ADVERTISEMENT

ಕರ್ತವ್ಯಕ್ಕೆ ಹಾಜರಾಗದಿದ್ದರೆ ಕ್ವಾಟ್ರರ್ಸ್‌ ತೆರವು ಮಾಡಿ: ಸಾರಿಗೆ ಇಲಾಖೆ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 13:35 IST
Last Updated 8 ಏಪ್ರಿಲ್ 2021, 13:35 IST
ಹುಬ್ಬಳ್ಳಿಯಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿಯ ಮನೆಯವರಿಗೆ ಭದ್ರತಾ ಸಿಬ್ಬಂದಿ ನೋಟಿಸ್‌ ನೀಡಿದರು
ಹುಬ್ಬಳ್ಳಿಯಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿಯ ಮನೆಯವರಿಗೆ ಭದ್ರತಾ ಸಿಬ್ಬಂದಿ ನೋಟಿಸ್‌ ನೀಡಿದರು   

ಹುಬ್ಬಳ್ಳಿ: ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಈಗ ನೋಟಿಸ್‌ ಬಿಸಿ ತಟ್ಟಿದೆ. ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿ ಇಲಾಖೆಯ ಕ್ವಾಟ್ರರ್ಸ್‌ನಲ್ಲಿರುವ ಮನೆ ತೆರವು ಮಾಡಬೇಕೆಂದು ನೋಟಿಸ್‌ ನೀಡಲಾಗಿದೆ.

ಇಲಾಖೆಯ ಭದ್ರತಾ ಸಿಬ್ಬಂದಿ ಖುದ್ದು ನೌಕರರ ಮನೆಗೆ ಹೋಗಿ ನೋಟಿಸ್‌ ಕೊಟ್ಟು ಬರುತ್ತಿದ್ದಾರೆ. ಸಾರಿಗೆ ಸಂಸ್ಥೆಯ ಸೇವೆ ಅವಶ್ಯಕವಾಗಿರುವುದರಿಂದ ನೀವು ತುರ್ತು ಸಂದರ್ಭದಲ್ಲಿ ಕರ್ತವ್ಯಕ್ಕೆ ಲಭ್ಯರಾಗಬೇಕು ಎನ್ನುವುದು ಸಂಸ್ಥೆಯ ಅಶಯ. ಕರ್ತವ್ಯಕ್ಕೆ ಬರಬೇಕು ಎಂದು ದೂರವಾಣಿ ಮೂಲಕ ಹಲವಾರು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಮನೆಗೆ ಬಂದು ಕೋರಿದರೂ ನಿಯಮ ಉಲ್ಲಂಘಿಸಿದ್ದೀರಿ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ನಿಮ್ಮ ಕುಟುಂಬದ ವಾಸಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಇಲಾಖೆ ಕ್ವಾಟ್ರರ್ಸ್‌ ನೀಡಿದೆ. ಕರ್ತವ್ಯದ ನಿಯಮ ಹಾಗೂ ಷರತ್ತು ಉಲ್ಲಂಘಿಸಿದ ಕಾರಣ ನೋಟಿಸ್‌ ಅನ್ನು ಮನೆ ಬಾಗಿಲಿಗೆ ಅಂಟಿಸಲಾಗಿದೆ. ಕರ್ತವ್ಯಕ್ಕೆ ಬಾರದಿದ್ದರೆ ವಸತಿಗೃಹದ ಹಂಚಿಕೆ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ADVERTISEMENT

ಹುಬ್ಬಳ್ಳಿ–ಧಾರವಾಡ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿ ‘ನನ್ನ ವ್ಯಾಪ್ತಿಯಲ್ಲಿ 23 ಸಿಬ್ಬಂದಿಗೆ ಕ್ವಾಟ್ರರ್ಸ್‌ ನೀಡಲಾಗಿದೆ. ಅದರಲ್ಲಿ ಇಬ್ಬರು ಕರ್ತವ್ಯಕ್ಕೆ ಹಾಜರಾಗಿದ್ದು, ಉಳಿದ 21 ಜನರಿಗೆ ಕ್ವಾಟ್ರರ್ಸ್‌ ತೆರವು ಮಾಡುವಂತೆ ನೋಟಿಸ್‌ ನೀಡಲಾಗಿದೆ’ ಎಂದರು.

ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ‘ಸಂಸ್ಥೆಗೆ ಅಗತ್ಯವಿದ್ದಾಗ ಕರ್ತವ್ಯಕ್ಕೆ ಬಾರದ ಸಿಬ್ಬಂದಿಗೆ ವಸತಿಗೃಹ ನೀಡಿ ಏನು ಪ್ರಯೋಜನ? ಆದ್ದರಿಂದ ನೋಟಿಸ್‌ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.