
ಹುಬ್ಬಳ್ಳಿ: ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸಲು ಯಂಗ್ ಇಂಡಿಯನ್ಸ್ ಸಂಸ್ಥೆಯಿಂದ ನಗರದಲ್ಲಿ ಭಾನುವಾರ ಸೈಕಲ್ ಜಾಥಾ ನಡೆಯಿತು.
ಹೊಸೂರು ವೃತ್ತದಲ್ಲಿರುವ ಡಾ.ಎಂ.ಎಂ. ಜೋಶಿ ಆಸ್ಪತ್ರೆ ಬಳಿ ಆರಂಭಗೊಂಡು ಬಿವಿಬಿ ಎಂಜಿನಿಯರಿಂಗ್ ಕಾಲೇಜುವರೆಗೆ ಜಾಥಾ ನಡೆಯಿತು. 7ರಿಂದ 10ನೇ ತರಗತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸುಮಾರು 500 ಜನರು ಭಾಗವಹಿಸಿದ್ದರು.
ಸೈಕಲ್ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆಯ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವೀರೇಶ್, ‘ಮಕ್ಕಳು ಈಗಿನಿಂದಲೇ ರಸ್ತೆ ಸುರಕ್ಷತೆಯ ಬಗ್ಗೆ ಅರಿಯಬೇಕು. ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಿತ್ಯ ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸಬೇಕು’ ಎಂದು ಹೇಳಿದರು.
ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಡೀನ್ ಪ್ರೊ. ಸಂಜಯ ಕೋಟಬಾಗಿ, ರಸ್ತೆ ನಿಯಮಗಳ ಪಾಲನೆ, ಸುರಕ್ಷಿತ ಸೈಕ್ಲಿಂಗ್ ಪದ್ಧತಿಗಳು, ಹೆಲ್ಮೆಟ್ ಬಳಕೆ ಹಾಗೂ ರಸ್ತೆ ಅಪಘಾತ ತಡೆಗೆ ನಾಗರಿಕರ ಜವಾಬ್ದಾರಿ ಕುರಿತು ತಿಳಿಸಿದರು.
ಅತ್ಯುತ್ತಮವಾಗಿ ಸೈಕಲ್ ಅಲಂಕಾರ, ಅತ್ಯುತ್ತಮ ರಸ್ತೆ ಸುರಕ್ಷತಾ ಘೋಷವಾಕ್ಯ, ಅತ್ಯಧಿಕ ವಿದ್ಯಾರ್ಥಿಗಳ ಭಾಗವಹಿಸುವಿಕೆ ಹೊಂದಿದ ಶಾಲೆ, ಹೀಗೆ ಮೂರು ವಿಭಾಗಗಳಲ್ಲಿ ಬಹುಮಾನ ವಿತರಿಸಲಾಯಿತು.
ಯಂಗ್ ಇಂಡಿಯನ್ಸ್ ಸಂಸ್ಥೆಯ ಘಟಕದ ಅಧ್ಯಕ್ಷ ಸಮೀರ್ ಮಂಗಳವೇಡೆ, ಉಪಾಧ್ಯಕ್ಷೆ ದೀಪ್ತಿ ಜೋಶಿ, ಉಜ್ವಲ್ ಸಿಂಘಿ, ಸೌರಭ್ ಧರಣಪ್ಪನವರ, ಲೇಖಾ ಖೋನಾ, ನಿಕೇತ್ ಸಿಂಗ್ಹಾನಿಯಾ, ನವೀನ್ ಜೈನ್, ಪಾಯಲ್ ಮಹಾಜನ್, ಆಶೀಷ್ ಮಹಾಜನ್, ಸೋನಿಯಾ ಸಿಂಗ್ಹಾನಿಯಾ, ಶೆಟ್ಟಪ್ಪ ಫಿರಂಗಿ, ಶಿವಾನಂದ ದಂಡವಟಿಮಠ, ಸಿದ್ದು ಕುಬಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.