
ಹುಬ್ಬಳ್ಳಿ: ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಭಾನುವಾರ ನಡೆದ ಗರ್ಭಿಣಿ ಮಾನ್ಯಾ ಕೊಲೆಗೆ ಸಂಬಂಧಿಸಿ, 18 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮೃತಪಟ್ಟ ಮಾನ್ಯಾ ಅವರ ಪತಿ ವಿವೇಕಾನಂದ ದೊಡ್ಡಮನಿ ಅವರು, ಮಾನ್ಯಾ ಅವರ ತಂದೆ ಪ್ರಕಾಶಗೌಡ ಪಾಟೀಲ ಹಾಗೂ ಅವರ ಕುಟುಂಬದವರ ವಿರುದ್ಧ ದೂರು ನೀಡಿದ್ದಾರೆ. ನಾಲ್ಕನೇ ಆರೋಪಿ ಮಾತ್ರ ಕಲಘಟಗಿಯ ದಾಸ್ತಿಕೊಪ್ಪದವರಾಗಿದ್ದು, ಉಳಿದವರೆಲ್ಲ ಇನಾಂ ವೀರಾಪುರದವರಾಗಿದ್ದಾರೆ. ಅಲ್ಲದೆ, ಪ್ರಕರಣಲ್ಲಿ 10 ಮಂದಿ ಗಾಯಗೊಂಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಗಲಭೆ, ಕಾನೂನು ಬಾಹಿರವಾಗಿ ಗುಂಪುಗೂಡುವುದು, ಮಾರಕಾಸ್ತ್ರದಿಂದ ಹಲ್ಲೆ, ಕೊಲೆ, ಕೊಲೆ ಯತ್ನ, ಉದ್ದೇಶಪೂರ್ವಕ ದುಷ್ಕೃತ್ಯ, ಅಕ್ರಮ ಪ್ರವೇಶ, ಶಾಂತಿ ಕದಡುವ ಯತ್ನ, ಜೀವ ಬೆದರಿಕೆ ಸೇರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾನ್ಯಾ ಪಾಟೀಲ ಅವರನ್ನು, ಅದೇ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ವಿವೇಕಾನಂದ ದೊಡ್ಡಮನಿ ಅವರು ಪ್ರೀತಿಸಿ ಮದುವೆಯಾಗಿದ್ದರು. ಇದರಿಂದ ಮಾನ್ಯಾ ಕುಟುಂಬದವರು ಕೋಪಗೊಂಡಿದ್ದರು. ಭಾನುವಾರ ಸಂಜೆ 5ರ ಸುಮಾರಿಗೆ ಇನಾಂ ವೀರಾಪುರ ಗ್ರಾಮದ ಹೊರವಲಯದ ಗಿರಿಯಾಲ ರಸ್ತೆಯಲ್ಲಿ, ವಿವೇಕಾನಂದ ಅವರ ತಂದೆ ಮರಿಯಪ್ಪ, ಮಾವ ಸುನೀಲ ಅವರು ಬೈಕ್ ಮೇಲೆ ತೆರಳುತ್ತಿದ್ದಾಗ, ಟ್ರ್ಯಾಕ್ಟರ್ ಡಿಕ್ಕಿ ಹೊಡಿಸಿ ಕೊಲೆಗೆ ಯತ್ನಿಸಿದ್ದರು.
ವಿಷಯ ತಿಳಿದು ವಿವೇಕಾನಂದ ಅವರು ಸ್ಥಳಕ್ಕೆ ಹೋದಾಗ ಅವರ ಮೇಲೆ, ಪ್ರಕಾಶಗೌಡ ಪಾಟೀಲ ಮತ್ತು ಆಕಾಶಗೌಡ ಪಾಟೀಲ ರಾಡ್ ಹಾಗೂ ಸ್ಪ್ರಿಂಕ್ಲರ್ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ. ನಂತರ ಆರೋಪಿಗಳೆಲ್ಲ ಗುಂಪುಗೂಡಿ, ವಿವೇಕಾನಂದ ಅವರ ಮನೆಗೆ ಹೋಗಿ ಅವಾಚ್ಯವಾಗಿ ಮಾತನಾಡಿ ಜಾತಿ ನಿಂದನೆ ಮಾಡಿದ್ದಾರೆ.
ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಸಿಸಿಟಿವಿ ಕ್ಯಾಮರಾ ಕಿತ್ತಿದ್ದಾರೆ. ನಂತರ ವಿವೇಕಾನಂದ ಅವರ ತಾಯಿ ರೇಣುಕಾ ಹಾಗೂ ಪತ್ನಿ ಮಾನ್ಯಾ ಅವರ ಮೇಲೆ ಕೊಡಲಿ, ರಾಡ್, ಸ್ಪ್ರಿಂಕ್ಲರ್‌ನಿಂದ ಹಲ್ಲೆ ನಡೆಸಿದ್ದಾರೆ. ತಪ್ಪಿಸಲು ಮುಂದಾದ ಯಲ್ಲಪ್ಪ ದೊಡ್ಡಮನಿ, ಸಂಗೀತಾ ದೊಡ್ಡಮನಿ, ಉವಮ್ಮಾ ದೊಡ್ಡಮನಿ, ಅನನ್ಯಾ ದೊಡ್ಡಮನಿ ಅವರಿಗೆ ಜೀವ ಬೆದರಿಕೆ ಹಾಕಿ, ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಮಾನ್ಯಾ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 9.15 ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಕೆಎಂಸಿ-ಆರ್‌ಐ ಆಸ್ಪತ್ರೆಯ ಶವಾಗಾರದಲ್ಲಿ ಮಾನ್ಯಾ ಅವರ ದೇಹ ಇಡಲಾಗಿದೆ. ಧಾರವಾಡ ಎಸ್‌ಪಿ ಗುಂಜನ್ ಆರ್ಯ, ಡಿವೈಎಸ್ಪಿ ವಿನೋದ ಮುಕ್ತೇದಾರ, ಇನ್‌ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಶವಾಗಾರಕ್ಕೆ ಭೇಟಿ ನೀಡಿದ್ದು, ಶವಪರೀಕ್ಷೆ ಹಾಗೂ ಅಂತ್ಯಕ್ರಿಯೆ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವಿವಿಧ ದಲಿತ ಸಂಘಟನೆಯ ಪದಾಧಿಕಾರಿಗಳು ಸಹ ಶವಾಗಾರದ ಬಳಿ ಬೀಡಿಬಿಟ್ಟಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಶವಾಗಾರದ ಬಳಿ ಹಾಗೂ ಇನಾಂ ವೀರಾಪುರ ಗ್ರಾಮದಲ್ಲಿ ಪೊಲೀಸ್ ಭದ್ರತೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.