ADVERTISEMENT

ಹುಬ್ಬಳ್ಳಿ: ಎಎಪಿಯಿಂದ ‘ಹುಬ್ಬಳ್ಳಿ ಕಾಲಿಂಗ್‌’ ಅಭಿಯಾನ

ಇನ್ಫೊಸಿಸ್ ಕ್ಯಾಂಪಸ್‌ನಲ್ಲಿ ರತ್ನಗಂಬಳಿ ಹಾಸಿ ಸ್ವಾಗತ ಕೋರಿದ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 12:09 IST
Last Updated 27 ನವೆಂಬರ್ 2020, 12:09 IST
ಹುಬ್ಬಳ್ಳಿಯ ಇನ್ಫೊಸಿಸ್ ಕ್ಯಾಂಪಸ್‌ನಲ್ಲಿ ಶುಕ್ರವಾರ ಎಎಪಿ ಕಾರ್ಯಕರ್ತರು ರತ್ನಗಂಬಳಿ ಹಾಸಿ ಸ್ವಾಗತ ಕೋರಿದರು
ಹುಬ್ಬಳ್ಳಿಯ ಇನ್ಫೊಸಿಸ್ ಕ್ಯಾಂಪಸ್‌ನಲ್ಲಿ ಶುಕ್ರವಾರ ಎಎಪಿ ಕಾರ್ಯಕರ್ತರು ರತ್ನಗಂಬಳಿ ಹಾಸಿ ಸ್ವಾಗತ ಕೋರಿದರು   

ಹುಬ್ಬಳ್ಳಿ: ನಗರದ ಹೊರವಲಯದಲ್ಲಿರುವ ಇನ್ಫೊಸಿಸ್ ಸಂಸ್ಥೆ ಆದಷ್ಟು ಬೇಗನೆ ತನ್ನ ಕಾರ್ಯ ಚಟುವಟಿಕೆ ಆರಂಭಿಸಬೇಕು ಎಂದು ಒತ್ತಾಯಿಸಿ ಅಮ್‌ ಆದ್ಮಿ ಪಕ್ಷ (ಎಎಪಿ) ಶುಕ್ರವಾರ ‘ಹುಬ್ಬಳ್ಳಿ ಕಾಲಿಂಗ್‌’ ಅಭಿಯಾನ ನಡೆಸಿತು.

ಪಕ್ಷದ ಕಾರ್ಯಕರ್ತರು ಕ್ಯಾಂಪಸ್‌ ಮುಂದುಗಡೆ ಘೋಷಣೆಗಳನ್ನು ಕೂಗಿ ಹುಬ್ಬಳ್ಳಿಯಲ್ಲಿ ಇನ್ಫೊಸಿಸ್ ಆರಂಭಿಸಬೇಕು ಎಂದು ಒತ್ತಾಯಿಸಿದರು. 'ಹುಬ್ಬಳ್ಳಿ ಕಾಲಿಂಗ್ ಐಟಿ-ಬಿಟಿ' ಮತ್ತು 'ಇನ್ಫೊಸಿಸ್ ಪ್ರಾರಂಭವಾಗಲಿ, ಹುಬ್ಬಳ್ಳಿಯಲ್ಲಿ ಐಟಿ ಉದ್ದಿಮೆ ಉದಯವಾಗಲಿ' ಎಂಬ ಘೋಷಣೆಗಳನ್ನು ಕೂಗಿದರು.

ಕಾರ್ಯಕರ್ತರು ಕ್ಯಾಂಪಸ್‌ ಒಳಗಡೆ ರತ್ನಗಂಬಳಿ ಹಾಸಿ, ಇನ್ಫೊಸಿಸ್ ಸಿಬ್ಬಂದಿಗೆ ಹೂಗುಚ್ಛ ನೀಡಿ ಮನವಿ ಪತ್ರ ಸಲ್ಲಿಸಿ ಇಲ್ಲಿ ಸಂಸ್ಥೆ ಕಾರ್ಯಾರಂಭ ಮಾಡುವುದನ್ನು ಉತ್ತರ ಕರ್ನಾಟಕದ ಜನ ಅದರಲ್ಲೂ ವಿಶೇಷವಾಗಿ ಧಾರವಾಡ ಜಿಲ್ಲೆಯ ಜನ ಕಾತರದಿಂದ ಎದುರು ನೋಡುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ನರಗುಂದ ಮಾತನಾಡಿ ‘ಹುಬ್ಬಳ್ಳಿಯಲ್ಲಿ ಇನ್ಫೊಸಿಸ್ ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದ್ದು, ಇನ್ನೂ ಇಲ್ಲಿಂದ ಕೆಲಸ ಆರಂಭಿಸಿಲ್ಲ. ರೈತರಿಂದ ಸ್ವಾಧೀನಪಡಿಸಿಕೊಂಡ ಸುಮಾರು 43 ಎಕರೆ ಭೂಮಿಯನ್ನು ಕೈಗಾರಿಕೆ ಬಳಕೆಗಾಗಿ ಎಂಟು ವರ್ಷಗಳ ಹಿಂದೆಯೇ ಸರ್ಕಾರ ನೀಡಿದೆ. ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡು ಮೂರು ವರ್ಷಗಳಿಗಿಂತ ಹೆಚ್ಚು ಸಮಯವಾದರೂ ಕಂಪನಿ ಕೆಲಸ ಆರಂಭಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇಲ್ಲಿ ಇನ್ಫೊಸಿಸ್ ಕೆಲಸ ಆರಂಭಿಸಿದರೆ ಸುಮಾರು 3,500 ಎಂಜಿನಿಯರ್‌ಗಳು, ಐಟಿ ವೃತ್ತಿಪರರು, ಸಿಬ್ಬಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗದ ಅವಕಾಶಗಳು ಒದಗುವ ನಿರೀಕ್ಷೆಯಿದೆ. ಇನ್ನು ಮುಂದಾದರೂ ಕಾರ್ಯಪ್ರವೃತ್ತವಾಗಬೇಕು’ ಎಂದು ಆಗ್ರಹಿಸಿದರು.

ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರತಿಭಾ ದಿವಾಕರ, ಶಶಿಕುಮಾರ ಸುಳ್ಳದ, ವಿಕಾಸ ಸೊಪ್ಪಿನ, ಡೇನಿಯಲ್ ಐಕೊಸ್, ಲತಾ ಅಂಗಡಿ, ರೂಪಾಲಿ ನರಗುಂದ, ರುಕ್ಮಿಣಿ, ಐಟಿ ಉದ್ಯಮಿ ಸನಾ ಕುದರಿ, ಹಸನ್ ಅಲಿ ಶೇಖ್, ಡಾ. ವಿ.ಬಿ. ಮಾಗನೂರ, ಮಹಬೂಬ್ ಹೊಸಮನಿ, ಶಿವಕುಮಾರ ಬಾಗಲಕೋಟ, ಮಹಬೂಬ ಹರವಿ, ಮಂಜುನಾಥ ಸುಳ್ಳದ, ಶೌಕತ್ ಅಲಿ, ಕೃಷ್ಣ ಗೆಜ್ಜಿ, ಮಹಾಂತೇಶ ಡಿಡಲಕೊಪ್ಪ, ಸಂತೋಷ ಮಾನೆ, ತ್ಯಾಗರಾಜ ಅಮಲಪಟ್ಟಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.