ADVERTISEMENT

ಹುಬ್ಬಳ್ಳಿ | ರೈತನ ಕೈ ಹಿಡಿದ ಮೇಕೆ ಸಾಕಾಣಿಕೆ

ಸಮಗ್ರ ಕೃಷಿಯಲ್ಲಿ ಯಶ ಕಂಡ ಪ್ರವೀಣ ಶೆರವಾಡ

ಕಲಾವತಿ ಬೈಚಬಾಳ
Published 23 ಮೇ 2025, 6:18 IST
Last Updated 23 ಮೇ 2025, 6:18 IST
ಆಡಿನ ಶೆಡ್‌ನಲ್ಲಿ ಅಣ್ಣಿಗೇರಿ ತಾಲ್ಲೂಕಿನ ಬಲ್ಲರವಾಡ ಗ್ರಾಮದ ರೈತ ಪ್ರವೀಣ ಶೆರವಾಡ 
ಆಡಿನ ಶೆಡ್‌ನಲ್ಲಿ ಅಣ್ಣಿಗೇರಿ ತಾಲ್ಲೂಕಿನ ಬಲ್ಲರವಾಡ ಗ್ರಾಮದ ರೈತ ಪ್ರವೀಣ ಶೆರವಾಡ    

ಹುಬ್ಬಳ್ಳಿ: ಒಂದೇ ರೀತಿಯ ಕೃಷಿಯನ್ನು ಅವಲಂಬಿಸದೇ, ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ನೆಮ್ಮದಿಯ ಜೀವನ ಕಾಣುತ್ತಿರುವವರು ಅಣ್ಣಿಗೇರಿ ತಾಲ್ಲೂಕಿನ ಬಲ್ಲರವಾಡ ಗ್ರಾಮದ ರೈತ ಪ್ರವೀಣ ಶೆರವಾಡ.

20 ವರ್ಷಗಳಿಂದ ಕೃಷಿಯಲ್ಲೇ ಬದುಕು ಕಂಡುಕೊಂಡಿರುವ 40 ವರ್ಷದ ಪ್ರವೀಣ ಶೆರವಾಡ ಅವರು ಓದಿದ್ದು ಎಸ್‌ಎಸ್ಎಲ್‌ಸಿ. ತಮ್ಮ 7 ಎಕರೆ ಮಳೆಯಾಶ್ರಿತ ಮತ್ತು 8 ಎಕರೆ ನೀರಾವರಿ ಜಮೀನಿನಲ್ಲಿ ವಿವಿಧ ರೀತಿಯ ಬೇಸಾಯ ಮಾಡುತ್ತಿದ್ದರೂ ಇವರ ಕೈ ಹಿಡಿದಿದ್ದು ಮೇಕೆ ಸಾಕಾಣಿಕೆ.

ವಿವಿಧ ರೀತಿಯ ಧಾನ್ಯಗಳು, ಹಣ್ಣಿನ ಗಿಡಗಳ ಬೆಳೆಸಿದ್ದು, 4 ಎಕರೆಯಲ್ಲಿ ಬ್ಯಾಂಬೊ ಗಿಡಗಳನ್ನು ಹಾಗೂ 2 ಎಕರೆಯಲ್ಲಿ ನೇಪಿಯರ್ ಹುಲ್ಲು ಬೆಳೆಸಿದ್ದಾರೆ. 

ADVERTISEMENT

‘ಜರ್ಸಿ ತಳಿಯ 6 ಆಕಳು, ಅಂದಾಜು 200 ಆಡುಗಳಿವೆ. ಆಡುಗಳಿಗೆ (ಮೇಕೆ) ಕ್ರಾಸ್‌ ಬ್ರೀಡಿಂಗ್‌ ಸಹ ಮಾಡುತ್ತೇವೆ. ಆಕಳುಗಳಿಂದ ಪ್ರತಿದಿನ 40 ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ದೊಡ್ಲ ಹಾಗೂ ಕೆಎಂಎಫ್‌ಗೆ ಅಂದಾಜು 35 ಲೀಟರ್‌ ಮಾರುತ್ತೇವೆ. ತಿಂಗಳಿಗೆ ₹30 ಸಾವಿರ ಆದಾಯ ಬರುತ್ತದೆ’ ಎಂದು ರೈತ ಪ್ರವೀಣ ಶೆರವಾಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ವರ್ಷಕ್ಕೆ ಅಂದಾಜು 100ರಿಂದ 150 ಆಡುಗಳನ್ನು ಸ್ಥಳೀಯ ಹಾಗೂ ಸುತ್ತಮುತ್ತಲಿನ ಮಾರುಕಟ್ಟೆ, ಸಂತೆಗಳಲ್ಲಿ ಮಾರುತ್ತೇವೆ. ಮರಿಗಳಿಗೆ ಅಗತ್ಯದಷ್ಟು ಪೋಷಕಾಂಶಯುಕ್ತ ಆಹಾರ ನೀಡಿದರೆ ಚನ್ನಾಗಿ ಬೆಳೆಯುತ್ತವೆ. ವರ್ಷಕ್ಕೆ ಅಂದಾಜು ಏಳೂವರೆ ಲಕ್ಷ ರೂಪಾಯಿ ಆದಾಯ ಪಡೆಯಬಹುದು’ ಎಂದೂ ಮಾಹಿತಿ ನೀಡಿದರು. 

