ADVERTISEMENT

ಜನತಾ ದರ್ಶನ | ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ ಮಾಡಿ: ಸಚಿವ ಸಂತೋಷ್‌ ಲಾಡ್ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 5:13 IST
Last Updated 29 ಅಕ್ಟೋಬರ್ 2025, 5:13 IST
ಕಲಘಟಗಿಯಲ್ಲಿ ನಡೆದ ಜನತಾ ದರ್ಶನದಲ್ಲಿ ಸಚಿವ ಸಂತೋಷ್ ಲಾಡ್ ಅವರು ವೃದ್ಧೆಯೊಬ್ಬರ ಅಹವಾಲು ಆಲಿಸಿದರು
ಕಲಘಟಗಿಯಲ್ಲಿ ನಡೆದ ಜನತಾ ದರ್ಶನದಲ್ಲಿ ಸಚಿವ ಸಂತೋಷ್ ಲಾಡ್ ಅವರು ವೃದ್ಧೆಯೊಬ್ಬರ ಅಹವಾಲು ಆಲಿಸಿದರು   

ಕಲಘಟಗಿ: ‘ಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವುದು ಜನತಾ ದರ್ಶನದ ಉದ್ದೇಶ. ಅಧಿಕಾರಿಗಳು ಕಾಲಮಿತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಬಳಿಯ ಪಟ್ಟಣ ಪಂಚಾಯಿತಿಯ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಜಿಲ್ಲಾಮಟ್ಟದ ಜನ ಸಂಪರ್ಕ ಸಭೆಯಲ್ಲಿ ಜನರ ಅಹವಾಲು ಆಲಿಸಿ ಅವರು ಮಾತನಾಡಿದರು.

ಈವರೆಗೆ 17 ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮೂರು ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಇಂದಿನ 18ನೇ ಜನತಾ ದರ್ಶನದಲ್ಲಿ 378 ಅರ್ಜಿಗಳ ಬಂದಿವೆ. ಕೆಲವು ಸಮಸ್ಯೆಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳದಲ್ಲೇ ಪರಿಹರಿಸಲಾಗಿದೆ ಎಂದರು.

ADVERTISEMENT

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ 24, ಸಮಾಜ ಕಲ್ಯಾಣ ಇಲಾಖೆ–9, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ –14, ವಸತಿ ಇಲಾಖೆ– 60, ಕನ್ನಡ ಮತ್ತು ಸಂಸ್ಕೃತಿ ಇಲಾಖೆ –6, ಕಾರ್ಮಿಕ ಇಲಾಖೆ –6, ಕಂದಾಯ ಇಲಾಖೆ –121, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ –68, ಸಾರಿಗೆ ಇಲಾಖೆ– 7 ಮತ್ತು ನಗರಾಭಿವೃದ್ಧಿ ಇಲಾಖೆಗೆ ಸಬಂಧಿಸಿದ 26 ಅರ್ಜಿಗಳು ಬಂದಿವೆ ಎಂದು ಹೇಳಿದರು.

ವಿಧವಾ ವೇತನ, ವೃದ್ಧಾಪ್ಯ ವೇತನ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಭೂಮಿ ಒತ್ತುವರಿ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ, ಸಾರಿಗೆ ಸಮಸ್ಯೆ ಬಗ್ಗೆ ಜನರು ಗಮನ ಸೆಳೆದಿದ್ದಾರೆ. ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.

ನಾಲ್ಕು ತಿಂಗಳಿಂದ ವೇತನ ಬಂದಿಲ್ಲ ಎಂದು ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪರಶುರಾಮ ಪಾಟೀಲ ಅಳಲು ತೋಡಿಕೊಂಡರು.  ಮಿಶ್ರಿಕೋಟಿ ಗ್ರಾಮದ ಬಸವರಾಜ ಬೆಲ್ಲದ ಅವರು, ಅಪಾರ ಪ್ರಮಾಣದ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ಬೆಳೆ ವಿಮೆ ಬಿಡುಗಡೆ ವಿಳಂಬವಾಗಿದೆ ಎಂದು ಮನವಿ ಮಾಡಿದರು. 

ತಾಲ್ಲೂಕಿನ ಜಿನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಟ್ಟಡಕ್ಕೆ ಕಳೆದ ಒಂದು ವರ್ಷದಿಂದ ಕುಡಿಯುವ ನೀರು , ವಿದ್ಯುತ್ ಹಾಗೂ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಕೂಡಲೇ ಸೌಲಭ್ಯ ಕಲ್ಪಿಸಬೇಕು ಎಂದು  ಗ್ರಾಮಸ್ಥರು ಮನವಿ ಸಲ್ಲಿಸಿದರು.

ಕಾಮದೇನು ಗ್ರಾಮದ ವಿದ್ಯಾರ್ಥಿ ಅಕ್ಷತಾ ಹುಲಗೂರ, ಜಾತಿ, ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿ ನಾಲ್ಕು ತಿಂಗಳಾದರೂ ನೀಡಿಲ್ಲ ಎಂದು ದೂರಿದರು.

ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಆರ್ ಪಾಟೀಲ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪಂಚಾಯತಿ ಸಿಇಒ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ.,  ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಷ್ಣವಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ  ಸಂತೋಷ ಬಿರಾದಾರ, ಉಪ ವಿಭಾಗಾಧಿಕಾರಿ ಶಾಲಂ ಹುಸೇನ್, ತಹಶೀಲ್ದಾರ್‌ ಬಸವರಾಜ ಹೊಂಕಣದವರ, ತಾಲ್ಲೂಕ ಪಂಚಾಯಿತಿ ಇಒ ಪಿ.ವೈ.ಸಾವಂತ, ಸಿಪಿಐ ಶ್ರೀಶೈಲ್ ಕೌಜಲಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಬಾಬು ಅಂಚಟಗೇರಿ, ನರೇಶ ಮಲೆನಾಡು, ಬಾಳು ಖಾನಾಪುರ, ಶಿವಲಿಂಗ ಮುಗಣ್ಣವರ, ಗುರು ಬೆಂಗೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.