ADVERTISEMENT

ಹುಬ್ಬಳ್ಳಿ: ವ್ಯಾಪಾರಿಗಳಿಗೆ ಬಾಡಿಗೆ ದರ ಹೆಚ್ಚಳ ಬಿಸಿ

2019ರ ಸುತ್ತೋಲೆ ಅನ್ವಯ ಮಳಿಗೆಗಳ ಬಾಡಿಗೆ ದರ ಪರಿಷ್ಕರಣೆ

ಸತೀಶ ಬಿ.
Published 21 ಸೆಪ್ಟೆಂಬರ್ 2025, 5:43 IST
Last Updated 21 ಸೆಪ್ಟೆಂಬರ್ 2025, 5:43 IST
ಹುಬ್ಬಳ್ಳಿಯ ಹೊಸೂರಿನಲ್ಲಿರುವ ಹು–ಧಾ ಮಹಾನಗರ ಪಾಲಿಕೆಯ ವಾಣಿಜ್ಯ ಸಂಕೀರ್ಣ ಶಿಥಿಲವಾಗಿದೆ
ಹುಬ್ಬಳ್ಳಿಯ ಹೊಸೂರಿನಲ್ಲಿರುವ ಹು–ಧಾ ಮಹಾನಗರ ಪಾಲಿಕೆಯ ವಾಣಿಜ್ಯ ಸಂಕೀರ್ಣ ಶಿಥಿಲವಾಗಿದೆ   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು ಮಳಿಗೆಗಳ ಬಾಡಿಗೆ ದರವನ್ನು ಹೆಚ್ಚಿಸಿದ್ದು, ಒಂದು ತಿಂಗಳಲ್ಲಿ ₹2 ಕೋಟಿ ಬಾಡಿಗೆ ದರ ಸಂಗ್ರಹವಾಗಿದೆ.

ಹುಬ್ಬಳ್ಳಿಯಲ್ಲಿ 1,056, ಧಾರವಾಡದಲ್ಲಿ 489 ಸೇರಿ ಒಟ್ಟು 1,545 ಮಳಿಗೆಗಳಿವೆ. ಪ್ರದೇಶ, ಮಾರುಕಟ್ಟೆ ದರ ಆಧರಿಸಿ, 2019ರ ಸುತ್ತೋಲೆ ಅನ್ವಯ ಮಳಿಗೆಗಳ ಬಾಡಿಗೆ ದರ ಹೆಚ್ಚಿಸಲಾಗಿದೆ.

ಆಗಸ್ಟ್‌ 19ರಿಂದ ಚಲನ್ ಕೊಡಲು ಆರಂಭಿಸಲಾಗಿದ್ದು, ಸೆ.30ರ ಒಳಗೆ ದಂಡ ರಹಿತವಾಗಿ ಬಾಡಿಗೆ ದರ ಪಾವತಿಸಬಹುದಾಗಿದೆ. 2025–26ನೇ ಸಾಲಿನಲ್ಲಿ ದಂಡ ರಹಿತವಾಗಿ ₹7 ಕೋಟಿ ಸಂಗ್ರಹಿಸುವ ಗುರಿ ಇದೆ. ಕಳೆದ ಸಾಲಿನಲ್ಲಿ ₹3.92 ಕೋಟಿ ಸಂಗ್ರಹ ಗುರಿ ಇತ್ತು. ₹3.70 ಕೋಟಿ ಸಂಗ್ರಹವಾಗಿತ್ತು.

ADVERTISEMENT

‘ಈ ಹಿಂದೆ 2018–19ರಲ್ಲಿ ಹೆಚ್ಚಳವಾಗಿತ್ತು. ಏಳು ವರ್ಷಗಳ ನಂತರ ದರ ಹೆಚ್ಚಳವಾಗಿದೆ. ಆ ನಂತರ ಹೆಚ್ಚಳವಾಗಿರಲಿಲ್ಲ. ಈಗ ಸರ್ಕಾರದ ಸುತ್ತೋಲೆ ಅನ್ವಯ ಹೆಚ್ಚಿಸಲಾಗಿದೆ. ಸಾರ್ವಜನಿಕರು, ವ್ಯಾಪಾರಿಗಳಿಗೆ ಹೊರೆಯಾಗಲಿ ಎಂಬ ಉದ್ದೇಶದಿಂದ ಹೆಚ್ಚಳ ಮಾಡಿಲ್ಲ’ ಎಂದು ಪಾಲಿಕೆಯ ಉಪ ಆಯುಕ್ತ (ಕಂದಾಯ) ಅಶೋಕ ಗುರಾಣಿ ಹೇಳುತ್ತಾರೆ.

