ADVERTISEMENT

‘ನನ್ನ ನಾಲಿಗೆ ಸರಿ ಇದ್ದಿದ್ದಕ್ಕಾಗಿಯೇ ರಾಜ್ಯದಲ್ಲಿ ಇಷ್ಟೆಲ್ಲಾ ಬದಲಾವಣೆಗಳಾಗಿವೆ’

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 12:24 IST
Last Updated 12 ಆಗಸ್ಟ್ 2021, 12:24 IST
ಬಸನಗೌಡಪಾಟೀಲ ಯತ್ನಾಳ
ಬಸನಗೌಡಪಾಟೀಲ ಯತ್ನಾಳ   

ಹುಬ್ಬಳ್ಳಿ: ‘ಪಕ್ಷದೊಳಗೆ ಯಾರೂ ನನ್ನನ್ನುಚಿವುಟಿಲ್ಲ. ಯಾರಾದರೂ ಚಿವುಟಲು ಬಂದರೆ ಕಪಾಳಕ್ಕೆ ಹೊಡೆಯುವ ಮಗ ನಾನು. ನನ್ನ ವಿರೋಧ ಕಟ್ಟಿಕೊಂಡಿದ್ದಕ್ಕೆ ಬಿ.ಎಸ್. ಯಡಿಯೂರಪ್ಪ ಅವರು ಸಿ.ಎಂ ಹುದ್ದೆಯಿಂದ ಕೆಳಗಿಳಿದರು. ಅವರಿಗೆ ವಿರುದ್ಧವಾಗಿದ್ದಕ್ಕೆ ನಾನು ಸಚಿವನಾಗಲಿಲ್ಲ’ ಎಂದು ಬಿಜೆಪಿ ಶಾಸಕ ಬಸನಗೌಡಪಾಟೀಲ ಯತ್ನಾಳ ಹೇಳಿದರು.

ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಪಂಚಮಸಾಲಿ ಮೀಸಲಾತಿ ಚಳವಳಿಗಾರರ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ನಾಲಿಗೆ ಸರಿ ಇಲ್ಲ. ಅದಕ್ಕಾಗಿ ಸಚಿವ ಸ್ಥಾನ ಸಿಗಲಿಲ್ಲ ಎಂದು ಕೆಲವರು ಹೇಳುತ್ತಾರೆ. ನಾಲಿಗೆ ಸರಿ ಇದ್ದಿದ್ದಕ್ಕಾಗಿಯೇ ರಾಜ್ಯದಲ್ಲಿ ಇಷ್ಟೆಲ್ಲಾ ಬದಲಾವಣೆಗಳಾಗಿವೆ’ ಎಂದರು.

‘ಯಡಿಯೂರಪ್ಪ ಅವರ ಷರತ್ತು ಮತ್ತು ಒತ್ತಡವೇ ಬೊಮ್ಮಾಯಿ ಸಿ.ಎಂ ಆಗಲು ಮಾನದಂಡ. ಹಾಗಂತ ಅವರು, ಬಿಎಸ್‌ವೈ ನೆರಳು ಎಂದು ನಿರ್ಣಯಿಸಲಾಗದು. ನಾಯಕ ವೈಯಕ್ತಿಕ ಛಾಪು ಇಟ್ಟುಕೊಳ್ಳಬೇಕು. ಬೊಮ್ಮಾಯಿ ಬದಲಾಗಲೇಬೇಕು. ಮೇಲಿನವರ ಮಾತು ಕೇಳಲೇಬೇಕು. ಅದರ ಭಾಗವಾಗಿಯೇ ಯಡಿಯೂರಪ್ಪ ಅವರು ಇದ್ದಾಗಿನ ಅಧಿಕಾರಿಗಳನ್ನು ಬದಲಾವಣೆ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಖಾತೆ ಬದಲಾಯಿಸಿ ಹಾಗೂ ನಮ್ಮವರನ್ನು ಸಚಿವರನ್ನಾಗಿ ಮಾಡಿ ಎಂದು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಬಾರದು. ರಾಜ್ಯದಲ್ಲಿ ಪ್ರವಾಹ ಸೇರಿದಂತೆ ಹಲವು ಸಮಸ್ಯೆಗಳಿವೆ. ಹಿಂದಿನ ಸಿ.ಎಂ ಮನೆ ಕಳೆದುಕೊಂಡವರಿಗೆ ₹5 ಲಕ್ಷ ಕೊಡುತ್ತೇನೆ ಎಂದು, ₹1 ಲಕ್ಷ ಕೊಟ್ಟು ಕೈ ತೊಳೆದುಕೊಂಡರು. ಇವುಗಳ ಹಿಂದಿರುವ ಸೂತ್ರದಾರರು ಮಗು ಚಿವುಟಿ, ತೊಟ್ಟಿಲನ್ನೂ ತೂಗುತ್ತಾರೆ. ಬಳಿಕ, ಅರವಿಂದ ಬೆಲ್ಲದ ಮತ್ತು ನನ್ನತ್ತ ಕೈ ತೋರಿಸುತ್ತಾರೆ. ರಮೇಶ ಜಾರಕಿಹೊಳಿ ಅವರನ್ನೂ ಹೀಗೆಯೇ ಸಿಲುಕಿಸಿದರು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.