ಕಾಂಗ್ರೆಸ್
ಹುಬ್ಬಳ್ಳಿ: 'ಇಲ್ಲಿನ ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಮಹಿಳೆ ವಿವಸ್ತ್ರಗೊಂಡ ಪ್ರಕರಣವು ಶಾಸಕ ಮಹೇಶ ಟೆಂಗಿನಕಾಯಿ ಅವರ ಟೂಲ್ ಕಿಟ್ ಆಗಿದೆ. ಹು-ಧಾ ಸೆಂಟ್ರಲ್ ಕ್ಷೇತ್ರವನ್ನು ಭದ್ರಪಡಿಸಿಕೊಳ್ಳಲು ಅವರು ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ' ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಆರೋಪಿಸಿದರು.
ಶುಕ್ರವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಆರೋಪಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರು ವ್ಯಕ್ತಿಯೊಬ್ಬರ ಮೇಲೆ ದೌರ್ಜನ್ಯ ನಡೆಸಿರುವ ಐದು ನಿಮಿಷದ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದರು.
'ಸುಜಾತಾ ಅವರು ಮಚ್ಚು, ಲೆದರ್ ಬೆಲ್ಟ್ ಹಿಡಿದು ವ್ಯಕ್ತಿಯ ಮೇಲೆ ಮೃಗೀಯವಾಗಿ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆ ವ್ಯಕ್ತಿ ಯಾರು, ಎಷ್ಟು ವರ್ಷಗಳ ಹಿಂದಿನ ವಿಡಿಯೊ ಎಂದು ತಿಳಿದಿಲ್ಲ. ಆದರೆ, ಅದು ನಮಗೆ ದೊರೆತ ಹಿನ್ನೆಲೆಯಲ್ಲಿ ಮಾಧ್ಯಮಗಳ ಎದುರು ಬಿಡುಗಡೆ ಮಾಡುತ್ತಿದ್ದೇವೆ. ದೌರ್ಜನ್ಯಕ್ಕೆ ಒಳಗಾಗಿರುವ ವ್ಯಕ್ತಿಗೆ ನ್ಯಾಯ ಸಿಗಬೇಕು. ಈ ಕುರಿತು ಹು-ಧಾ ಪೋಲಿಸ್ ಕಮಿಷನರ್ ಅವರನ್ನು ಭೇಟಿ ಮಾಡಿ ದೂರು ನೀಡುತ್ತೇವೆ' ಎಂದರು.
'ಕುಟುಂಬದ ಮ್ಯಾಪಿಂಗ್ ಸಮೀಕ್ಷೆ ಸಂದರ್ಭ ಚಾಲುಕ್ಯನಗರದಲ್ಲಿ ನಡೆದ ಗಲಾಟೆ ಬಳಿಕ ಶಾಸಕ ಮಹೇಶ ಟೆಂಗಿನಕಾಯಿ ಅವರು, ಸುಜಾತಾ ಹಂಡಿ ಅವರ ಮನೆಯಲ್ಲಿ ಸಭೆ ನಡೆಸಿದ್ದರು. ಅಪರಾಧ ಹಿನ್ನೆಲೆಯಿದ್ದ ಮಹಿಳೆ ಹಾಗೂ ರೌಡಿಗಳನ್ನು ಮುಂದಿಟ್ಟುಕೊಂಡು ಹುಬ್ಬಳ್ಳಿಯಲ್ಲಿ ಅಶಾಂತಿ ಸೃಷ್ಟಿಸಲು ಶಾಸಕರು ಯತ್ನಿಸುತ್ತಿದ್ದಾರೆ. ವಿವಸ್ತ್ರಗೊಂಡ ಪ್ರಕರಣ ಕುರಿತು ಇಂದು(ಶುಕ್ರವಾರ) ರಾಜ್ಯ ಬಿಜೆಪಿ ನಾಯಕರು ಹುಬ್ಬಳ್ಳಿಗೆ ಬಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಮೊದಲು ನಾಯಕರು ಆ ವಿಡಿಯೊ ನೋಡಲಿ. ಮಾನ ಮರ್ಯಾದೆ ಇದ್ದರೆ ಅವರು ಪ್ರತಿಭಟನೆಗೆ ಬರುವುದಿಲ್ಲ' ಎಂದು ಹೇಳಿದರು.
'ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಈಗ ರಾಜಕೀಯದಲ್ಲಿ ಅಭದ್ರತೆ ಶುರುವಾಗಿದೆ. ಅವರ ಗುರು ಜಗದೀಶ ಶೆಟ್ಟರ್ ಮರಳಿ ಕ್ಷೇತ್ರ ಪಡೆಯಬೇಕು ಎನ್ನುವ ಹಠದಲ್ಲಿದ್ದಾರೆ. ಮತ್ತೊಬ್ಬ ನಾಯಕರು ಸಹ ಆ ಕ್ಷೇತ್ರದ ಮೇಲೆ ಕಣ್ಣಿಟ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ತಮ್ಮ ನೆಲೆ ಗಟ್ಟಿ ಮಾಡಿಕೊಳ್ಳಲು ಸೆಂಟ್ರಲ್ ಕ್ಷೇತ್ರದಲ್ಲಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ' ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.