ADVERTISEMENT

ಬಿಜೆಪಿಗೆ ಬದ್ಧತೆ ಇದೆಯೇ: ಡಿ.ಕೆ.ಶಿವಕುಮಾರ್ ಪ್ರಶ್ನೆ

ಪಾಕಿಸ್ತಾನ ಪರ ಘೋಷಣೆ– ಪೊಲೀಸ್‌ ಇಲಾಖೆ ವರದಿಯೇ ಅಧಿಕೃತ: ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 21:17 IST
Last Updated 6 ಮಾರ್ಚ್ 2024, 21:17 IST
<div class="paragraphs"><p>ಡಿ.ಕೆ.ಶಿವಕುಮಾರ್</p></div>

ಡಿ.ಕೆ.ಶಿವಕುಮಾರ್

   

ಹುಬ್ಬಳ್ಳಿ: ‘ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ ಬಗ್ಗೆ ನಮ್ಮ ಸರ್ಕಾರ ತನಿಖೆ ನಡೆಸಿದೆ. ಆದರೆ ಬಿಜೆಪಿ ತನ್ನ ಅವಧಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ತನಿಖೆಯೇ ನಡೆಸಲಿಲ್ಲ. ಅವರಿಗೆ ದೇಶದ ಬಗ್ಗೆ ಬದ್ಧತೆ ಇದೆಯೇ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಪಾಕ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರಾಜೀನಾಮೆಗೆ ಬಿಜೆಪಿಯವರು ಆಗ್ರಹಿಸಿದ ಬಗ್ಗೆ ಕೇಳಿದಾಗ, ‘ಅವರಿಗೆ ರಾಜೀನಾಮೆ ಯಾವಾಗ ಬೇಕಂತೆ? ಯಾರಿಗೆ ರಾಜೀನಾಮೆ ನೀಡಬೇಕೆಂದು ಕೇಳಿ. ರಾಜೀನಾಮೆ ಕೊಡೋಣ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾಗ ಬಿಜೆಪಿ ಸರ್ಕಾರ ಅವರನ್ನು ಯಾಕೆ ಬಂಧಿಸಲಿಲ್ಲ? ಬಿಜೆಪಿಯವರು ಕೇಸರಿ ಶಾಲು ಹಾಕಿ‌ ಘೋಷಣೆ ಕೂಗಿದ್ದರು. ಈ ಪ್ರಕರಣಕ್ಕೆ ಯಾವುದೇ ಎಫ್ಎಸ್ಎಲ್ ವರದಿ ಅಗತ್ಯವಿಲ್ಲ. ನಾವು ರಾಜಕೀಯ ಮಾಡಬಾರದು ಎಂದು ಸುಮ್ಮನೆ ಇದ್ದೆವು. ಅವರ ಈ ಡೋಂಗಿ ಆಟಗಳನ್ನು ನೋಡಿ ನಮ್ಮ ಸ್ಥಳೀಯ ಶಾಸಕರು ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.

‘ಕೊಲೆ ಕೊಲೆಯೇ, ಕಳ್ಳತನ ಕಳ್ಳತನವೇ, ನುಡಿಮುತ್ತು ನುಡಿಮುತ್ತೇ ಅಲ್ಲವೇ? ದೇಶದ್ರೋಹ ದೇಶದ್ರೋಹವೇ ಅಲ್ಲವೇ? ನಮ್ಮ ಸರ್ಕಾರದಲ್ಲಿ ಘೋಷಣೆ ಕೂಗಿದವರ ವಿರುದ್ಧ ವಿಚಾರಣೆ ನಡೆಸಿದ್ದೇವೆ. ದೇಶದ ಬಗ್ಗೆ ಬದ್ಧತೆ ನಮಗಿದೆಯೋ? ಬಿಜೆಪಿಯವರಿಗೆ ಇದೆಯೋ?’’ ಎಂದು ತಿರುಗೇಟು ನೀಡಿದರು.

ದೇಶದ ಜನರಿಗೆ ಸ್ವಾತಂತ್ರ್ಯದ ಹಕ್ಕು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ನಮಗಿದ್ದಷ್ಟು ದೇಶಾಭಿಮಾನ ಬಿಜೆಪಿಗಿಲ್ಲ. ಅವರು ದ್ವೇಷ ಪ್ರೇಮಿಗಳು, ನಾವು ದೇಶಪ್ರೇಮಿಗಳು
ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

‘ಪಾಸ್‌ ನೀಡಿರುವ ಆರೋಪ ಸತ್ಯಕ್ಕೆ ದೂರ’

