ADVERTISEMENT

ಹುಬ್ಬಳ್ಳಿ | ಜೆಡಿಎಸ್‌: ಪಕ್ಷ ಸಂಘಟನೆಗೆ ನಿರ್ಧಾರ

ಕೇಂದ್ರ ಸಚಿವ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮ ನಡೆಸುವ ಕುರಿತು ಚರ್ಚೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 7:17 IST
Last Updated 12 ಅಕ್ಟೋಬರ್ 2025, 7:17 IST
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕರವೇ ಉಪಾಧ್ಯಕ್ಷ, ಕಾಂಗ್ರೆಸ್‌ ಮುಖಂಡ ಪ್ರಶಾಂತ ಯಾವಗಲ್ಲ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕರವೇ ಉಪಾಧ್ಯಕ್ಷ, ಕಾಂಗ್ರೆಸ್‌ ಮುಖಂಡ ಪ್ರಶಾಂತ ಯಾವಗಲ್ಲ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು   

ಹುಬ್ಬಳ್ಳಿ: ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ‌‌ಪಕ್ಷ ಸಂಘಟನೆ ಮತ್ತು ಮತದಾರರ ನೋಂದಣಿ ಕುರಿತು ಶನಿವಾರ ನಗರದಲ್ಲಿ ಸಭೆ ನಡೆಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮೂರು ಜಿಲ್ಲೆಗಳ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ತಳಮಟ್ಟದಿಂದ ಪಕ್ಷ ಸಂಘಟಿಸುವ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಈ ಹಿಂದೆ ಪಕ್ಷದಲ್ಲಿದ್ದ ಕಾರ್ಯಕರ್ತರನ್ನು ಹಾಗೂ ಮುಖಂಡರನ್ನು ಪುನಃ ಪಕ್ಷಕ್ಕೆ ಕರೆತರುವ ವಿಷಯ ಪ್ರಸ್ತಾಪವಾಯಿತು.

‘ಮೂರು ಜಿಲ್ಲೆಗಳಲ್ಲಿ ಜೆಡಿಎಸ್‌ಗೆ ಒಳ್ಳೆಯ ಹೆಸರಿತ್ತು. ಪ್ರಧಾನಿ ಹಾಗೂ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ದೇವೇಗೌಡ ಅವರ ಆಡಳಿತವನ್ನು ಜನತೆ ಒಪ್ಪಿಕೊಂಡಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಪಕ್ಷಕ್ಕೆ ಹಿನ್ನಡೆಯಾಯಿತು. ಹಿಂದಿನದ್ದು ಮರೆತು, ಹೊಸ ಹುರುಪಿನಲ್ಲಿ ಪಕ್ಷ ಸಂಘಟಿಸಬೇಕು’ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಹೇಳಿದರು.

ADVERTISEMENT

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಕರೆಸಿ, ಮೂರು ಜಿಲ್ಲೆಗೂ ಸರಿಹೊಂದುವ ಸ್ಥಳದಲ್ಲಿ ಬೃಹತ್‌ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸುವ ಕುರಿತು ಸಹ ಸರ್ಚಿಸಲಾಯಿತು.

ಬ್ಲಾಕ್‌ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ನಿಷ್ಕ್ರೀಯವಾಗಿರುವ ಬ್ಲಾಕ್‌ ಸಮಿತಿಗಳನ್ನು ಹಾಗೂ ಬೇರೆ ಪಕ್ಷದಲ್ಲಿ ತೊಡಗಿಕೊಂಡಿರುವವರನ್ನು ಗುರುತಿಸಿ ನೋಟಿಸ್‌ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು. 

‘ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಎದುರಾಗುತ್ತಿದ್ದು, ನಾವೆಲ್ಲ ಈಗಲೇ ಎಚ್ಚೆತ್ತುಕೊಂಡು ಸಂಘಟಿತರಾಗಬೇಕು. ವಿಧಾನ ಪರಿಷತ್‌ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯನ್ನು ಸಮರ್ಥವಾಗಿ ಎದುರಿಸಬೇಕು. ಚುನಾವಣಾ ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿ,  ಪರಿಶೀಲನೆ ಬಳಿಕ ಹೈಕಮಾಂಡ್‌ಗೆ ಕಳುಹಿಸಲಾಗುವುದು’ ಎಂದು ಹು–ಧಾ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.

ವಿವಿಧ ಸಂಘಟನೆ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಕೆಲವು ನಾಯಕರನ್ನು ಸನ್ಮಾನಿಸಲಾಯಿತು.

ಧಾರವಾಡ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಗಂಗಾಧರಮಠ, ಗದಗ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವೈ. ಮುಧೋಳ, ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೌಡ ಹಾಗೂ ಮುಖಂಡರಾದ ಹನುಮಂತಪ್ಪ ಆಲ್ಕೋಡ, ವೀರಭದ್ರಪ್ಪ ಹಾಲಹರವಿ, ಬಸವರಾಜ ಪಿ., ಪ್ರಶಾಂತ ಯಾವಗಲ್ಲ, ನವೀನಕುಮಾರ, ಶಿವಶಂಕರ ಕಲ್ಲೂರ, ಪ್ರಕಾಶ ಅಂಗಡಿ, ರಾಮಣ್ಣಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.