ADVERTISEMENT

ಕಲಘಟಗಿ: 9 ದಿನಗಳ ಕಾಲ ಗ್ರಾಮ ದೇವಿಯರ ಜಾತ್ರೆ

ಅದ್ದೂರಿಯಾಗಿ ಗ್ರಾಮದೇವಿಯರ ಮೆರವಣಿಗೆ ನಡೆಸಿ ಚೌತಮನೆ ಕಟ್ಟೆಯಲ್ಲಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:13 IST
Last Updated 26 ಫೆಬ್ರುವರಿ 2026, 6:13 IST
ಕಲಘಟಗಿ ಪಟ್ಟಣದಲ್ಲಿ ಗ್ರಾಮದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಿಂದ ಪಟ್ಟಣದ ಚೌತಮನೆ ಕಟ್ಟೆಯವರೆಗೆ ಮೆರವಣಿಗೆ ನಡೆಸಿ ಪ್ರತಿಷ್ಠಾಪನೆ ಮಾಡಲಾಯಿತು
ಕಲಘಟಗಿ ಪಟ್ಟಣದಲ್ಲಿ ಗ್ರಾಮದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಿಂದ ಪಟ್ಟಣದ ಚೌತಮನೆ ಕಟ್ಟೆಯವರೆಗೆ ಮೆರವಣಿಗೆ ನಡೆಸಿ ಪ್ರತಿಷ್ಠಾಪನೆ ಮಾಡಲಾಯಿತು   

ಕಲಘಟಗಿ: ಪಟ್ಟಣದ ಗ್ರಾಮದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಿಂದ ಅದ್ದೂರಿಯಾಗಿ ಮೆರವಣಿಗೆ ನಡೆಸಿ ನಂತರ ಚೌತಮನೆ ಕಟ್ಟೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಭಕ್ತರು ಪ್ರದಕ್ಷಣೆ ತಿರುಗುತ್ತ, ಮೆರವಣಿಗೆ ಉದ್ದಕ್ಕೂ ಮಹಿಳೆಯರ ಡೊಳ್ಳು ಕುಣಿತ, ಜಾಂಜು ಮಜಲು, ಗೊಂಬೆ ಕುಣಿತ,ಮಾವುಲಿ ಡೋಲ ತಾಶಾ ದ್ವಜ ಪಥಕ ಹಾಗೂ ವಿವಿಧ ಬಗೆಯ ಮಜಲುಗಳು ನೋಡುಗರ ಗಮನ ಸೆಳೆದು ಮೆರವಣಿಗೆಗೆ ಮೆರಗು ತಂದು ಕೊಟ್ಟವು. ದೇವಿಯರ ಮುಂದೆ ಕೋಣ ಪೂಜೆ ಮಾಡಿ ತೆಗೆದುಕೊಂಡು ಹೋಗಲಾಯಿತು.

ಕಲಘಟಗಿ ಪಟ್ಟಣದಲ್ಲಿ ಮೂರು ವರ್ಷಕ್ಕೆ ಒಮ್ಮೆ 9 ದಿನಗಳ ಕಾಲ ಅದ್ದೂರಿಯಾಗಿ ದ್ಯಾಮವ್ವ, ದುರ್ಗವ್ವ, ಮೂರು ಮುಖದವ್ವ ಜರುಗುವ ಜಾತ್ರೆಗೆ ಪಟ್ಟಣದಲ್ಲಿ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ADVERTISEMENT

ಮೊದಲೇ ಐದು ಹೊರವಾರ ಆಚರಿಸಿ ದೇವಿಯರನ್ನು ಬಣ್ಣಕ್ಕೆ ಹಾಕುತ್ತಾರೆ. ಜಾತ್ರೆಯ ವಿಧಿ ವಿಧಾನಗಳೊಂದಿಗೆ ದೇವಸ್ಥಾನದಲ್ಲಿ ಹೋಮ ಹವನ ನಡೆಸಿ ವಿಶೇಷ ಪೂಜಾ ಕಾರ್ಯಕ್ರಮ ನೆರೆವೇರಿಸಲಾಯಿತು.

ದೇವಿಯರಿಗೆ ವಿವಿಧ ಹೂವಿನ ಮಾಲೆಯಿಂದ ಅಲಂಕರಿಸಿ, ನಿಂಬೆ ಹಣ್ಣು ಮಾಲೆ ಹಾಕಲಾಗಿತ್ತು. ದೇವಿಯರ ಮೆರವಣಿಗೆ ಓಣಿಯಲ್ಲಿ ಕಣ್ಣು ಹಾಯಿಸಿದಷ್ಟು ಭಕ್ತರು ನಿಂತು ದೇವಿಯರತ್ತ ಕೈ ಮುಗಿದು ಭಕ್ತಿ ಮೆರೆದರು.

ಟ್ರಸ್ಟ್ ಕಮಿಟಿಯವರ ಸಮ್ಮುಖದಲ್ಲಿ ದೇವಿಯರಿಗೆ ಬಾಸಿಂಗ, ತಾಳಿಗೊಂಡು, ಕಾಲುಂಗುರ, ಬಳೆಯನ್ನು ಮೆರವಣಿಗೆ ಮೂಲಕ ತರಲಾಯಿತು. ಕಾರ್ಮಿಕ ಸಚಿವ ಸಂತೋಷ್ ಲಾಡ್ ಭೇಟಿ ನೀಡಿ ಗ್ರಾಮದೇವಿಯರ ದರ್ಶನ ಪಡೆದರು.

ಚೌತ ಮನೆಯಲ್ಲಿ 9 ದಿನಗಳ ಕಾಲ ನಿತ್ಯ ದೇವಿಯರಿಗೆ ನೈವೇದ್ಯ,ಕುಂಕುಮಾರ್ಚನೆ,ಉಡಿ ಸೇವೆ,ಹೂವಿನ ಅಲಂಕಾರ ದ್ಯಾಮವ್ವ ದುರ್ಗವರ ಆರಾಧನೆ ನಡೆಯುತ್ತದೆ.

ಜಾತ್ರೆಗೆ ಪಟ್ಟಣ ಸೇರಿದಂತೆ ವಿವಿಧ ಕಡೆಯಿಂದ ಭಕ್ತರು ಆಗಮಿಸಿ ದೇವಿಯರ ಕೃಪೆಗೆ ಪಾತ್ರರಾಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.