ADVERTISEMENT

ದಾನ ಗುಣ ಬೆಳೆಸಿಕೊಳ್ಳಲು ಜೋಶಿ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 9:38 IST
Last Updated 9 ಜೂನ್ 2019, 9:38 IST
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಿದರು – ಪ್ರಜಾವಾಣಿ ಚಿತ್ರ
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಿದರು – ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಉಳ್ಳವರು ಇಲ್ಲದವರಿಗೆ ದಾನ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಇದರಿಂದ ದಾನ ಪಡೆದವನಿಗಷ್ಟೇ ಅಲ್ಲ, ನೀಡಿದವನ ಮನಸ್ಸಿಗೂ ಆನಂದ ಸಿಗುತ್ತದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ಗೌಳಿಗಲ್ಲಿಯಲ್ಲಿ ಭಾನುವಾರ ದೈವಜ್ಞ ಬ್ರಾಹ್ಮಣ ಯುವಕ ಸಂಘದ ಸಹಯೋಗದಲ್ಲಿ ಸದಾನಂದ ಎಂ. ಶೇಜವಾಡಕರ ಸ್ಮರಣಾರ್ಥವಾಗಿ ಸಮಾಜದ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದುಡ್ಡಿದ್ದವರಿಗೆ ಅದರ ಮಹತ್ವ ಗೊತ್ತಿರುವುದಿಲ್ಲ. ಆದರೆ, ಇಲ್ಲದವರಿಗೆ ಅದರ ಪ್ರಾಮುಖ್ಯತೆ ಗೊತ್ತಿರುತ್ತದೆ’ ಎಂದರು.

‘ನಾನೂ ಕೂಡ ಅಂತಹ ಸ್ಥಿತಿ ಅನುಭವಿಸಿದ್ದೇನೆ. ಹಳೇ ಹುಬ್ಬಳ್ಳಿಯ ಎಂಟಿಎಸ್ ಕಾಲೊನಿಯಿಂದ ವಿದ್ಯಾನಗರಕ್ಕೆ ಹೋಗಲು ಬಸ್‌ ಟಿಕೆಟ್‌ಗೆ ಬೇಕಿದ್ದ ನಾಲ್ಕಾಣೆಯೂ ನನ್ನ ಬಳಿ ಇರಲಿಲ್ಲ. ಅದಕ್ಕಾಗಿ, ಸೈಕಲ್‌ನಲ್ಲಿ ಡಬಲ್ ರೈಡ್ ಹೋಗುತ್ತಿದ್ದೆ. ಪೊಲೀಸರನ್ನು ಕಂಡರೆ, ಒಬ್ಬ ಕೆಳಕ್ಕೆ ಜಿಗಿಯುತ್ತಿದ್ದ’ ಎಂದು ನೆನಪಿಸಿಕೊಂಡರು.

ADVERTISEMENT

‘ಕೊಡುವುದರಲ್ಲಿ ಇರುವ ಸುಖ ಪಡೆಯುವುದರಲ್ಲಿ ಇರುವುದಿಲ್ಲ. ಅದಕ್ಕಾಗಿಯೇ ಹಿರಿಯುರು ನೂರು ಕೈಗಳಿಂದ ಗಳಿಸಿ, ಸಾವಿರ ಕೈಗಳಿಂದ ದಾನ ಮಾಡು ಎಂದಿದ್ದಾರೆ. ಶೇಜವಾಡಕರ ಕುಟುಂಬ ತಮ್ಮ ಕೈಲಾದ ಸಹಾಯ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ. ಮತ್ತಷ್ಟು ದಾನ ಮಾಡುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ’ ಎಂದರು.

ಲಲಿತಾ ಬಾಯಿ ಶೇಜವಾಡಕರ ಅಧ್ಯಕ್ಷತೆ ವಹಿಸಿದ್ದರು. ಮಹಾನಗರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ ಶೇಜವಾಡಕರ, ರುಕ್ಮಿಣಿ ಶೇಜವಾಡಕರ, ಬಿಜೆಪಿ ಮುಖಂಡರಾದ ಸುಧೀರ ಸರಾಫ, ಮಹೇಶ ಟೆಂಗಿನಕಾಯಿ, ಶಿವು ಮೆಣಸಿನಕಾಯಿ, ಡಿ.ಕೆ. ಚವ್ಹಾಣ, ದೀಪಕ್ ಮೆಹರವಾಡೆ ಹಾಗೂ ಸಂತೋಷ್‌ ಪಾಠಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.