ADVERTISEMENT

ರಾಷ್ಟ್ರೀಯ ಯುವಜನೋತ್ಸವ; ಸಿಂಗಾರಗೊಂಡ ಹುಬ್ಬಳ್ಳಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 16:19 IST
Last Updated 10 ಜನವರಿ 2023, 16:19 IST
ಪ್ರಧಾನಿ ನರೇಂದ್ರ ಮೋದಿ ಯುವಜನೋತ್ಸವ ಉದ್ಘಾಟನೆಗೆ ಆಗಮಿಸುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಗೋಕುಲ ರಸ್ತೆಯ ಬಳಿ ಅಳವಡಿಸಿರುವ ಕಟೌಟ್‌ ಗಮನಸೆಳೆಯಿತು  /ಪ್ರಜಾವಾಣಿ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಯುವಜನೋತ್ಸವ ಉದ್ಘಾಟನೆಗೆ ಆಗಮಿಸುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಗೋಕುಲ ರಸ್ತೆಯ ಬಳಿ ಅಳವಡಿಸಿರುವ ಕಟೌಟ್‌ ಗಮನಸೆಳೆಯಿತು  /ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನಾ ಸಮಾರಂಭಕ್ಕೆ ಜ. 12ರಂದು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿರುವ ಹಿನ್ನೆಲೆಯಲ್ಲಿ, ವಾಣಿಜ್ಯ ನಗರಿ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ವಿಮಾನ ನಿಲ್ದಾಣದಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿರುವ ಕ್ಲಬ್‌ ರಸ್ತೆಯ ರೈಲ್ವೆ ಮೈದಾನದವರೆಗಿನ ರಸ್ತೆಯನ್ನು ಶುಚಿಗೊಳಿಸಲಾಗಿದೆ. ಗುಂಡಿಗಳಿಗೆ ಡಾಂಬರು ಹಾಕಿ, ಸಮತಟ್ಟಗೊಳಿಸಲಾಗಿದೆ.

ಗೋಕುಲ ರಸ್ತೆ, ವಾಣಿವಿಲಾಸ ವೃತ್ತ, ಲಕ್ಷ್ಮೀ ವೇ ಬ್ರಿಜ್‌, ದೇಶಪಾಂಡೆ ನಗರ, ಸರ್ವೋದಯ ವೃತ್ತದ ರಸ್ತೆಯ ಇಕ್ಕೆಲಗಳಲ್ಲಿದ್ದ ದೂಳು ತೆಗೆಯಲಾಗಿದೆ. ರಸ್ತೆ ವಿಭಜಕಗಳಿಗೆ ಸುಣ್ಣ–ಬಣ್ಣ ಬಳಿದು ಅಲಂಕರಿಸಲಾಗಿದೆ. ಪರ್ಯಾಯ ಮಾರ್ಗವಾಗಿ ಗೋಕುಲ ರಸ್ತೆ, ಅಕ್ಷಯ ಪಾರ್ಕ್‌, ಶಿರೂರು ಪಾರ್ಕ್‌, ಕಿಮ್ಸ್‌ ಮುಖ್ಯರಸ್ತೆ, ಹೊಸೂರು ವೃತ್ತದ ಮಾರ್ಗಗಳನ್ನು ಪ್ರಧಾನಿ ಸಂಚಾರಕ್ಕೆ ಸಿದ್ಧಗೊಳಿಸಲಾಗಿದೆ.

ADVERTISEMENT

ಸರ್ವೋದಯ ವೃತ್ತದ ಬಳಿಯ ಮೇಲ್ಸೇತುವೆಗೆ ಹಾಗೂ ಕ್ಲಬ್‌ ರಸ್ತೆಯ ಅಕ್ಕಪಕ್ಕದ ತಡೆಗೋಡೆಗಳಿಗೆ ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಚಿತ್ರಗಳನ್ನು ಬಿಡಿಸಲಾಗಿದೆ. ಹಳೇ ರೈಲ್ವೆ ಡಿಜಿಎಂ ಕಚೇರಿಗೆ ತೆರಳುವ ರಸ್ತೆಗೆ ಡಾಂಬರು ಹಾಕಿ, ನೂತನ ರಸ್ತೆಯನ್ನಾಗಿ ಮಾಡಲಾಗಿದೆ. ಪ್ರಧಾನಿ ಆಗಮಿಸಲಿರುವ ಮಾರ್ಗದುದ್ದಕ್ಕೂ ಸ್ವಾಮಿ ವಿವೇಕಾನಂದ, ಪ್ರಧಾನಿ ಮೋದಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಭಾವಚಿತ್ರಗಳಿರುವ ಸ್ವಾಗತದ ಫ್ಲೆಕ್ಸ್‌, ಕಟೌಟ್‌, ಬ್ಯಾನರ್‌ಗಳನ್ನು ಹಾಕಲಾಗಿದೆ. ರಸ್ತೆ ಮಧ್ಯದ ವಿದ್ಯುತ್‌ ಕಂಬಗಳಿಗೆ ಕೇಸರಿ ಬಟ್ಟೆ ತೂಗು ಬಿಡಲಾಗಿದೆ.

