ADVERTISEMENT

ಬೌದ್ಧಿಕ ಪ್ರಾಮಾಣಿಕತೆ ಮುಖ್ಯ

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಡಾ. ಬಾಬು ಕೃಷ್ಣಮೂರ್ತಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 5:24 IST
Last Updated 20 ಮಾರ್ಚ್ 2023, 5:24 IST
ಹುಬ್ಬಳ್ಳಿಯಲ್ಲಿ ಡಾ. ಡಿ.ಎಸ್.‌ ಕರ್ಕಿ ಸಾಹಿತ್ಯ ವೇದಿಕೆ ಮತ್ತು ಸಾಹಿತ್ಯ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಲೇಖಕ ಅಜಕ್ಕಳ‌ ಗಿರೀಶ ಭಟ್ ಅವರ, ‘ಬಹುವಚನಕ್ಕೊಂದೇ ತತ್ವ’ ಕೃತಿಯನ್ನು ಸಾಹಿತಿ ಡಾ.‌ ಬಾಬು ಕೃಷ್ಣಮೂರ್ತಿ (ಎಡದಿಂದ ಮೂರನೇಯವರು) ಬಿಡುಗಡೆ  ಮಾಡಿದರು. ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಹೆಗಡೆ, ಮಂಜುಳಾ ಟೇಕಲ್, ಲೇಖಕ ಅಜಕ್ಕಳ ಗಿರೀಶ ಭಟ್, ಶಿಕ್ಷಕ ಕಿರಣರಾಮ್, ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಮಣ್ಯ ಇದ್ದಾರೆ– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಡಾ. ಡಿ.ಎಸ್.‌ ಕರ್ಕಿ ಸಾಹಿತ್ಯ ವೇದಿಕೆ ಮತ್ತು ಸಾಹಿತ್ಯ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಲೇಖಕ ಅಜಕ್ಕಳ‌ ಗಿರೀಶ ಭಟ್ ಅವರ, ‘ಬಹುವಚನಕ್ಕೊಂದೇ ತತ್ವ’ ಕೃತಿಯನ್ನು ಸಾಹಿತಿ ಡಾ.‌ ಬಾಬು ಕೃಷ್ಣಮೂರ್ತಿ (ಎಡದಿಂದ ಮೂರನೇಯವರು) ಬಿಡುಗಡೆ  ಮಾಡಿದರು. ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಹೆಗಡೆ, ಮಂಜುಳಾ ಟೇಕಲ್, ಲೇಖಕ ಅಜಕ್ಕಳ ಗಿರೀಶ ಭಟ್, ಶಿಕ್ಷಕ ಕಿರಣರಾಮ್, ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಮಣ್ಯ ಇದ್ದಾರೆ– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಮನುಷ್ಯನಿಗೆ ಬೌದ್ಧಿಕ ಪ್ರಾಮಾಣಿಕತೆ ಮುಖ್ಯ. ದೊಡ್ಡ ಪ್ರಶಸ್ತಿಗಳನ್ನು ಪಡೆದವರಲ್ಲೂ ಅಂತಹ ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿದೆ’ ಎಂದು ಸಾಹಿತಿ ಡಾ.‌ ಬಾಬು ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಕೆಸಿಸಿಐ ಸಭಾಂಗಣದಲ್ಲಿ ಡಾ. ಡಿ.ಎಸ್.‌ ಕರ್ಕಿ ಸಾಹಿತ್ಯ ವೇದಿಕೆ ಮತ್ತು ಸಾಹಿತ್ಯ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ಲೇಖಕ ಅಜಕ್ಕಳ‌ ಗಿರೀಶ ಭಟ್ ಅವರ, ‘ಬಹುವಚನಕ್ಕೊಂದೇ ತತ್ವ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯಾರೋ ಏನೋ ಹೇಳಿದರು ಎಂದು, ಮತ್ತೊಬ್ಬರು ಮತ್ತೇನನ್ನೋ ಹೇಳಿ‌ ಹುಯಿಲೆಬ್ಬಿಸುವ ಸ್ಥಿತಿ ಈಗಿದೆ. ನನಗೆ ಪಂಪ ಪ್ರಶಸ್ತಿ ಬಂದಿದ್ದಕ್ಕಾಗಿ, ಮಾರ್ಕ್ಸ್‌ವಾದದ ಕೂಪ ಮಂಡೂಕಗಳು ‘ಅವನಿಗೇಕೆ ಪ್ರಶಸ್ತಿ ಕೊಟ್ಟರು. ಅವನೊಬ್ಬ ಬಲಪಂಥೀಯ, ಕೇಶವ ಕೃಪದಿಂದ ಬಂದವನು ಎಂದು ಹೀಗಳೆದರು. ಇದು ಅವರ ಬೌದ್ಧಿಕ ದಾರಿದ್ರ್ಯಕ್ಕೆ ಸಾಕ್ಷಿ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ದೇಶದಲ್ಲಿ ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿರುವ ಸಂದರ್ಭದಲ್ಲಿ ಗಿರೀಶ ಅವರ ಕೃತಿಯು, ವೈಚಾರಿಕವಾಗಿ ಜನರನ್ನು ಚಿಂತನೆಗೆ ಹಚ್ಚುತ್ತದೆ. ಭಾರತೀಯ ದೃಷ್ಟಿಕೋನವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಬೌದ್ಧಿಕ ಗೊಂದಲ ನಿವಾರಿಸಿ, ಆತ್ಮವಿಶ್ವಾಸ ತುಂಬುವ ಈ ಕೃತಿ ಯುವಜನರನ್ನು ಹೆಚ್ಚಾಗಿ ತಲುಪಬೇಕು’ ಎಂದು ಸಲಹೆ ನೀಡಿದರು.

