ಹುಬ್ಬಳ್ಳಿ: ಇಲ್ಲಿನ ತೋಳನಕೆರೆ ಉದ್ಯಾನದಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಹದಿನೈದು ದಿನಗಳಿಂದ ಸಂಪೂರ್ಣ ಸ್ಥಗಿತವಾಗಿದೆ. ಇದರ ಪರಿಣಾಮ, ಮೇಲ್ಭಾಗದಿಂದ ಹರಿದು ಬರುವ ಗಟಾರ ಮತ್ತು ಚರಂಡಿಯ ಕೊಳಚೆ ನೀರು ಸಂಸ್ಕರಣಗೊಳ್ಳದೆ ಹಾಗೆಯೇ ಕೆರೆಯ ಒಡಲು ಸೇರುತ್ತಿದೆ.
ಸಂಸ್ಕರಣಾ ಘಟಕದ ಪಕ್ಕದಲ್ಲಿರುವ ನಿರ್ವಹಣಾ ಕೊಠಡಿಯ ಕಿಟಕಿ ಗಾಜಿಗೆ ‘ನೌಕರರಿಗೆ ವೇತನ ನೀಡಿಲ್ಲದ ಕಾರಣ ಅನಿರ್ದಿಷ್ಟ ಅವಧಿವರೆಗೆ ಪ್ಲಾಂಟ್ ಬಂದ್ ಮಾಡಲಾಗಿದೆ’ ಎಂದು ಹಾಳೆಯಲ್ಲಿ ಬರೆದು ಅಂಟಿಸಲಾಗಿದೆ.
ಘಟಕದ ಉಸ್ತುವಾರಿ ಅಧಿಕಾರಿ, ನಿರ್ವಹಣಾ, ಎಲೆಕ್ಟ್ರಿಷಿಯನ್ ಮತ್ತು ಭದ್ರತಾ ಸಿಬ್ಬಂದಿಯ ಗೈರು ಎದ್ದು ಕಾಣುತ್ತಿದೆ. ‘ಒಂದೂವರೆ ವರ್ಷದಿಂದ ವೇತನ ಪಾವತಿಯಾಗದ ಕಾರಣ, ಘಟಕ ಬಂದ್ ಮಾಡಿ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ’ ಎಂದು ವಾಯುವಿಹಾರಿಗಳು ಹೇಳುತ್ತಾರೆ.
ವಾರ್ಡ್ ಸಂಖ್ಯೆ–30ರ ರೇಣುಕಾನಗರ, ಗಾಂಧಿನಗರ, ರಾಮಲಿಂಗೇಶ್ವರ ನಗರ, ರಾಘವೇಂದ್ರ ನಗರ, ಮಾನಸಗಿರಿ ಬಡಾವಣೆ, ಸರಸ್ವತಪುರ, ರಾಮಕೃಷ್ಣ ನಗರ ಸೇರಿ ಮೇಲ್ಭಾಗದ ಕೆಲ ಪ್ರದೇಶಗಳಿಂದ ತೋಳನಕೆರೆಗೆ ಕೊಳಚೆ ನೀರು ಹರಿದು ಬರುತ್ತದೆ. ಅದನ್ನು ಸಂಸ್ಕರಿಸಿ ಕೆರೆಗೆ ಬಿಡಬೇಕು ಎನ್ನುವ ಕಾರಣಕ್ಕೆ, ಕೆರೆ ಪಕ್ಕವೇ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಇದೀಗ ಘಟಕ ಸ್ಥಗಿತವಾಗಿದ್ದಕ್ಕೆ ವಾಯುವಿಹಾರಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
‘ಆರಂಭದಿಂದಲೂ ಘಟಕ ವೈಜ್ಞಾನಿಕವಾಗಿ ಕಾರ್ಯ ನಿರ್ವಹಿಸಿದ್ದು ಕಂಡಿಲ್ಲ. ಪೂರ್ಣ ಪ್ರಮಾಣದಲ್ಲಿ ಕೊಳಚೆ ನೀರು ಸಂಸ್ಕರಣವಾಗದಿದ್ದರೂ, ಶೇ 50–60ರಷ್ಟು ಸಂಸ್ಕರಣವಾಗಿ ಕೆರೆಗೆ ಹೋಗುತ್ತಿತ್ತು. ಇದೀಗ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿರುವುದರಿಂದ ಘಟಕ ಸ್ಥಗಿತಗೊಂಡಿದೆ. ಕೊಳಚೆ ನೀರು ಹಾಗೆಯೇ ಕೆರೆಗೆ ಸೇರುತ್ತಿದೆ’ ಎಂದು ಸಮಾಜ ಸೇವಕ ಲಿಂಗರಾಜ ಧಾರವಾಡಶೆಟ್ಟರ್ ಹೇಳಿದರು.
