ADVERTISEMENT

ಕೃಷಿ–ಖುಷಿ | ಬಸನಿಂಗವ್ವ ಅವರ ಶ್ರಮ‌ಕ್ಕೆ ತಕ್ಕ ಫಲ: ಲಾಭ ತಂದ ಸೇವಂತಿಗೆ ಕೃಷಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:50 IST
Last Updated 9 ಜನವರಿ 2026, 7:50 IST
<div class="paragraphs"><p>ಕುರುಬಗಟ್ಟಿಯಲ್ಲಿ ಮಂಜುನಾಥ ಒಕ್ಕುಂದ ಅವರ ಹೊಲದಲ್ಲಿ ಬೆಳೆದಿರುವ ಸೇವಂತಿಗೆ</p></div>

ಕುರುಬಗಟ್ಟಿಯಲ್ಲಿ ಮಂಜುನಾಥ ಒಕ್ಕುಂದ ಅವರ ಹೊಲದಲ್ಲಿ ಬೆಳೆದಿರುವ ಸೇವಂತಿಗೆ

   

ಹುಬ್ಬಳ್ಳಿ: ಸುತ್ತಲಿನ ಕೃಷಿಕರೆಲ್ಲ ಹೂವಿನ ಕೃಷಿಯಲ್ಲಿ ಯಶಸ್ಸು ಸಾಧಿಸಿದ್ದನ್ನು ಕಂಡು ಪ್ರೇರಿತರಾಗಿ ಹೂವಿನ ಕೃಷಿಗಿಳಿದ ಬಸನಿಂಗವ್ವ ಅವರ ಶ್ರಮ‌ಕ್ಕೆ ತಕ್ಕ ಫಲ ಸಿಗುತ್ತಿದೆ. ಹೂಗಳ ಕೃಷಿ ಅವರಿಗೆ ವರ್ಷವೂ ಉತ್ತಮ ಆದಾಯ ತಂದು ಕೊಡುತ್ತಿದೆ. 

ಧಾರವಾಡ ತಾಲ್ಲೂಕಿನ ಕುರುಬಗಟ್ಟಿಯಲ್ಲಿ 2 ಎಕರೆ ಹೊಲದಲ್ಲಿ ಬಸನಿಂಗವ್ವ ಒಕ್ಕುಂದ ಅವರು ಸೇವಂತಿಗೆ, ಪೂರ್ಣಿಮಾ ಹಾಗೂ ಆಸ್ಟ್ರಾ ಹೂಗಳನ್ನು ಬೆಳೆಯುತ್ತಿದ್ದಾರೆ. ಬಿಳಿ, ಹಳದಿ ಸೇರಿದಂತೆ ಮೂರು ಬಣ್ಣಗಳ ಹೂಗಳನ್ನು ಇವರು ಬೆಳೆಯುತ್ತಿದ್ದು, ಧಾರವಾಡ, ಹುಬ್ಬಳ್ಳಿ ಹಾಗೂ ಬೆಳಗಾವಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ADVERTISEMENT

ಒಮ್ಮೆ ಹಚ್ಚಿದ ಗಿಡಗಳು 3ರಿಂದ 4 ತಿಂಗಳ ಕಾಲ ಹೂ ನೀಡುತ್ತವೆ. ನಂತರ ಮತ್ತೆ ಬೀಜ ಹಾಕಿ ಬೆಳೆಸುತ್ತಾರೆ. ಬೀಜ, ಗೊಬ್ಬರ, ಕೀಟನಾಶಕ ಹಾಗೂ ಕಾರ್ಮಿಕರ ಕೂಲಿ ಸೇರಿ ವರ್ಷಕ್ಕೆ ₹ 1.5 ಲಕ್ಷದಷ್ಟು ಖರ್ಚು ಬರುತ್ತಿದೆ. ಒಮ್ಮೆಲೆ ಪ್ರತಿ ವಿಧದ ಹೂಗಳು ಒಂದು ಕ್ವಿಂಟಲ್‌ನಷ್ಟು ದೊರೆಯುತ್ತವೆ. ಮಾರುಕಟ್ಟೆಯಲ್ಲಿ ದರ ಹೆಚ್ಚು ಕಡಿಮೆ ಆಗುತ್ತಿರುವ ಕಾರಣ ವರ್ಷವೂ ಆದಾಯ ಸಮ ಪ್ರಮಾಣದಲ್ಲಿ ಇರುವುದಿಲ್ಲ. ಅಂದಾಜು ₹2 ಲಕ್ಷದಿಂದ ₹3 ಲಕ್ಷ ಆದಾಯ ಬರುತ್ತದೆ.

