ADVERTISEMENT

ಕಲಘಟಗಿ: ರಾಜ್ಯ ಹೆದ್ದಾರಿ; ಗುಂಡಿಗಳ ಸಾಮ್ರಾಜ್ಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 7:09 IST
Last Updated 1 ಅಕ್ಟೋಬರ್ 2025, 7:09 IST
<div class="paragraphs"><p>ಕಲಘಟಗಿ– ತಡಸ ರಾಜ್ಯ ಹೆದ್ದಾರಿಯಲ್ಲಿನ ಗುಂಡಿಗಳಲ್ಲಿ ಸಂಗ್ರಹವಾಗಿದ್ದ ಮಳೆ ನೀರು</p></div>

ಕಲಘಟಗಿ– ತಡಸ ರಾಜ್ಯ ಹೆದ್ದಾರಿಯಲ್ಲಿನ ಗುಂಡಿಗಳಲ್ಲಿ ಸಂಗ್ರಹವಾಗಿದ್ದ ಮಳೆ ನೀರು

   

ಕಲಘಟಗಿ: ಇಲ್ಲಿನ ರಾಷ್ಟ್ರಿಯ, ರಾಜ್ಯ ಹೆದ್ದಾರಿಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕಿಸುವ ಹಲವು ರಸ್ತೆಗಳು ಹಾಳಾಗಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.

ಕಲಘಟಗಿಯಿಂದ ಹಿಂಡಸಗೇರಿ, ಮಲಕನಕೊಪ್ಪ, ತಬಕದಹೊನ್ನಳ್ಳಿ ಮಾರ್ಗವಾಗಿ ತಡಸ ಸಂಪರ್ಕಿಸುವ ರಾಜ್ಯ ಹೆದ್ದಾರಿಯು ₹50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಹಿಂಡಸಗೇರಿ ಗ್ರಾಮದ ಬೇಡ್ತಿ ಹಳ್ಳದಿಂದ ತಬಕದಹೊನ್ನಳ್ಳಿ ಗ್ರಾಮದವರೆಗೆ ರಸ್ತೆಯನ್ನು ಅಲ್ಲಲ್ಲಿ ಅಗೆದು, ಹಾಗೇ ಬಿಟ್ಟಿದ್ದರಿಂದ ವಾಹನ ಸಂಚಾರ ದುಸ್ತರವಾಗಿದೆ.

ADVERTISEMENT

ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಗುಂಡಿ ಮುಚ್ಚಲು ನಿರ್ಲಕ್ಷ್ಯ ವಹಿಸುತ್ತಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ– ಕಾರವಾರ ರಾಷ್ಟ್ರಿಯ ಹೆದ್ದಾರಿ, ಕಲಘಟಗಿ– ಧಾರವಾಡ ರಾಜ್ಯ ಹೆದ್ದಾರಿ, ಶಿವನಾಪುರ– ದ್ಯಾವನಕೊಂಡ ಗ್ರಾಮದ ಒಳ ರಸ್ತೆ, ಜಿನ್ನೂರ– ಮಲಕನಕೊಪ್ಪ, ಕಲಘಟಗಿ– ಬೇಗೂರ, ಕಲಘಟಗಿ– ಮಡಕಿಹೊನ್ನಳ್ಳಿ ರಸ್ತೆಗಳೂ ತಗ್ಗು– ಗುಂಡಿಗಳಿಂದ ಕೂಡಿವೆ. ಈ ರಸ್ತೆಗಳ ಮೂಲಕ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆಂಬುಲೆನ್ಸ್ ಕೂಡ ಸಂಚರಿಸಲು ಸಾಧ್ಯವಾಗುತ್ತಿಲ್ಲ.

ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡರೆ ಗುಂಡಿಗಳ ಅಂದಾಜು ಸಿಗದೆ ವಾಹನಗಳು ಅಪಘಾತಕ್ಕೀಡಾಗುವ ಸಂಭವವಿದೆ. ಹಾಗಾಗಿ, ವಾಹನ ಸವಾರರು ಭಯದಲ್ಲೇ ಸಂಚರಿಸುವಂತಾಗಿದೆ.

ಕಲಘಟಗಿ– ತಡಸ ರಾಜ್ಯ ಹೆದ್ದಾರಿ ಕೆಸರು ಗದ್ದೆಯಂತಾಗಿದೆ. ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ
ಸಾತಪ್ಪ ಕುಂಕೂರ, ಸಂಗ್ರಾಮ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ
ಧಾರವಾಡ ಹಾಗೂ ತಡಸ ರಾಜ್ಯ ಹೆದ್ದಾರಿ ಕಾಮಗಾರಿ ಚಾಲ್ತಿಯಲ್ಲಿದೆ. ರಸ್ತೆ ದುರಸ್ತಿ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು
ಸಿದ್ದಲಿಂಗಸ್ವಾಮಿ,  ಎಇಇ, ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.