‘ವಿಜಯಪುರ, ಉತ್ತರ ಕನ್ನಡ ಜಿಲ್ಲೆಗಳಿಂದ ಆಡಿನ ಗೊಬ್ಬರಕ್ಕೆ ಹೆಚ್ಚು ಬೇಡಿಕೆ ಇದೆ. ಕೃಷಿ ಭೂಮಿಗೆ ಈ ಗೊಬ್ಬರ ಬಳಸುವುದರಿಂದ ಫಲವತ್ತತೆ ಹೆಚ್ಚುತ್ತದೆ. ಒಂದು ಟ್ರ್ಯಾಕ್ಟರ್‌ ಟ್ರಾಲಿ ಆಡಿನ ಗೊಬ್ಬರಕ್ಕೆ ₹6 ಸಾವಿರ ದರವಿದೆ. ವರ್ಷಕ್ಕೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಆದಾಯ ಸಿಗುತ್ತದೆ. ಅಲ್ಲದೇ, ರೈತ ಉತ್ಪಾದಕ ಕೇಂದ್ರ, ಅಗ್ರೋ ಏಜೆನ್ಸಿ ಇದ್ದು, ಕುಸುಬೆ, ಶೇಂಗಾ ಎಣ್ಣೆ, ಖಾರದಪುಡಿ ಸಹ ತಯಾರಿಸಿ, ಮಾರಾಟ ಮಾಡುತ್ತೇವೆ’ ಎಂದು ಹೇಳಿದರು.

ಕೃಷಿ ಇಲಾಖೆಯಿಂದ ನೆರವು: ‘ಕೃಷಿ ಇಲಾಖೆಯಿಂದ ಸ್ಪ್ರಿಂಕ್ಲರ್‌ ಪೈಪ್‌, ಬೆಳೆಗಳಿಗೆ ಎಣ್ಣೆ ಹೊಡೆಯುವ ಪಂಪ್‌ ಪಡೆದುಕೊಂಡಿದ್ದು, 100X 100 ಮತ್ತು 100X150 ಅಳತಯೆ ಕೃಷಿಹೊಂಡ ನಿರ್ಮಿಸಿಕೊಂಡಿದ್ದೇವೆ. ಬಿತ್ತನೆ ಬೀಜಗಳನ್ನು ಪಡೆದುಕೊಂಡಿದ್ದೇವೆ’ ಎಂದರು.

ಆಡಿನ ಶೆಡ್‌ನಲ್ಲಿ ಅಣ್ಣಿಗೇರಿ ತಾಲ್ಲೂಕಿನ ಬಲ್ಲರವಾಡ ಗ್ರಾಮದ ರೈತ ಪ್ರವೀಣ ಶೆರವಾಡ 
ಆಡಿನ ಶೆಡ್‌ನಲ್ಲಿ ಅಣ್ಣಿಗೇರಿ ತಾಲ್ಲೂಕಿನ ಬಲ್ಲರವಾಡ ಗ್ರಾಮದ ರೈತ ಪ್ರವೀಣ ಶೆರವಾಡ 
ಕೇವಲ ಕೃಷಿಯನ್ನಷ್ಟೇ ಅವಲಂಬಿಸದೇ ಉಪ ಕಸುಬು ಮಾಡುವುದರಿಂದ ಹೆಚ್ಚಿನ ಆದಾಯ ಪಡೆಯಬಹುದು. ಶ್ರಮವಹಿಸಿ ಸ್ವತಃ ದುಡಿದಲ್ಲಿ ತಕ್ಕ ಪ್ರತಿಫಲ ಸಿಗುವುದು ನಿಶ್ಚಿತ ಪ್ರವೀಣ ಶೆರವಾಡ
ರೈತ ಬಲ್ಲರವಾಡ ಗ್ರಾಮ ಅಣ್ಣಿಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.