
ಹುಬ್ಬಳ್ಳಿ: ಆರಾಧ್ಯ ದೈವ ಸಿದ್ಧಾರೂಢ ಮಠದ ‘ಕೈಲಾಸ ಮಂಟಪ’ ಇದೀಗ ಶತಮಾನದ ಹೊಸ್ತಿಲಲ್ಲಿದ್ದು, ಸಂಭ್ರಮ ಮನೆ ಮಾಡಿದೆ. ಸಿದ್ಧಾರೂಢ ಮಠ ಕೇವಲ ಧಾರ್ಮಿಕ ಸ್ಥಳವಲ್ಲ, ಅದೊಂದು ನೆಮ್ಮದಿಯ ತಾಣ. ಹಸಿವು ಎಂದವರಿಗೆ ಅನ್ನ, ಬಿಸಿಲು ಎಂದವರಿಗೆ ನೆರಳು ನೀಡುತ್ತಿದ್ದು, ಜಾತ್ಯತೀತವಾಗಿ ಜನರನ್ನು ತನ್ನತ್ತ ಸೆಳೆಯುತ್ತಿದೆ.
ಸ್ವತಃ ಸಿದ್ಧಾರೂಢರೇ ಮುಂದೆ ನಿಂತು 1926ರಲ್ಲಿ, ₹70 ಸಾವಿರ ವೆಚ್ಚದಲ್ಲಿ ನಿರ್ಮಿಸಿದ ‘ಕೈಲಾಸ ಮಂಟಪ’ ನೂರು ವರ್ಷ ಆಗಿದ್ದರೂ, ಮೂಲರೂಪದಲ್ಲೇ ಇರುವುದು ವೈಶಿಷ್ಟ್ಯ.
ಸಿದ್ಧಾರೂಢರು ಪ್ರವಚನ ನೀಡುತ್ತಿದ್ದ ಸ್ಥಳವೇ ಕೈಲಾಸ ಮಂಟಪ. ಭಕ್ತರು ಯಾವಾಗ ಬಂದರೂ ಅವರಿಗೆ ದರ್ಶನ ಸಿಗಲಿ ಎಂಬ ಉದ್ದೇಶದಿಂದ ಕೈಲಾಸ ಮಂಟಪಕ್ಕೆ ಒಂದೂ ಬಾಗಿಲು, ಕಿಟಕಿ ನಿರ್ಮಿಸಿಲ್ಲ!
‘ಕೈಲಾಸ ಮಂಟಪದ ಕಟ್ಟಡ ಕಾರ್ಯದಲ್ಲಿ ತೊಡಗಿದ್ದ ಮಿಶ್ರಿಕೋಟಿಯ ಬಡಿಗೇರ ಕಾಳಪ್ಪ ಎಂಬುವರು ಅನಾರೋಗ್ಯಕ್ಕೆ ಒಳಗಾಗಿ ಕಟ್ಟಡ ಕಾರ್ಯ ಸ್ಥಗಿತವಾಗಿತ್ತು. ಅವರನ್ನು ಸಿದ್ಧಾರೂಢರು ಕಾಯಿಲೆ ಮುಕ್ತರನ್ನಾಗಿಸಿದರು. ಅಂದಿನಿಂದ ಕಟ್ಟಡ ಕಾಮಗಾರಿ ಮುಗಿಯುವವರೆಗೂ ಕಾಳಪ್ಪ, ಹಸಿ ಗೊಬ್ಬರದ ಚೀಲದ ಮೇಲೆ ಮಲಗಿದ್ದರು’ ಎಂದು ಇತಿಹಾಸದ ಮೂಲಗಳು ತಿಳಿಸುತ್ತವೆ.
ವಿಶಾಲವಾದ ಕೈಲಾಸ ಮಂಟಪವನ್ನು ಬೀಡ್ ಬಳಸಿ, ಕಂಬಗಳನ್ನು ಮತ್ತು ಕಬ್ಬಿಣದ ಗಾರ್ಡರ್ ಮೇಲೆ ಕಟ್ಟಿಗೆ ಹಾಕಿ ನಿರ್ಮಿಸಲಾಗಿದೆ. 18 ಮಂಟಪ, 10 ಕಂಬಗಳಿದ್ದು, ಮೇಲ್ಭಾಗದಲ್ಲಿ ನಿರ್ಗುಣ ಉಪಸನಾ ಚಕ್ರ ಬಿಡಿಸಲಾಗಿದೆ. ಪ್ರತಿ ಕಂಬವನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದ್ದು, ಕಂಬದ ಮೇಲೆ ‘ಓಂ ನಮಃ ಶಿವಾಯ’ ಹಾಗೂ ಸಿದ್ಧಾರೂಢ ಮಹಾರಾಜ ಎಂದು ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಕೆತ್ತಲಾಗಿದೆ. ಕೈಲಾಸ ಮಂಟಪದ ಮುಂಭಾಗದ ನಾಲ್ಕು ಕಂಬಗಳಲ್ಲಿ ನಾಲ್ಕು ವೇದಗಳನ್ನು ಹಿಂದಿ ಭಾಷೆಯಲ್ಲಿ ಕೆತ್ತಲಾಗಿದೆ.