ಬ್ಯಾಡಗಿ (ಹಾವೇರಿ ಜಿಲ್ಲೆ): ‘ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ವರ್ತಕ ಮೊಹಮ್ಮದ್ ಶಫಿ ನಾಸಿಪುಡಿ ಮೇಲೆ ಸರ್ಕಾರ ಕೈಕೊಳ್ಳುವ ಎಲ್ಲಾ ಕಾನೂನು ಕ್ರಮಗಳನ್ನು ಸ್ವಾಗತಿಸುವೆ’ ಎಂದು  ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

‘ಫೆಬ್ರುವರಿ 27ರಂದು ಮೊಹಮ್ಮದ್‌ ಶಫಿ ಬೆಂಗಳೂರಿಗೆ ಬಂದಿದ್ದು ನನಗೆ ಗೊತ್ತಿಲ್ಲ. ನನ್ನನ್ನು ಭೇಟಿಯೂ ಆಗಿಲ್ಲ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಮಾಧ್ಯಮಗಳಿಂದ ತಿಳಿದು ಬಂತು. ಯಾರು ತಪ್ಪು ಮಾಡಿದ್ದಾರೆ, ಅವರಿಗೆ ಕಾನೂನು ರೀತಿ ಶಿಕ್ಷೆ ಆಗುತ್ತೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಉತ್ತಮ ವ್ಯಾಪಾರ ಮಾಡಿಕೊಂಡಿದ್ದ ಮೊಹಮ್ಮದ್‌ ಶಫಿ, ದೇಶದ ವಿರುದ್ಧ ಘೋಷಣೆ ಕೂಗಿದ್ದು ನನಗೆ ನೋವಾಗಿದೆ. ವಿಧಾನಸೌಧಕ್ಕೆ ಹೋಗುವ ಮೊದಲು ನನ್ನ ಹತ್ತಿರ ಬಂದಿಲ್ಲ. ಮುಖ ಸಹ ತೋರಿಸಿಲ್ಲ. ಅವರಿಗೆ ಪಾಸ್ ಕೊಡುವ ವಿಷಯ ಉದ್ಭವಿಸುವುದಿಲ್ಲ. ಅವರಿಗೆ ಪಾಸ್ ನೀಡಿದ ಆರೋಪ ಸತ್ಯಕ್ಕೆ ದೂರ’ ಎಂದರು.

‘ಎಫ್‌ಎಸ್‌ಎಲ್‌ ವರದಿ ಒಪ್ಪಲ್ಲ’

‘ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆಗೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಗಳು ನೀಡುವ ಎಫ್ಎಸ್ಎಲ್ ವರದಿಯನ್ನು ಸರ್ಕಾರ ಒಪ್ಪಲ್ಲ. ಪೊಲೀಸ್ ಇಲಾಖೆ ನೀಡುವ ವರದಿಯೇ ಅಧಿಕೃತ. ಅದನ್ನು ಆಧರಿಸಿ ತನಿಖೆ ನಡೆಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿರಸಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಹಿಂದಿನ ಪ್ರಕರಣ ಒಬ್ಬನ ಬಂಧನ

ಮಂಡ್ಯ: ಎರಡು ವರ್ಷಗಳ ಹಿಂದೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ‌ ಮೇಲೆ, ಬಿಜೆಪಿ‌ ಕಾರ್ಯಕರ್ತರಾದ ಶಿವಕುಮಾರ್ ಆರಾಧ್ಯ ಮತ್ತು ರವಿ ಎಂಬುವವರ ವಿರುದ್ಧ ನಗರದ ಪಶ್ಚಿಮ‌ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿ ಸಿದ್ದು, ರವಿ ಅವರನ್ನು ಬಂಧಿಸ ಲಾಗಿದೆ. ‌ಕಾಂಗ್ರೆಸ್ ಕಾರ್ಯಕರ್ತ ಕನ್ನಂಬಾಡಿ ಕುಮಾರ್ ದೂರು ನೀಡಿದ್ದರು.

ಮೋದಿ ವಿರುದ್ಧ ಪಾಕಿಸ್ತಾನ ವಿದೇಶಾಂಗ ಸಚಿವರು ಅವಹೇಳನ ಕಾರಿಯಾಗಿ ಮಾತನಾಡಿದ್ದಾರೆ‌ ಎಂದು ಆರೋಪಿಸಿ 2022, ಡಿ.18ರಂದು ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ‌ಆರೋಪಿ ರವಿ, ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದ್ದ, ಮತ್ತೊಬ್ಬ ಕಾರ್ಯಕರ್ತ ಆತನ ಬಾಯಿ ಮುಚ್ಚಿದ್ದರು. ಆ ಕುರಿತ ವಿಡಿಯೊ ವೈರಲ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.