ಹುಬ್ಬಳ್ಳಿಯಲ್ಲಿ ಶೇ 200ರಿಂದ 300ಪಟ್ಟು ಹೆಚ್ಚಳವಾಗಿದ್ದರೆ, ಧಾರವಾಡದಲ್ಲಿ ಶೇ 50ರಿಂದ ಶೇ 80ರಷ್ಟು ಮಾತ್ರ ಹೆಚ್ಚಿಸುವ ಮೂಲಕ ತಾರತಮ್ಯ ಮಾಡಲಾಗಿದೆ. ಅಲ್ಲದೆ ಬಾಡಿಗೆ ದರ ಹೆಚ್ಚಳ ಸಹ ಅವೈಜ್ಞಾನಿಕವಾಗಿ ಎಂಬುದು ವಿವಿಧ ಮಾರುಕಟ್ಟೆಗಳ ವ್ಯಾಪಾರಿಗಳು ದೂರು.

‘ಈ ಹಿಂದೆ ವಾರ್ಷಿಕ ₹45 ಸಾವಿರ ಬಾಡಿಗೆ ಕಟ್ಟುತ್ತಿದ್ದೆವು. ಈಗ ಅದನ್ನು ₹1.30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮೂರು ಪಟ್ಟು ಬಾಡಿಗೆ ದರ ಹೆಚ್ಚಾಗಿದ್ದು, ವ್ಯಾಪಾರಿಗಳಿಗೆ ಹೊರೆಯಾಗಿ ಪರಿಣಮಿಸಿದೆ’ ಎಂದು ಸ್ವಿಮ್ಮಿಂಗ್‌ಪೂಲ್‌ ಸ್ಟಾಲ್ ಹೋಲ್ಡರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಜೆ.ಎಚ್.ಜಾದವ ಹೇಳಿದರು.

‘ಹೆಚ್ಚಿಗೆ ದರ ಕೊಡಲು ನಾವು ಸಿದ್ಧರಿದ್ದೇವೆ. ಆದರೆ, ಮೂರು ಪಟ್ಟು ಹೆಚ್ಚು ನೀಡಲು ಸಾಧ್ಯವಿಲ್ಲ. ಪಾಲಿಕೆಯಿಂದ ನಿರ್ಮಿಸಿದ ಕೊನೆಯ ವಾಣಿಜ್ಯ ಸಂಕೀರ್ಣ ಸ್ಮಿಮ್ಮಿಂಗ್‌ಪೂಲ್ ಕಾಂಪ್ಲೆಕ್ಸ್‌. ಇಲ್ಲಿ ಹೆಚ್ಚು ದರಕ್ಕೆ ಬಾಡಿಗೆ ಪಡೆದಿದ್ದು, ಆಟೊಮೊಬೈಲ್‌ಗೆ ಸಂಬಂಧಿಸಿದ ಮಳಿಗೆಗಳಿವೆ. ವ್ಯವಹಾರ ಕಡಿಮೆಯಾಗಿದೆ. ಮೇಲ್ಸೇತುವೆ ಕಾಮಗಾರಿಯಿಂದಾಗಿ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಇದರಿಂದ ವ್ಯಾಪಾರಿಗಳು ಬೀದಿಗೆ ಬರುವಂತಾಗಿದೆ’ ಎಂದು ಅಳಲು ತೋಡಿಕೊಂಡರು. 

‘2019ರ ಸುತ್ತೋಲೆಯನ್ನು ಈಗ ಅನುಷ್ಠಾನಕ್ಕೆ ತಂದಿದ್ದಾರೆ. ಮುಂದಿನ ವರ್ಷ ಇನ್ನೊಂದು ಸುತ್ತೋಲೆ ಜಾರಿಗೆ ತಂದು ಇನ್ನೂ ಬಾಡಿಗೆ ಹೆಚ್ಚಿಸಿದರೆ ವ್ಯಾಪಾರಿಗಳು ಮಳಿಗೆಗಳನ್ನು ತೊರೆಯಬೇಕಾಗುತ್ತದೆ. ಮೂರು ವರ್ಷ ಹೆಚ್ಚಿಸುವುದಿಲ್ಲ ಎಂಬ ಭರವಸೆ ನೀಡಬೇಕು. ಈಗ ಹೆಚ್ಚಿಸಿರುವ ದರವನ್ನು ಕಡಿಮೆ ಮಾಡಿ ನ್ಯಾಯಯುತವಾಗಿ ಬಾಡಿಗೆ ದರ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.   