ಮುಂಬೈನ ರೋಶನ್‌ಭಾಯ್ ಎಂಬುವರು ಕೈಲಾಸ ಮಂಟಪದ ಪೂಜಾ ಮಂಟಪಕ್ಕೆ ಮಾರ್ಬಲ್‌ಗಳನ್ನು ಅಳವಡಿಸಿದ್ದರು. 2011ರಲ್ಲಿ ಶ್ರೀ ಸಿದ್ದಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿಯ ಅಂದಿನ ಚೇರ್ಮನ್ ಮಹೇಂದ್ರ ಸಿಂಘಿ ಅವರು ರಾಜಸ್ಥಾನದ ಕಿಶನ್‌ಘರ್ ಕಲಾವಿದರಿಂದ ಅಂದಾಜು ₹12 ಲಕ್ಷ ವೆಚ್ಚದಲ್ಲಿ ‘ಮೀನಾಕರಿ’ ಕಲೆ ವಿನ್ಯಾಸಗೊಳಿಸಿದ್ದು, ಮಠಕ್ಕೆ ವಿಶೇಷ ಮೆರುಗು ನೀಡಿದೆ.
ಮೂರ್ತಿ ಬದಲಾವಣೆ: ಪೂಜಾ ಮಂಟಪದಲ್ಲಿನ ಮೂರ್ತಿಗಳು ಭಿನ್ನ(ವಿರೂಪ)ವಾಗಿದ್ದು, ಬದಲಾಯಿಸಬೇಕಿದ್ದಲ್ಲಿ ಒಂದೇ ರಾತ್ರಿಯಲ್ಲಿ ಬದಲಾಯಿಸಬೇಕೆಂಬ ಸವಾಲು ಎದುರಾಗಿತ್ತು. ಸಂಜೆ ಆರತಿಯ ನಂತರ ಎರಡು ಕ್ರೇನ್ ಬಳಸಿ, ಬೆಳಗಿನ ಪೂಜೆಯೊಳಗೆ ಮೂರ್ತಿಯನ್ನು ಬದಲಾಯಿಸಿದ್ದು ಐತಿಹಾಸಿಕ ಎನ್ನುತ್ತಾರೆ ಮಠದ ಕಮಿಟಿಯ ಮಾಜಿ ಚೇರ್ಮನ್ ಮಹೇಂದ್ರ ಸಿಂಘಿ.
ಉತ್ತರ ಕರ್ನಾಟಕದಲ್ಲಿ ಸಿದ್ಧಾರೂಢರ ಮಠವನ್ನು ವಿಶೇಷವಾಗಿ ಅಭಿವೃದ್ಧಿಗೊಳಿಸಬೇಕೆಂಬ ಉದ್ದೇಶದಿಂದ ಕೈಲಾಸ ಮಂಟಪದ ಪೂಜಾ ಮಂಟಪವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆಮಹೇಂದ್ರ ಸಿಂಘಿ ಮಾಜಿ ಚೇರ್ಮನ್ ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ
ಶಿವರಾತ್ರಿ ಉತ್ಸವದ ನಂತರ ಕೈಲಾಸ ಮಂಟಪದ ಶತಮಾನೋತ್ಸವದ ಅಂಗವಾಗಿ ವಿವಿಧ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದುಚನ್ನವೀರ ಮುಂಗುರವಾಡಿ ಚೇರ್ಮನ್ ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ
124ನೇ ರಥೋತ್ಸವ ನಾಳೆ
ಶಿವರಾತ್ರಿ ಉತ್ಸವದ ಪ್ರಯುಕ್ತ ಸಿದ್ಧಾರೂಢ ಮಠದಲ್ಲಿ ಸೋಮವಾರ 124ನೇ ರಥೋತ್ಸವ ನಡೆಯಲಿದ್ದು ಅಂದಾಜು ಆರೂವರೆಯಿಂದ ಏಳೂವರೆ ಲಕ್ಷ ಜನ ಸೇರುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.