
ಧಾರವಾಡ: ‘ಹಾಸ್ಯ ಕಾರ್ಯಕ್ರಮಗಳಲ್ಲಿ ಜನರು ಪಾಲ್ಗೊಳ್ಳುತ್ತಾರೆ. ಹಾಸ್ಯಕ್ಕೆ ಜನರ ಮನ ರಂಜಿಸುವ, ಒಗ್ಗೂಡಿಸುವ ಶಕ್ತಿ ಇದೆ’ ಎಂದು ಹಿಂದುಸ್ತಾನಿ ಸಂಗೀತಗಾರ ಮೃತ್ಯುಂಜಯ ಶೆಟ್ಟರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ.ಎಂ.ಎಸ್. ಸುಂಕಾಪುರ ದತ್ತಿ ಅಂಗವಾಗಿ ಈಚೆಗೆ ಆಯೋಜಿಸಿದ್ದ ‘ನಗೆಯ ಬಣ್ಣ ಹುಡುಕಿದ ಮಾನವತಾವಾದಿ ಎಂ.ಎಸ್.ಸುಂಕಾಪುರ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಎಂ. ಎಸ್. ಸುಂಕಾಪುರ ನೆಲಮೂಲ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಿದವರು, ಹಾಸ್ಯ ಪ್ರಜ್ಞೆಯ ಮೂಲಕ ಜನರ ಮನಸ್ಸನ್ನು ಒಂದುಗೂಡಿಸಿದವರು’ ಎಂದರು.
ಪುಣೆಯ ಶಶಿಕಾಂತ ಮಾತನಾಡಿ, ‘ಎಂ.ಎಸ್.ಸುಂಕಾಪುರ ಅವರು ಕನ್ನಡದ ಬೇರನ್ನು ಜಾನಪದ ಸಂಸ್ಕತಿಯಲ್ಲಿ ಕಂಡವರು. ಅವರ ಸಹಜ ಮಾತುಗಳಲ್ಲಿಯೂ ಹಾಸ್ಯ ಪ್ರಜ್ಞೆ ಇರುತ್ತಿತ್ತು’ ಎಂದು ತಿಳಿಸಿದರು.
‘ಕರ್ನಾಟಕ ವಿ.ವಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿದ್ದರು. ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಮಹಾಪ್ರಬಂಧ ರಚಿಸಿ ಪಿಎಚ್.ಡಿ. ಪಡೆದರು. ಒಟ್ಟು 60 ಕೃತಿಗಳು ರಚಿಸಿದ್ದಾರೆ’ ಎಂದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವೆ ಲೀಲಾವತಿ ಆರ್.ಪ್ರಸಾದ್, ಶಂಕರ ಕುಂಬಿ, ಜಿನದತ್ತ ಹಡಗಲಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ ಇದ್ದರು.