‘ನೂರಾರು ಕೋಟಿ ವೆಚ್ಚ ಮಾಡಿ ಮಾದರಿ ಉದ್ಯಾನ ನಿರ್ಮಿಸಿ, ಕೆರೆ ಅಭಿವೃದ್ಧಿ ಮಾಡಲಾಗಿದೆ. ಆದರೆ, ಕೆರೆಗೆ ಹರಿದು ಬರುವ ಕೊಳಚೆ ನೀರನ್ನು ಶುದ್ಧೀಕರಿಸಲು ಮಾತ್ರ ಸ್ಮಾರ್ಟ್‌ಸಿಟಿ ಕಂಪನಿ ಮತ್ತು ಮಹಾನಗರ ಪಾಲಿಕೆಯಿಂದ ಸಾಧ್ಯವಾಗಿಲ್ಲ. ಕೊಳಚೆ ನೀರು ಕೆರೆಗೆ ಸೇರುವುದರಿಂದ ಸುತ್ತಲು ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಸಂಜೆ ವೇಳೆ ವಿಹಾರ ಮಾಡುವಾಗ, ಕೆರೆ ಪಕ್ಕ ಕುಳಿತುಕೊಳ್ಳುವಾಗ ಸೊಳ್ಳೆ ಕಡಿದು ಮೈಯೆಲ್ಲ ಗುಳ್ಳೆ ಏಳುತ್ತವೆ. ಸುತ್ತಲಿನ ವಾತಾವರಣ ಗಬ್ಬು ವಾಸನೆಯಿಂದ ಕೂಡಿದೆ’ ಎಂದು ವಾಯುವಿಹಾರಿ ಲಲಿತಮ್ಮ ನಾಸಿಪುಡಿ ಅಸಮಾಧಾನ ವ್ಯಕ್ತಪಡಿಸಿದರು.
‘ಸಿಬ್ಬಂದಿ ಜೊತೆ ಚರ್ಚೆ’
‘ತ್ಯಾಜ್ಯ ನೀರು ಸಂಸ್ಕರಣಾ ಘಟಕದ ನಿರ್ವಹಣೆಗೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಏಳರಿಂದ ಒಂಬತ್ತು ಸಿಬ್ಬಂದಿಯಿದ್ದು ಮೂರು ಪಾಳಿ ಪ್ರಕಾರ ಕರ್ತವ್ಯ ನಿರ್ವಹಿಸುತ್ತಾರೆ. ತಾಂತ್ರಿಕ ಕಾರಣದಿಂದಾಗಿ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ. ಸಿಬ್ಬಂದಿ ಜೊತೆ ಚರ್ಚಿಸಿದ್ದು ವೇತನ ಪಾವತಿಸುವ ಬಗ್ಗೆ ಭರವಸೆ ನೀಡಲಾಗಿದೆ’ ಎಂದು ಪಾಲಿಕೆ ಮುಖ್ಯ ಎಂಜಿನಿಯರ್ ವಿಠ್ಠಲ ತುಬಾಕೆ ಹೇಳಿದರು.
ಘಟಕ ಸ್ಥಗಿತಗೊಳಿಸಿರುವ ಕುರಿತು ಕಿಟಕಿಗೆ ಅಂಟಿಸಿರುವ ಪ್ರತಿಭಟನಾ ಬರಹದ ಕುರಿತು ಮಾಹಿತಿಯಿಲ್ಲ. ಸಿಬ್ಬಂದಿ ವೇತನಕ್ಕೆ ಆಯುಕ್ತರ ಜೊತೆ ಚರ್ಚಿಸಲಾಗಿದೆ.– ವಿಠ್ಠಲ ತುಬಾಕೆ, ಮುಖ್ಯ ಎಂಜಿನಿಯರ್ ಹು–ಧಾ ಮಹಾನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.