ಕೃತಿ ಕುರಿತು ಮಾತನಾಡಿದ ಶಿಕ್ಷಕ ಕಿರಣರಾಮ್, ‘ಸನಾತನ ಸಂಸ್ಕೃತಿ ಬಗ್ಗೆ ಮಾತಾಡುವವರಿಗೆ ಉತ್ತರ ಕೊಡಲು ಈ ಕೃತಿ ಉತ್ತಮ ಕೈಪಿಡಿ. ಹಿಂದೂ ಧರ್ಮದ ಹುಟ್ಟು ಹಾಗೂ ಹೆಸರಿನ ನಾಮಕರಣಕ್ಕೂ ಸಂಬಂಧವಿಲ್ಲ. ನಮ್ಮ‌ ಜೀವನದ ಕ್ರಮವೇ ಹಿಂದುತ್ವ. ಸಾಂಸ್ಕೃತಿಕವಾಗಿ ಹಿಂದುತ್ವ ಪಾಲನೆಯಾಗಬೇಕಿದೆ ಎಂಬುದನ್ನು ಕೃತಿ ಒತ್ತಿ ಹೇಳುತ್ತದೆ’ ಎಂದು ಅಭಿಪ್ರಾಯಪಟ್ಟರು.

ಅಜಕ್ಕಳ ಗಿರೀಶ ಭಟ್ ಮಾತನಾಡಿ, ‘ಕಾಮನ್ ಸೆನ್ಸ್ ಮಿಸ್‌ಗೈಡ್ ಆಗಿರುವ ಕಾಲವಿದು. ಭಾಷಾಂತರದ ಸಮಸ್ಯೆ ಪರಿಕಲ್ಪನೆಯ ಸಮಸ್ಯೆಯಾಗಿ, ಪರಿಕಲ್ಪನೆಯ ಸಮಸ್ಯೆ ನೀತಿಗಳ ಸಮಸ್ಯೆಯಾಗಿ ಬದಲಾಗುತ್ತಿದೆ. ಹಿಂದುತ್ವ ಅಂದರೆ ಬ್ರಾಹ್ಮಣ್ಯವಲ್ಲ. ದೇಶದಲ್ಲಿರುವ ಬಹುಸಂಖ್ಯಾತ‌ ಜನರ ಗುಣಗಳನ್ನು ಹಿಂದುತ್ವ ಒಳಗೊಂಡಿದೆ. ಇವು ಕ್ರೈಸ್ತ ಮತ್ತು ಇಸ್ಲಾಂ ಧರ್ಮದ ಗುಣಗಳಿಂದ ಹೊರತಾಗಿವೆ’ ಎಂದು ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಸಾಹಿತ್ಯ ಪ್ರಕಾಶನದ ಮಾಲೀಕ ಎಂ.ಎ.‌ ಸುಬ್ರಮಣ್ಯ, ‘ರಾಷ್ಟ್ರೀಯತೆ, ಧರ್ಮ, ಇತಿಹಾಸ, ಸಂಸ್ಕೃತಿ‌, ಸಂವಿಧಾನ ಸೇರಿದಂತೆ ಹಲವು ವಿಷಯಗಳನ್ನು ಹೊಸ ನೋಟದಿಂದ ನೋಡುವ ಪ್ರಯತ್ನವನ್ನು ಗಿರೀಶ ಅವರು ತಮ್ಮ ಪುಸ್ತಕದಲ್ಲಿ ಮಾಡಿದ್ದಾರೆ’ ಎಂದರು.

ಅನುವಾದಕಿ ಮಂಜುಳಾ ಟೇಕಲ್ ಮಾತನಾಡಿದರು. ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಹೆಗಡೆ ನಿರೂಪಣೆ ಮಾಡಿದರು.

ಪುಸ್ತಕ: ಬಹುವಚನಕ್ಕೊಂದೇ ತತ್ವ

ಪ್ರಕಾಶನ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ

ಬೆಲೆ: 160

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.