ADVERTISEMENT

ಹುಬ್ಬಳ್ಳಿ | ನಂಗೆ ಕೊರೊನಾ ಸೋಂಕು ಆಸ್ಪತ್ರೆಗೆ ಸೇರಿಸಿ ಪ್ಲೀಸ್: ಸೋಂಕಿತನ ಅಳಲು

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 9:35 IST
Last Updated 12 ಜುಲೈ 2020, 9:35 IST
ಹುಬ್ಬಳ್ಳಿಯಲ್ಲಿ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು
ಹುಬ್ಬಳ್ಳಿಯಲ್ಲಿ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು   

ಹುಬ್ಬಳ್ಳಿ: ನಂಗೆ ಕೊರೊನಾ ಸೋಂಕು ದೃಢವಾಗಿದೆ. ದಯವಿಟ್ಟು ಆಸ್ಪತ್ರೆಗೆ ಸೇರಿಸಿ...

ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಭಾನುವಾರದ ಲಾಕ್ ಡೌನ್ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸರಿಗೆ ಹೀಗೆ ಗೊಗೆರೆದಿದ್ದು ಉತ್ತರ ಪ್ರದೇಶದ ವ್ಯಕ್ತಿ.

ಈ‌ ವ್ಯಕ್ತಿ ಎರಡು ದಿನಗಳ ಹಿಂದೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದ. ಶನಿವಾರ ರಾತ್ರಿ ಪಾಸಿಟಿವ್ ಎಂದು ವರದಿ ಬಂದಿದ್ದು, ನಗರದ ಹಳೆಯ ಬಸ್ ನಿಲ್ದಾಣ ಎದುರು ಇರುವ ಲಾಡ್ಜ್ ನಲ್ಲಿ ತಂಗಿದ್ದ.

ADVERTISEMENT

ನನಗೆ ಕೊರೊನಾ ಇದೆ‌ ಎಂದು ಶನಿವಾರ ರಾತ್ರಿ ಆಸ್ಪತ್ರೆಯಿಂದ ಮಾಹಿತಿ ಬಂದಿದೆ. ಪೋನ್ ಮಾಡಿ‌ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು‌ ಹೋಗಿ ಎಂದು ಅಂಗಲಾಚಿದರೂ ಯಾರೂ ಬಂದಿಲ್ಲ‌. ಅದಕ್ಕೆ ನಿಮಗೆ ವಿಷಯ ತಿಳಿಸಲು ಬಂದಿದ್ದೇನೆ ಎಂದು ಪೊಲೀಸರ ಬಳಿ ಸೋಂಕಿತ ವ್ಯಕ್ತಿ ಹೇಳಿಕೊಂಡಿದ್ದಾನೆ.

ಇದರಿಂದ ಗಾಬರಿಗೊಂಡ ಪೊಲೀಸರು ‌ದೂರದಿಂದಲೇ ಗದರಿಸಿ ಹೋಟೆಲ್ ಒಳಗೆ ಹೋಗುವಂತೆ ಆ ವ್ಯಕ್ತಿಗೆ ಹೇಳಿದರು. ಪೊಲೀಸರು ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ನೀಡಿದ ಬಳಿಕ ಅವರು ಅಂಬುಲೆನ್ಸ್ ನಲ್ಲಿ ಸೋಂಕಿತ ವ್ಯಕ್ತಿಯನ್ನು ಕರೆದುಕೊಂಡು ಹೋದರು. ಇದರಿಂದ ಚನ್ನಮ್ಮ ವೃತ್ತದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.