‘ಪುತ್ರರಾದ ಮಂಜು ಹಾಗೂ ಸಂಗಪ್ಪ ಬೆಂಗಳೂರು ಹಾಗೂ ಜಗಳೂರಿನಿಂದ ಹೂಗಳ ಬೀಜ ತರುತ್ತಾರೆ. ಸೇವಂತಿಗೆ ಹೂಗಳ ಬೀಜ ಮಾತ್ರ ನಮ್ಮ ಹೊಲದಲ್ಲೇ ಸಿಗುತ್ತದೆ. ವರ್ಷಕ್ಕೆ ಮೂರು ಬಾರಿ ಹೂಗಳ ಬೀಜ ಬಿತ್ತನೆ ಮಾಡುತ್ತೇವೆ. ಹೂಕೊಯ್ಯುವ ಸಮಯದಲ್ಲಿ ಕಾರ್ಮಿಕರನ್ನೂ ಕರೆಸುತ್ತೇವೆ. ಮಕ್ಕಳಿಬ್ಬರೂ ಹೂಕೃಷಿಯಲ್ಲಿ ಸಹಾಯ ಮಾಡುತ್ತಾರೆ. ಅವರೇ ಮಾರುಕಟ್ಟೆಗೆ ಒಯ್ದು ಮಾರಾಟವನ್ನೂ  ಮಾಡುತ್ತಾರೆ‘ ಎಂದು ಬಸನಿಂಗವ್ವ ತಿಳಿಸಿದರು.

’2 ಕೊಳವೆಬಾವಿಗಳನ್ನು ಕೊರೆಸಿದ್ದು ನೀರಿನ ಲಭ್ಯತೆ ಚೆನ್ನಾಗಿದೆ. ಅರ್ಧದಷ್ಟು ಹೊಲಕ್ಕೆ ಹನಿ ನೀರಾವರಿ ಅಳವಡಿಸಿದ್ದೇವೆ. ಪೂರ್ಣ ಹೊಲಕ್ಕೆ ಅಳವಡಿಸುವ ಯೋಜನೆಯಿದೆ. ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಸಿಕ್ಕಿದ್ದರೆ ಒಂದಿಷ್ಟು ಸಹಾಯವಾಗುತ್ತಿತ್ತು’ ಎಂದು ತಿಳಿಸಿದರು.

ಗುತ್ತಿಗೆಗೆ ಪಡೆದ ಹೊಲದಲ್ಲಿ ಜೋಳ, ಗೋಧಿ, ಹತ್ತಿ ಬೆಳೆಯುತ್ತೇವೆ. ಜೋಳ–ಗೋಧಿಯನ್ನು ಮನೆಯ ಊಟಕ್ಕಾಗಿ ಮಾತ್ರ ಬೆಳೆಯುತ್ತೇವೆ. ಹೂಗಳ ಕೃಷಿಯಿಂದ ಆರ್ಥಿಕ ಸುಧಾರಣೆ ಆಗಿದೆ. ನಮಗೆ ಹೊಸಜೀವನ ನೀಡಿದೆ ಎಂದು ಅವರು ತಿಳಿಸಿದರು.

ಗಣೇಶ ಚೌತಿ, ದಸರಾ, ದೀಪಾವಳಿ, ಸಂಕ್ರಾಂತಿ ಹಾಗೂ ಹಬ್ಬಗಳ ಸಂದರ್ಭದಲ್ಲಿ ಹೂಗಳ ಮಾರಾಟ ಉತ್ತಮವಾಗಿರುತ್ತದೆ. ಕೆಲವೊಮ್ಮೆ ನಷ್ಟವಾದರೂ ಹಬ್ಬಗಳ ಸಂದರ್ಭದಲ್ಲಿ ಲಾಭವಾಗುತ್ತದೆ
ಬಸನಿಂಗವ್ವ ಒಕ್ಕುಂದ, ರೈತ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.