‘ಮಾರ್ಚ್‌ನಲ್ಲಿ ಚಲನ್‌ ನೀಡಬೇಕಿತ್ತು. ಆದರೆ, ಆಗಸ್ಟ್‌ನಲ್ಲಿ ಚಲನ್‌ ನೀಡಿ ಒಂದು ತಿಂಗಳ ಕಾಲಾವಕಾಶ ನೀಡಿದ್ದಾರೆ. ಅವೈಜ್ಞಾನಿಕವಾಗಿ ದರ ಹೆಚ್ಚಿಸಿದ್ದು, ಖಂಡಿಸಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿದೆ. ವ್ಯಾಪಾರಿಗಳನ್ನು ಕರೆದು ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕು’ ಎಂದು ದುರ್ಗದಬೈಲ್‌ನ ಎಂ.ಜಿ.ಮಾರುಕಟ್ಟೆಯ ವರ್ತಕ ರವಿ ಬದ್ದಿ ಮನವಿ ಮಾಡಿದರು.

‘ಆನ್‌ಲೈನ್‌ ವಹಿವಾಟು ಹೆಚ್ಚಾಗಿರುವುದರಿಂದ ಜನರು ಮಾರುಕಟ್ಟೆಗಳಿಗೆ ಬರುವುದು ಕಡಿಮೆಯಾಗಿದೆ. ಅಲ್ಲದೆ, ಪಾಲಿಕೆ ನಿರ್ಮಿಸಿದ ಮಳಿಗೆಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ, ನೀರಿನ ವ್ಯವಸ್ಥೆ ಇಲ್ಲ. ಈಗ ಏಕಾಏಕಿ ಈ ರೀತಿ ದರ ಹೆಚ್ಚಿಸಿದ್ದರಿಂದ ವ್ಯಾಪಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ’ ಎಂದರು.

ಪ್ರಸ್ತುತ ಮಾರ್ಗಸೂಚಿ ದರದ (ಸಬ್‌ ರಿಜಿಸ್ಟ್ರಾರ್ ವ್ಯಾಲ್ಯೂ) ಅನ್ವಯ ಬಾಡಿಗೆ ದರವನ್ನು ಪರಿಷ್ಕರಿಸಲಾಗಿದೆ. ಬಾಡಿಗೆ ಪಾವತಿಸದ ಮಳಿಗೆಗಳನ್ನು ಬಂದ್ ಮಾಡಿಸಲಾಗುವುದು
ರುದ್ರೇಶ ಘಾಳಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ

ಎರಡು ವಾಣಿಜ್ಯ ಸಂಕೀರ್ಣ ಶಿಥಿಲ

ಮಹಾನಗರ ಪಾಲಿಕೆಯ ಹೊಸೂರು ಮತ್ತು ಹಳೇ ಹುಬ್ಬಳ್ಳಿಯ ವಾಣಿಜ್ಯ ಸಂಕೀರ್ಣಗಳು ಶಿಥಿಲಗೊಂಡಿದ್ದು ಅವುಗಳನ್ನು ನೆಲಸಮ ಮಾಡಬೇಕಿದೆ. ಆದರೆ ಇದಕ್ಕೆ ವ್ಯಾಪಾರಿಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಹೊಸೂರು ಸಂಕೀರ್ಣದಲ್ಲಿ 63 ಹಳೇ ಹುಬ್ಬಳ್ಳಿ ಸಂಕೀರ್ಣದಲ್ಲಿ 93 ಮಳಿಗೆಗಳಿವೆ. ಮಳಿಗೆಗಳನ್ನು ನೆಲಸಮ ಮಾಡಬೇಕಿರುವುದರಿಂದ ಅಲ್ಲಿನ ಬಾಡಿಗೆದಾರರಿಗೆ ಈ ಬಾರಿ ಬಾಡಿಗೆ ದರ ತುಂಬುವಂತೆ ಚಲನ್ ನೀಡಿಲ್ಲ. ಕಟ್ಟಡಗಳು ಶಿಥಿಲಗೊಂಡಿರುವುದು ಸಾಮರ್ಥ್ಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನ್ಯಾಯಾಲಯದಲ್ಲಿ ಇತ್ಯರ್ಥವಾದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.