
ಜೈಲು (ಪ್ರಾತಿನಿಧಿಕ ಚಿತ್ರ)
ಹುಬ್ಬಳ್ಳಿ: ಡಿಜಿಪಿ ಅಲೋಕ್ ಕುಮಾರ್ ಅವರು ಇಲ್ಲಿನ ಅಶೋಕ ನಗರದ ಉಪ ಕಾರಾಗೃಹದಲ್ಲಿ ಪರಿಶೀಲನೆ ನಡೆಸಿದ್ದ ಎರಡು ದಿನದಲ್ಲೇ, ಕೈದಿಗಳು ಗಾಂಜಾ ಬಳಸಿರುವ ವಿಡಿಯೊ ಜಾಲತಾಣದಲ್ಲಿ ಹಂಚಿಕೆಯಾಗಿದೆ.
ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಕಾರಾಗೃಹದ ಅಧೀಕ್ಷಕ ಶಹಾಬುದ್ದೀನ್ ಕಾಲೇಖಾನ್ ಅವರು ಗಾಂಜಾ ಬಳಸುತ್ತಿದ್ದ 10 ವಿಚಾರಣಾಧೀನ ಕೈದಿಗಳ ವಿರುದ್ಧ ದೂರು ನೀಡಿದ್ದಾರೆ. ವಿಡಿಯೊ ಆಧರಿಸಿ ಸುಮೊಟೊ ಪ್ರಕರಣವು ದಾಖಲಾಗಿದೆ.
ಬೆಳಗಾವಿ ವಿಭಾಗದ ಡಿಐಜಿ ಟಿ.ಪಿ.ಶೇಷ ಅವರು ಶನಿವಾರ ಉಪ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಧೀಕ್ಷಕರು, ಸಿಬ್ಬಂದಿಯಿಂದ ಮಾಹಿತಿ ಪಡೆದರು.
‘ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿರುವ ವಿಡಿಯೊ ವೀಕ್ಷಿಸಿದ್ದು, ಅದು 2025ರ ಡಿಸೆಂಬರ್ 9ರಂದು ನಡೆದಿದೆ’ ಎಂದು ಡಿಐಜಿ ಟಿ.ಪಿ.ಶೇಷ ಅವರು ಸುದ್ದಿಗಾರರಿಗೆ ತಿಳಿಸಿದರು.
‘ವಿಡಿಯೊ ಮಾಡಿರುವ ಮೊಬೈಲ್ ಜೈಲಿನ ಹಿಂದಿರುವ ಗೋಡೆಯಿಂದ ಒಳಗೆ ಬಂದಿರಬಹುದು. ಅಥವಾ ಪೆನ್ ಕ್ಯಾಮೆರಾ ಆಗಿರಬಹುದು. ವಿಡಿಯೊದಲ್ಲಿ ಇರುವುದು ಗಾಂಜಾ ಅನ್ನೋದು ಪಕ್ಕಾ ಆಗಿಲ್ಲ. ತನಿಖೆ ನಡೆದಿದೆ.ಕರ್ತವ್ಯಲೋಪ ಕುರಿತು ಜೈಲು ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.