ADVERTISEMENT

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಸ್ಥಾನ ಯಾರಿಗೆ?

ಜುಲೈ 15ರಂದು ಹಾಲಿ ನಾಯಕರ ಅವಧಿ ಮುಕ್ತಾಯ; ಹೆಚ್ಚಿದ ಪೈಪೋಟಿ

ಸತೀಶ ಬಿ.
Published 23 ಜುಲೈ 2024, 4:16 IST
Last Updated 23 ಜುಲೈ 2024, 4:16 IST
ರಾಜಶೇಖರ ಕಮತಿ
ರಾಜಶೇಖರ ಕಮತಿ   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರ ಅವಧಿ ಮುಗಿದಿದ್ದು, ನೂತನ ವಿರೋಧ ಪಕ್ಷದ ನಾಯಕ ಯಾರಾಗಲಿದ್ದಾರೆ ಎಂಬುದು ಕೂತೂಹಲ ಮೂಡಿಸಿದೆ.

82 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 38 ಸದಸ್ಯರನ್ನು ಹೊಂದಿದ್ದು, ಕಾಂಗ್ರೆಸ್‌ನ 33 ಸದಸ್ಯರಿದ್ದಾರೆ. ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವಾಗಿದೆ.

22ನೇ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸುವರ್ಣ ಕಲ್ಲಕುಂಟ್ಲ ಅವರ ಅವಧಿ ಜುಲೈ 15ಕ್ಕೆ ಮುಗಿದಿದೆ. ಜು.31ರಂದು 23ನೇ ಅವಧಿಯ ಮೊದಲ ಸಾಮಾನ್ಯ ಸಭೆ ನಡೆಯಲಿದ್ದು, ಅಷ್ಟರಲ್ಲಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ನೂತನ ವಿರೋಧ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದ್ದು, ಆಕಾಂಕ್ಷಿಗಳು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.

ADVERTISEMENT

ನಾಲ್ಕು ಬಾರಿ ಮಹಾನಗರ ಪಾಲಿಕೆ ಸದಸ್ಯರಾಗಿರುವ ಬಿಜೆಪಿಯ ರಾಮಪ್ಪ ಬಡಿಗೇರ ಅವರು ಮೇಯರ್ ಆಗಿದ್ದು, ಹಿರಿಯ ಸದಸ್ಯ ವೀರಣ್ಣ ಸವಡಿ ಅವರನ್ನು ಸಭಾನಾಯಕರನ್ನಾಗಿ ನೇಮಕ ಮಾಡಲಾಗಿದೆ. ಈ ಇಬ್ಬರೂ ಅನುಭವಿಗಳಾಗಿದ್ದಾರೆ. ಆಡಳಿತ ಪಕ್ಷವನ್ನು ಕಟ್ಟಿ ಹಾಕಲು, ಸಾರ್ವಜನಿಕರ ಸಮಸ್ಯೆಗಳ ನಿವಾರಣೆಗೆ ಸಮರ್ಥವಾಗಿ ಹೋರಾಟ ಮಾಡುವ ನಿಟ್ಟಿನಲ್ಲಿ ಅನುಭವಿಗಳನ್ನು ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡಬೇಕಿದೆ. ಆದರೆ, ಪಕ್ಷದ ವರಿಷ್ಠರು ಕ್ಷೇತ್ರವಾರು ಆಯ್ಕೆ ಮಾಡುತ್ತಾರೋ ಇಲ್ಲವೆ ಅನುಭವಕ್ಕೆ ಮಣೆ ಹಾಕುತ್ತಾರೋ ಎಂಬುದು ನಿಗೂಢವಾಗಿದೆ.

ಹಿಂದಿನ ಅವಧಿಯಲ್ಲಿ ದೊರೆರಾಜ ಮಣಿಕುಂಟ್ಲ, ಆ ನಂತರ ಸುವರ್ಣ ಕಲ್ಲಕುಂಟ್ಲ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಇವರಿಬ್ಬರೂ ಹುಬ್ಬಳ್ಳಿ –ಧಾರವಾಡ ಪೂರ್ವ, ಸೆಂಟ್ರಲ್ ವಿಧಾನಸಭಾ ಕ್ಷೇತ್ರದವರು. ಈ ಬಾರಿ ಹು–ಧಾ ಪಶ್ಚಿಮ, ಧಾರವಾಡ ಕ್ಷೇತ್ರದವರನ್ನು ಪರಿಗಣಿಸಬೇಕು ಎಂಬ ಬೇಡಿಕೆ ಹೆಚ್ಚಾಗಿದೆ.

ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ಧಾರವಾಡ ವಿಧಾನಸಭಾ ಕ್ಷೇತ್ರದ ರಾಜಶೇಖರ ಕಮತಿ (ವಾರ್ಡ್ ಸಂಖ್ಯೆ 4) ಮತ್ತು ಪಶ್ಚಿಮ ಕ್ಷೇತ್ರದ ಶಂಭುಗೌಡ ಸಾಲಿಮನಿ (ವಾರ್ಡ್ ಸಂಖ್ಯೆ 14), ಕವಿತಾ ಕಬ್ಬೇರ (ವಾರ್ಡ್ ಸಂಖ್ಯೆ 20), ಶಂಕರಪ್ಪ ಹರಿಜನ (ವಾರ್ಡ್ ಸಂಖ್ಯೆ 31), ಇಮ್ರಾನ್ ಯಲಿಗಾರ (ವಾರ್ಡ್ ಸಂಖ್ಯೆ 33) ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಸೆಂಟ್ರಲ್ ಕ್ಷೇತ್ರದ ಮೊಹಮ್ಮದ್ ಇಸ್ಮಾಯಿಲ್‌ ಭದ್ರಾಪುರ (ವಾರ್ಡ್ 53) ಅವರು ಬೇಡಿಕೆ ಮಂಡಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ದೊರೆರಾಜ ಮಣಿಕುಂಟ್ಲ, ಸುವರ್ಣ ಕಲ್ಲಕುಂಟ್ಲ ಮಾತ್ರ ಹಿರಿಯ ಸದಸ್ಯರಾಗಿದ್ದಾರೆ. ಉಳಿದಂತೆ ಎಲ್ಲ ಸದಸ್ಯರೂ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.

‘ಒಂದು ವರ್ಷದ ಅವಧಿಗೆ ಮಾತ್ರ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಬೇಕು ಎಂಬ ನಿಯಮವಿಲ್ಲ. ಈ ಹಿಂದೆ ಮೂರ್ನಾಲ್ಕು ವರ್ಷ ಒಬ್ಬರೇ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ ಉದಾಹರಣೆಗಳು ಇವೆ. ಮಹಾನಗರ ಪಾಲಿಕೆಯ ಹಿರಿಯ ಸದಸ್ಯೆಯಾಗಿದ್ದೇನೆ. ಇನ್ನೊಂದು ಅವಧಿಗೆ ಅವಕಾಶ ನೀಡಿದರೆ ಸಮರ್ಥವಾಗಿ ಕೆಲಸ ಮಾಡುತ್ತೇನೆ’ ಎನ್ನುತ್ತಾರೆ ಸುವರ್ಣ ಕಲ್ಲಕುಂಟ್ಲ.

ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ನೀಡಿದರೆ ಜವಾಬ್ದಾರಿಯಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ

–ರಾಜಶೇಖರ ಕಮತಿ, ಮಹಾನಗರ ಪಾಲಿಕೆ ಸದಸ್ಯ

ಹುಬ್ಬಳ್ಳಿ –ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷನಾಗಿದ್ದು ಎಲ್ಲ ವಾರ್ಡ್‌ಗಳಲ್ಲಿ ಸಮಸ್ಯೆಗಳ ಅರಿವಿದೆ. ನನ್ನನ್ನು ಪರಿಗಣಿಸಿದರೆ ಸಮರ್ಥವಾಗಿ ಕಾರ್ಯ ನಿರ್ವಹಿಸುವೆ

–ಇಮ್ರಾನ್ ಎಲಿಗಾರ, ಮಹಾನಗರ ಪಾಲಿಕೆ ಸದಸ್ಯ

ಶೀಘ್ರ ಸಭೆ ನಡೆಸಿ ನೇಮಕ

ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಮತ್ತು ಪಕ್ಷದ ಮುಖಂಡರೊಂದಿಗೆ ಜು.22 ಅಥವಾ ಜು.23ರಂದು ಸಭೆ ನಡೆಸಿ ಎಲ್ಲರ ಅಭಿಪ್ರಾಯ ಪಡೆದು ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಲಾಗುವುದುಹುಬ್ಬಳ್ಳಿ–ಧಾರವಾಡ ಮಹಾನಗರ ಕಾಂಗ್ರೆಸ್ ಜಿಲ್ಲಾ ಘಟಕ ಅಲ್ತಾಫ್ ಹಳ್ಳೂರ ಹೇಳಿದರು. ಪಾಲಿಕೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಹಲವರು ಆಕಾಂಕ್ಷಿಗಳಿದ್ದು ಬೇಡಿಕೆ ಸಲ್ಲಿಸಿದ್ದಾರೆ. ಈ ಹಿಂದೆ ಅವಕಾಶ ಸಿಗದ ವಿಧಾನಸಭಾ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.