ಸಿದ್ಧಗೊಂಡ ವೇದಿಕೆ: 50X40 ಉದ್ದ– ಅಗಲದ ಪ್ರಧಾನ ವೇದಿಕೆ ನಿರ್ಮಿಸಿದ್ದು, ಉತ್ಸವದಲ್ಲಿ ಪಾಳ್ಗೊಳ್ಳುವ ಕಲಾವಿದರಿಗೆ, ಗಣ್ಯರಿಗೆ ಹಾಗೂ ಸಾರ್ವಜನಿಕರಿಗೆಂದು 100X100 ಉದ್ದ–ಅಗಲದ ಬೃಹತ್‌ ಪೆಂಡಾಲ್‌ ಹಾಕಲಾಗಿದೆ. ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡ ವಿವಿಧ ರಾಜ್ಯಗಳ ಆಯ್ದ 7,500 ಮಂದಿ ಯುವಕರಿಗೆ ಹಾಗೂ ಒಂದು ಸಾವಿರದಷ್ಟು ಗಣ್ಯರಿಗೆ ಮುಂಭಾಗದಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಒಟ್ಟು 30 ಸಾವಿರ ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಶ್ವಾನದಳ ಹಾಗೂ ಬಾಂಬ್‌ ಪತ್ತೆ ದಳ ಸಿಬ್ಬಂದಿ ಮಂಗಳವಾರ ಮೈದಾನದಲ್ಲಿ ಪರಿಶೀಲನೆ ನಡೆಸಿದರು.

ಮೂರು ಸಾವಿರಕ್ಕೂ ಅಧಿಕ ಸಿಬ್ಬಂದಿ!

ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಮೂರು ಸಾವಿರಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಭದ್ರತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಸಂಚರಿಸಲಿರುವ ಮಾರ್ಗದಲ್ಲಿ ಬುಧವಾರ ಮಧ್ಯಾಹ್ನ 12ಕ್ಕೆ ಕರ್ತವ್ಯದಲ್ಲಿ ನಿಯೋಜಿತರಾಗಿ, ತಾಲೀಮು ನಡೆಸಲಿದ್ದಾರೆ.

ಪ್ರಧಾನಿಯವರ ಸುರಕ್ಷತೆ ಹಿನ್ನೆಲೆಯಲ್ಲಿ ಎಸ್‌ಪಿಜಿ ಅಧಿಕಾರಿಗಳ ತಂಡ ಮೈದಾನಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಕೆಲವೆಡೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸ್ಥಳೀಯಾಡಳಿತಕ್ಕೆ ಸೂಚನೆ ನೀಡಿದೆ. ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗಿನ ಮಾರ್ಗದ ಆಯ್ದ ಪ್ರದೇಶದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.

ಅನಗತ್ಯ ಬ್ಯಾರಿಕೇಡ್‌; ಆಪ್‌ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಎರಡು ದಿನ ಮುಂಚಿತವಾಗಿ ನಗರದಲ್ಲಿ ಬ್ಯಾರಿಕೇಡ್‌ ಹಾಕಿ ವಾಹನಗಳ ಸಂಚಾರಕ್ಕೆ ಸಮಸ್ಯೆ ತೊಂದರೆಯೊಡ್ಡಿ, ಸುಣ್ಣ-ಬಣ್ಣ ಹಚ್ಚುವ ಮಾಡಲಾಗುತ್ತಿದೆ ಎಂದು ಆಮ್‌ ಆದ್ಮಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.

ಜಿಲ್ಲಾಡಳಿತ ಶಿಸ್ತು, ಭದ್ರತೆ, ಸುವ್ಯವಸ್ಥೆ ನೆಪದಲ್ಲಿ ಗೋಕುಲ ರಸ್ತೆ, ದೇಶಪಾಂಡೆ ನಗರ, ಕ್ಲಬ್‌ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಿ ಏಕಮುಖ ಸಂಚಾರ ಮಾಡಲಾಗಿದೆ. ಪಾಲಿಕೆ ಮತ್ತು ಜಿಲ್ಲಾಡಳಿತ ಆಡಳಿತದ ವಿಫಲತೆ ಮುಚ್ಚಿಕೊಳ್ಳಲು, ಸಾರ್ವಜನಿಕರಿಗೆ ತೊಂದರೆಯಾದರೂ ಸರಿಯೆಂದು ಹೀಗೆ ಮಾಡುತ್ತಿದೆ’ ಎಂದು ಪಕ್ಷದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಅನಂತಕುಮಾರ ಬುಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರೋಡ್‌ ಷೋ’ನಲ್ಲಿ ಸ್ವಾಗತಕ್ಕೆ ನಿರ್ಧಾರ

‘ಯುವ ಜನೋತ್ಸವ’ ಉದ್ಘಾಟನೆ ಹಿನ್ನೆಲೆಯಲ್ಲಿ ಹು–ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮಂಗಳವಾರ ನಗರದ ಪಕ್ಷದ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿದರು. ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗೆ ನಡೆಯಲಿರುವ ಪ್ರಧಾನಿ ಅವರ ‘ಬೃಹತ್ ರೋಡ್ ಷೋ’ನಲ್ಲಿ ಕಾರ್ಯಕರ್ತರು ಪಾಲ್ಗೊಂಡು ಸ್ವಾಗತ ಕೋರಲು ತೀರ್ಮಾನಿಸಲಾಯಿತು. ಪ್ರಭು ನವಲಗುಂದಮಠ, ಶಿವು ಮೆಣಸಿನಕಾಯಿ, ಸಂಜಯ ಕಪಟಕರ, ರಂಗಾ ಬದ್ದಿ, ಸತೀಶ ಶೇಜವಾಡಕರ, ಜಗದೀಶ ಬುಳ್ಳಾನವರ, ಲಕ್ಷ್ಮೀಕಾಂತ ಘೋಡಕೆ, ನಾಗರತ್ನ ಬಳ್ಳಾರಿ, ಮಿಥುನ ಚವ್ಹಾಣ್‌ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.