ADVERTISEMENT

ಏರಿದ ತೈಲ ದರದಿಂದ ಕೈಗಾರಿಕೆಗಳಿಗೆ ಹೊಡೆತ: ಕೋವಿಡ್‌ ನಂತರ ಮತ್ತೊಂದು ಸಂಕಷ್ಟ

ಕೋವಿಡ್‌ ಸಂಕಷ್ಟದಿಂದ ಚೇತರಿಸಿಕೊಳ್ಳುವಾಗಲೇ ಮತ್ತೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 14:40 IST
Last Updated 20 ಫೆಬ್ರುವರಿ 2021, 14:40 IST
   

ಹುಬ್ಬಳ್ಳಿ: ದಿನೇ ದಿನೇ ಇಂಧನ ದರ ಏರಿಕೆಯಾಗುತ್ತಿದ್ದು, ಪೆಟ್ರೋಲ್‍, ಡೀಸೆಲ್ ದರ ₹100 ಸಮೀಪಿಸುತ್ತಿದೆ. ಇದರಿಂದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಹೊಡೆತ ಬಿದ್ದಿದೆ.

ಕೋವಿಡ್‍ ಹಾಗೂ ಲಾಕ್‍ಡೌನ್‍ ಕಾರಣದಿಂದ ಕೈಗಾರಿಕೋದ್ಯಮಿಗಳಿಗೆ ತೀವ್ರ ನಷ್ಟ ಉಂಟಾಗಿತ್ತು. ಇನ್ನೇನು ಸುಧಾರಿಸುತ್ತಿಕೊಳ್ಳುತ್ತಿರುವಾಗಲೇ ಇಂಧನ ದರ ಏರಿಕೆಯಾಗುತ್ತಲೇ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎನ್ನುತ್ತಾರೆ ಕೈಗಾರಿಕೋದ್ಯಮಿಗಳು.

‘ಲಾಕ್‍ಡೌನ್‍ ತೆರವುಗೊಂಡ ಬಳಿಕ ಸಣ್ಣ, ಮಧ‍್ಯಮ ಕೈಗಾರಿಗಳ ಚಟುವಟಿಕೆಯಲ್ಲಿ ಸುಧಾರಣೆ ಕಂಡುಬಂದಿತ್ತು. ಉತ್ಪಾದನಾ ಪ್ರಮಾಣ ಕ್ರಮೇಣ ಏರಿಕೆಯಾಗುತ್ತಿತ್ತು. ಆದರೆ ಇದೀಗ ಇಂಧನ ದರ ಏರಿಕೆಯಿಂದ ಖರ್ಚಿನ ಪ್ರಮಾಣ ಹೆಚ್ಚಾಗಿದೆ. ನಿರೀಕ್ಷಿತ ಆದಾಯಕ್ಕೆ ಹೊಡೆತ ಬಿದ್ದಿದೆ’ ಎನ್ನುತ್ತಾರೆ ಗಾಮನಗಟ್ಟಿಯ ಗ್ರೀನ್‍ ಇಂಡಸ್ಟ್ರಿಯಲ್ ಪಾರ್ಕ್‌ ಅಧ್ಯಕ್ಷ ನಾಗರಾಜ ದೀವಟೆ.

ADVERTISEMENT

‘ಕಚ್ಚಾ ವಸ್ತುಗಳ ಪೂರೈಕೆ ಹಾಗೂ ಉತ್ಪನ್ನಗಳ ಸಾಗಣೆ ವೆಚ್ಚ ಹೆಚ್ಚಾಗಿದೆ. ಕೈಗಾರಿಕೆಗಳಲ್ಲಿ ಡೀಸೆಲ್‍ ಸೇರಿದಂತೆ ಇತರೆ ಇಂಧನ ಬಳಸುವುದರಿಂದ ಉತ್ಪಾದನಾ ವೆಚ್ಚವೂ ಅಧಿಕವಾಗಿದೆ. ಹಲವು ಕೈಗಾರಿಕೆಗಳು ಸಂದಿಗ್ಧ ಸ್ಥಿತಿಯ
ಲ್ಲಿದ್ದು, ಕೆಲವು ಮುಚ್ಚುವ ಹಂತದಲ್ಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಗ್ರಾಹರಿಕರಿಗೆ ಮೊದಲೇ ಉತ್ಪನ್ನಗಳ ದರ ಹೇಳಿರುತ್ತೇವೆ. ಇಂಧನ ದರ ಏರಿಕೆಯಿಂದಾಗಿ ಉತ್ಪಾದನಾ ವೆಚ್ಚ ಅಧಿಕವಾಗಿದೆ. ಆದರೆ, ಗ್ರಾಹಕರಿಗೆ ಮೊದಲು ತಿಳಿಸಿದ ದರದಲ್ಲೇ ನೀಡಬೇಕಿದ್ದು, ನಮಗೆ ಹೊರೆಯಾಗು ತ್ತಿದೆ. ಲಾಭವಿರಲಿ; ನಿರೀಕ್ಷಿತ ಆದಾಯವೂ ಕೈ ಸೇರುತ್ತಿಲ್ಲ. ಬ್ಯಾಂಕ್‍, ಫೈನಾನ್ಸ್‌ ಗಳ ನಿಗದಿತ ಕಂತು ಪಾವತಿಸಬೇಕು. ಕಾರ್ಮಿಕರಿಗೆ ವೇತನ ಸೇರಿದಂತೆ ಇತರೆ ಖರ್ಚುಗಳಿಂದ ನಷ್ಟವೇ ಹೆಚ್ಚುತ್ತಿದೆ’ ಎಂದು ಗ್ರೇಟರ್ ಹುಬ್ಬಳ್ಳಿ-ಧಾರವಾಡ ಇಂಡಸ್ಟ್ರೀಸ್ ಅಸೋಸಿಯೇಷನ್‍ ಅಧ್ಯಕ್ಷ ಆರ್.ಜಿ. ಭಟ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.