
ಹುಬ್ಬಳ್ಳಿ: ‘ಮೊಬೈಲ್ ಫೋನ್‌ನಲ್ಲಿ ಸಂಚಾರ ಸಾಥಿ ಆ್ಯಪ್ ಅಳವಡಿಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ನಮ್ಮ ರಾಷ್ಟ್ರದಲ್ಲಿ ಇದು ಕಳವಳ ಮೂಡಿಸಿದೆ’ ಎಂದು ಪತ್ರಕರ್ತ ಡಿ. ಉಮಾಪತಿ ಅಭಿಪ್ರಾಯಪಟ್ಟರು.
ನಗರದಲ್ಲಿ ಮಂಗಳವಾರ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು,‘ಮೊಬೈಲ್ ಫೋನ್ ಕಳೆದರೆ, ಅದನ್ನು ಸಂಚಾರ ಸಾಥಿ ಆ್ಯಪ್‌ನಿಂದ ಪತ್ತೆ ಮಾಡಬಹುದು ಎನ್ನುತ್ತಾರೆ. ಅದನ್ನು ಅಳವಡಿಸಿಕೊಂಡರೆ ಖಾಸಗಿ ವಿಷಯ ಮಾತನಾಡಲು ಆಗದು. ವೈಯಕ್ತಿಕ ಸ್ವಾತಂತ್ರ್ಯ ಇರುವುದಿಲ್ಲ’ ಎಂದರು.
‘ಪತ್ರಕರ್ತರು ಪತ್ರಿಕೆಗಳನ್ನು ಓದಿದರೆ ಮಾತ್ರ ಜ್ಞಾನದ ಹೆಚ್ಚುತ್ತದೆ. ಅವರಿಗೆ ಅದೇ ವಿಶ್ವವಿದ್ಯಾಲಯ. ಆದರೆ, ಈಚೆಗೆ ವಾಟ್ಸ್‌ಆ್ಯಪ್‌ನಲ್ಲಿ ಬಂದ ವಿಷಯಗಳೇ ಮುಖ್ಯವಾಗಿ, ಸತ್ಯ ಮರೆಯಾಗುತ್ತಿದೆ. ಆಳುವವರನ್ನು ಪ್ರಶ್ನಿಸುವ ಮನೋಭಾವ ಕಡಿಮೆಯಾಗುತ್ತಿದೆ’ ಎಂದರು.
ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಗುರು ಭಾಂಡಗೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕಟ್ಟಿಮನಿ, ಮಾಧ್ಯಮ ಅಕಾಡೆಮಿ ಸದಸ್ಯ ಅಬ್ಬಾಸ್ ಮುಲ್ಲಾ, ನಿಕಟಪೂರ್ವ ಅಧ್ಯಕ್ಷ ಲೋಚನೇಶ ಹೂಗಾರ ಹಾಗೂ ಪತ್ರಕರ್ತ ಸುಶೀಲೇಂದ್ರ ಕುಂದರಗಿ ಇದ್ದರು.