ADVERTISEMENT

ವೈಜ್ಞಾನಿಕವಾಗಿ ರಸ್ತೆ ಉಬ್ಬು ನಿರ್ಮಾಣ ಮಾಡಲು ಟೆಂಡರ್

ತೆರವು ಕಾರ್ಯ ಪೂರ್ಣ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 14:15 IST
Last Updated 3 ಜುಲೈ 2018, 14:15 IST

ಹುಬ್ಬಳ್ಳಿ:ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಅವಳಿ ನಗರದ ಅವೈಜ್ಞಾನಿಕ ರಸ್ತೆ ಉಬ್ಬು ತೆರವು ಕಾರ್ಯಾಚರಣೆ ಪೂರ್ಣಗೊಂಡಿದೆ.

ದಕ್ಷಿಣ ವಿಭಾಗದಲ್ಲಿ ವೈಜ್ಞಾನಿಕವಾಗಿ ರಸ್ತೆ ಉಬ್ಬು ನಿರ್ಮಾಣ ಮಾಡಲು ₹29.80 ಲಕ್ಷ ಮೊತ್ತದ ಟೆಂಡರ್ ಸಹ ಕರೆಯಲಾಗಿದೆ. ಕನಿಷ್ಠ 4.5 ಮೀಟರ್ ಅಗಲ ಇರುವ ಮುಖ್ಯ ರಸ್ತೆಗಳಲ್ಲಿ ಒಟ್ಟು 75 ರಸ್ತೆ ಉಬ್ಬು ನಿರ್ಮಾಣ ಮಾಡಲಾಗುತ್ತದೆ. ಮುಖ್ಯ ರಸ್ತೆಗಳಲ್ಲಿ ಮಾತ್ರ ಉಬ್ಬು ಹಾಕಲಾಗುತ್ತದೆ. ಯಾವ ರಸ್ತೆಗಳಲ್ಲಿ ವಾಹನ ಸವಾರರು ಅತಿ ವೇಗದಲ್ಲಿ ಸಂಚರಿಸುತ್ತಾರೆ, ಎಲ್ಲಿ ಹಾಕಿದರೆ ಸೂಕ್ತ ಎಂಬುದರ ಬಗ್ಗೆ ಸಂಚಾರ ಠಾಣೆ ಪೊಲೀಸರಿಗೆ ಪ್ರಾಯೋಗಿಕ ಮಾಹಿತಿ ಇರುತ್ತದೆ. ಅಪಾಯಕಾರಿಯಾಗಿರುವ ನಿರ್ದಿಷ್ಟ ಸ್ಥಳಗಳ ಬಗ್ಗೆಯೂ ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. ಪೊಲೀಸರೊಂದಿಗೆ ಚರ್ಚಿಸಿ ಯಾವ ರಸ್ತೆಯ, ಯಾವ ಭಾಗದಲ್ಲಿ ಉಬ್ಬು ನಿರ್ಮಾಣ ಮಾಡಬೇಕೆಂಬುದನ್ನು ಅಂತಿಮಗೊಳಿಸಲಾಗುತ್ತದೆ ಎಂದು ಪಾಲಿಕೆ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಿರಿದಾದ ಒಳ ರಸ್ತೆಗಳಲ್ಲಿ ವೈಜ್ಞಾನಿಕ ರಸ್ತೆ ಉಬ್ಬು ನಿರ್ಮಾಣ ಮಾಡುವುದು ಕಷ್ಟಸಾಧ್ಯ. ಅಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಯೋಚಿಸಲಾಗುವುದು. ಜಲಮಂಡಳಿ, ಕೊಳಚೆ ನಿರ್ಮೂಲನ ಮಂಡಳಿ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಹಲವು ಭಾಗಗಳಲ್ಲಿ ನಡೆಯುತ್ತಿರುವುದರಿಂದ ಅಗತ್ಯ ಇದ್ದರೂ ಕೆಲವು ಕಡೆ ರಸ್ತೆ ಉಬ್ಬು ನಿರ್ಮಾಣ ಮಾಡಲು ಸದ್ಯಕ್ಕೆ ಸಾಧ್ಯವಾಗದು. ಅದನ್ನು ಹೊರತುಪಡಿಸಿದ ಹಾಗೂ ಅವಕಾಶ– ಅಗತ್ಯ ಇರುವ ಕಡೆ ಮೊದಲು ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.

ADVERTISEMENT

ಉತ್ತರ ಹಾಗೂ ದಕ್ಷಿಣ ವಿಭಾಗದಲ್ಲಿ ಒಟ್ಟು 200ಕ್ಕಿಂತ ಅಧಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆಗೆ ಜೆಸಿಬಿಗಳನ್ನು ಬಳಸಲಾಗಿದೆ. ಅವುಗಳಿಗೆ ಗಂಟೆಗೆ ₹800 ಬಾಡಿಗೆ ದರ ನಿಗದಿಪಡಿಸಲಾಗಿತ್ತು. ಆದ್ದರಿಂದ ಬಾಡಿಗೆಯ ಮೊತ್ತ ಒಂದು ಲಕ್ಷವೂ ದಾಟದು ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.