ADVERTISEMENT

ಹುಬ್ಬಳ್ಳಿ | ಮನೆ ಹಂಚಿಕೆ: ಐತಿಹಾಸಿಕ ದಾಖಲೆಯಾಗಲಿ: ಜಮೀರ್ ಅಹ್ಮದ್ ಖಾನ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 5:46 IST
Last Updated 20 ಜನವರಿ 2026, 5:46 IST
ಹುಬ್ಬಳ್ಳಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿದರು
ಹುಬ್ಬಳ್ಳಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿದರು   

ಹುಬ್ಬಳ್ಳಿ: ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ರಾಜ್ಯದಾದ್ಯಂತ ನಿರ್ಮಿಸಿರುವ 42,345 ಮನೆಗಳ ಹಂಚಿಕೆ ಕಾರ್ಯಕ್ರಮ ಜ.24ರಂದು ನಗರದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಯಿತು.

ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸುವ, ಸುಮಾರು 2 ಲಕ್ಷ ಜನರನ್ನು ಸೇರಿಸುವ ಕುರಿತು ಚರ್ಚಿಸಲಾಯಿತು.

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ‘ಬಡವರಿಗೆ ಸೂರು ಕಲ್ಪಿಸುವ ಈ ಕಾರ್ಯಕ್ರಮ ಇತಿಹಾಸದ ಪುಟ ಸೇರಬೇಕು. ಕಾಂಗ್ರೆಸ್ ಸರ್ಕಾರ ಬಡವರ ಪರ ಎಂಬ ಸಂದೇಶ ಇಡೀ ದೇಶಕ್ಕೆ ರವಾನೆಯಾಗಬೇಕು. ಇದು ಕಾರ್ಯಕರ್ತರಿಂದ ಮಾತ್ರ ಸಾಧ್ಯ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಇಡೀ ದೇಶದಲ್ಲಿಯೇ ಇಷ್ಟೊಂದು ಮನೆಗಳನ್ನು ಬಡವರಿಗೆ ಯಾವ ಸರ್ಕಾರವೂ ನೀಡಿಲ್ಲ. ಬಿಜೆಪಿಯವರು ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡದೆ ಕೇವಲ ಹಿಂದೂ– ಮುಸ್ಲಿಂ ವಿಷಯ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದು, ಪಕ್ಷದ ಕಾರ್ಯಕರ್ತರು ಇದನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ಈ ಭಾಗದ ಕಾರ್ಯಕರ್ತರಲ್ಲಿ ಹೆಚ್ಚಿನ ಹುಮ್ಮಸ್ಸು ಇದೆ. ಪಕ್ಷದ ಕಾರ್ಯಕ್ರಮವನ್ನು ಸ್ವಂತದ್ದು ಎಂದು ಭಾವಿಸುತ್ತಾರೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. ಬೃಹತ್ ಪೆಂಡಾಲ್ ಹಾಕಿ 1.30 ಲಕ್ಷ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. 2 ಲಕ್ಷ ಜನರಿಗೆ ಉಪಾಹಾರದ ವ್ಯವಸ್ಥೆ ಇರಲಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ‘ಧಾರವಾಡ ಜಿಲ್ಲೆಯಿಂದಷ್ಟೇ ಅಲ್ಲದೆ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಿಂದಲೂ ಜನರು ಆಗಮಿಸಲಿದ್ದಾರೆ. ಇಷ್ಟು ಜನ ಒಂದೆಡೆ ಸೇರಬೇಕಾದರೆ ವಾಹನ ಸಮಸ್ಯೆ ಎದುರಾಗುತ್ತದೆ. ಇದನ್ನು ಪಕ್ಷದ ಜಿಲ್ಲಾಧ್ಯಕ್ಷರು ಸೂಕ್ತವಾಗಿ ನಿಭಾಯಿಸಬೇಕು. ಜನರನ್ನು ಕರೆದುಕೊಂಡು ಬರಲು ಬಸ್, ಟೆಂಪೊ ಮತ್ತಿತರ ವಾಹನ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.

ಶಾಸಕ ಎನ್.ಎಚ್. ಕೋನರಡ್ಡಿ, ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹಮದ್, ಎಫ್.ಎಚ್. ಜಕ್ಕಪ್ಪನವರ ಮಾತನಾಡಿದರು. ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಶಾಸಕ ಎಸ್.ಐ. ಅಕ್ಕಿ, ಹೆಸ್ಕಾಂ ಅಧ್ಯಕ್ಷ ಸಯ್ಯದ್ ಅಜೀಮ್‌ಪೀರ್ ಖಾದ್ರಿ, ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ದೀಪಕ್ ಚಿಂಚೋರೆ, ಮಹೇಂದ್ರ ಸಿಂಘಿ, ರಜತ್ ಉಳ್ಳಾಗಡ್ಡಿಮಠ ಇದ್ದರು.

ನನ್ನ ಕ್ಷೇತ್ರದಲ್ಲಿ ಇಂತಹ ಐತಿಹಾಸಿಕ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ. ಇದಕ್ಕೆ ಶಕ್ತಿ ತುಂಬುವ ಕೆಲಸ ಕಾರ್ಯಕರ್ತರು ಹಾಗೂ ಮುಖಂಡರಿಂದ ಆಗಬೇಕು. ಇದು ಐತಿಹಾಸಿಕ ಕಾರ್ಯಕ್ರಮ ಆಗಬೇಕು
ಪ್ರಸಾದ ಅಬ್ಬಯ್ಯ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.