. 

‘24X7 ನೀರು ಪೂರೈಕೆ ಯೋಜನೆ ಕಾಮಗಾರಿಯನ್ನು ತ್ವರಿತಗೊಳಿಸಬೇಕು. 3–4 ದಿನಗಳಿಗೊಮ್ಮೆ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಪೈಪ್‌ಲೈನ್ ಅಳವಡಿಕೆಗೆ ರಸ್ತೆ ಅಗೆದ ನಂತರ ಅದನ್ನು ಮರು ನಿರ್ಮಾಣ ಮಾಡಬೇಕು’ ಎಂದು ಹೇಳಿದರು.  

ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿ ನಗರದ ಬಡಾವಣೆಯನ್ನು ಸ್ವಚ್ಛಗೊಳಿಸಲು ಯೋಜನೆ ರೂಪಿಸಲಾಗುತ್ತಿದ್ದು, ಈ ಬಗ್ಗೆ ಬೆಳಗಾವಿ ಅಧಿವೇಶನದ ಬಳಿಕ ಸಭೆ ನಡೆಸಿ ಚರ್ಚಿಸಲಾಗುವುದು. ಸೆಂಟ್ರಲ್ ಕ್ಷೇತ್ರದಲ್ಲಿ ಐದು ಪ್ರಮುಖ ವೃತ್ತಗಳಿದ್ದು, ಅವುಗಳ ಸೌಂದರ್ಯೀಕರಣಕ್ಕೆ  ಕ್ರಮ ಕೈಗೊಳ್ಳಲಾಗುವುದು ಎಂದರು.

ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ್‌, ಪಾಲಿಕೆ ಆಯುಕ್ತ  ರುದ್ರೇಶ ಘಾಳಿ, ಸದಸ್ಯರಾದ ರೂಪಾ ಶೆಟ್ಟಿ, ಎಂ.ಐ.ನರಗುಂದ, ಮೀನಾಕ್ಷಿ ವಂಟಮೂರಿ, ಸುವರ್ಣಾ ಕಲಕುಂಟ್ಲ, ಆರಿಫ್‌ ಭದ್ರಾಪುರ, ಚಂದ್ರೀಕಾ ಮೇಸ್ತ್ರಿ ಇದ್ದರು.

ಕಳಪೆ ಪೈಪ್‌ ಪತ್ತೆಗೆ ಹೈಡ್ರೊ ಟೆಸ್ಟ್‌

24X7 ಕುಡಿಯುವ ನೀರು ಪೂರೈಕೆ ಯೋಜನೆ ಅಡಿ 300 ಕಿ.ಮೀನಲ್ಲಿ ಅಳವಡಿಸಿರುವ ಪೈಪ್‌ಗಳಲ್ಲಿ ಕಳಪೆ ಪೈಪ್‌ ಪತ್ತೆಗೆ ಹೈಡ್ರೊ ಟೆಸ್ಟ್‌ ಮಾಡಲಾಗುವುದು ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ಪೈಪ್ ಬದಲಾಯಿಸುವಂತೆ ಸೂಚಿಸಲಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.  ಆಯುಕ್ತ ರುದ್ರೇಶ ಘಾಳಿ ಪ್ರತಿಕ್ರಿಯಿಸಿ 300 ಕಿ.ಮೀ ವ್ಯಾಪ್ತಿಯಲ್ಲಿ ಕಳಪೆ ಪೈಪ್ ಅಳವಡಿಸಿರುವ ಬಗ್ಗೆ ಮಾಹಿತಿ ಇದ್ದು 160 ಕಿ.ಮೀ ನಲ್ಲಿ ಪೈಪ್ ಬದಲಾಯಿಸಲಾಗಿದೆ ಎಂದರು.

ಹು–ಧಾ ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಯಿಂದ ಅಭಿವೃದ್ಧಿ ಸ್ವಚ್ಛತೆಗೆ ಹಿನ್ನಡೆಯಾಗುತ್ತಿದ್ದು ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲಾಗುವುದು.
-ಮಹೇಶ ಟೆಂಗಿನಕಾಯಿ, ಶಾಸಕ
24X7 ಕುಡಿಯುವ ನೀರು ಯೋಜನೆ ಕಾಮಗಾರಿ ಅವಧಿಯನ್ನು 2028ರವರೆಗೆ ವಿಸ್ತರಿಸುವಂತೆ ಎಲ್ ಅ್ಯಂಡ್ ಟಿ ಕಂಪನಿ ಮನವಿ ಮಾಡಿದೆ. ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ
-ರುದ್ರೇಶ ಘಾಳಿ, ಆಯುಕ್ತ ಹು–ಧಾ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.