ADVERTISEMENT

ಪರಿಶಿಷ್ಟ ಜಾತಿಗೆ ಸೇರಿಸಲು ಕಲಾಲರ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 12:53 IST
Last Updated 8 ಮಾರ್ಚ್ 2021, 12:53 IST
ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ, ಕಲಾಲ ಖಾಟಿಕ ಸೂರ್ಯವಂಶ ಕ್ಷತ್ರೀಯ ಸಮಾಜದವರು ಸೋಮವಾರ ಹುಬ್ಬಳ್ಳಿಯ ತಹಶೀಲ್ದಾರ್ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು
ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ, ಕಲಾಲ ಖಾಟಿಕ ಸೂರ್ಯವಂಶ ಕ್ಷತ್ರೀಯ ಸಮಾಜದವರು ಸೋಮವಾರ ಹುಬ್ಬಳ್ಳಿಯ ತಹಶೀಲ್ದಾರ್ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು   

ಹುಬ್ಬಳ್ಳಿ: ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ, ಕಲಾಲ ಖಾಟಿಕ ಸೂರ್ಯವಂಶ ಕ್ಷತ್ರೀಯ ಸಮಾಜದವರು ಸೋಮವಾರ ತಹಶೀಲ್ದಾರ್ ಕಚೇರಿ ಅಧಿಕಾರಿ ಮುಖಾಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಸಮಾಜದ ಉಪಜಾತಿಗಳನ್ನು ಕಾಟಿಕ, ಕಟುಗ, ಕಲಾಲ ಸೂರ್ಯವಂಶ ಕ್ಷತ್ರೀಯ, ಹಿಂದೂ ಕಲಾಲ, ಹಿಂದೂ ಕಾಟಿಕ, ಶೇರೆಗಾರ, ಅರೇಕಸಾಯಿ, ಅರೆಖಾಟಿಕಲು, ಕಸಾಬು, ಕಸಾಯಿ ಮರಟ್ಟಿ ಹೆಸರುಗಳಿಂದ ಗುರುತಿಸಲಾಗುತ್ತಿದೆ. ಸಮುದಾಯವು ಕುರಿ ಮಾಂಸ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದೆ. ಅಸ್ಪೃಶ್ಯರಂತೆ ಬದುಕು ಸಾಗಿಸುತ್ತಿದ್ದು ಸರ್ಕಾರಿ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದು ಸಮಾಜದ ಅಧ್ಯಕ್ಷ ಭೀಮಣ್ಣ ಗಂಡಗಾಳೇಕರ ಮನವಿಯಲ್ಲಿ ತಿಳಿಸಿದ್ದಾರೆ.

2011ರಲ್ಲಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ, ಕುವೆಂಪು ವಿಶ್ವವಿದ್ಯಾಲಯದ ಪ್ರೊ.ಕೆ.ಎಂ. ಗುರುಲಿಂಗಯ್ಯ ಅವರು ಸಮಾಜದ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, 2012ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದುವರೆಗೆ ವರದಿ ಚರ್ಚೆಯಾಗಿಲ್ಲ. ಹಿಂದುಳಿದಿರುವ ನಮ್ಮ ಸಮಾಜದ ಸ್ಥಿತಿಗತಿಯ ಬಗ್ಗೆ ಸರ್ಕಾರಕ್ಕೆ ಅರಿವಿದ್ದರೂ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಉತ್ತರಾಖಂಡ ಸೇರಿದಂತೆ ದೇಶದ 13 ರಾಜ್ಯಗಳಲ್ಲಿ ಖಾಟಿಕ ಸಮಾಜವು ಪರಿಶಿಷ್ಟ ಜಾತಿ ಮೀಸಲಾತಿಯನ್ನು ಪಡೆಯುತ್ತಿದೆ. ರಾಜ್ಯದಲ್ಲಿ ಮಾತ್ರ ಇಲ್ಲ. ಸರ್ಕಾರ ಕೂಡಲೇ ನಮ್ಮ ಸಮಾಜವನ್ನು ಎಸ್‌ಸಿಗೆ ಸೇರಿಸಲು ನಿರ್ಧಾರ ಕೈಗೊಳ್ಳಬೇಕು ಎಂದು ಮುಖಂಡ ಕೃಷ್ಣಾ ಗಂಡಗಾಳೇಕರ ಆಗ್ರಹಿಸಿದ್ದಾರೆ.

ಸಮಾಜದ ಮುಖಂಡರಾದ ಕೆ.ಡಿ. ಕೊಜೇಕರ, ಮೋಹನ ಕೊಜೇಕರ, ಟಿ.ವೈ. ಅಂಕುಶಖಾನೆ, ಲಕ್ಷ್ಮಣ ಗಂಡಗಾಳೇಕರ, ಪ್ರದೀಪ ಜಿಗನಿಕರ, ವಿನಾಯಕ ಕಲಾಲ, ಪರಶುರಾಮ ಕ್ಷೀರಸಾಗರ, ದಶರಥ ರಾಯಭಾಗ, ಸದಾನಂದ ಖಜೂರಕರ, ಲಕ್ಷ್ಮಣ ಮಿರಜಕರ, ಅನಿಲ ಕೊಜೇಕರ, ಶ್ರೀನಿವಾಸ ತಪಾಸಕರ, ಆನಂದ ಜಿಗನಿಕರ, ಶಿವು ಅಂಕುಶಖಾನಿ, ಮೋಹನ ಕಲಾಲ, ನಾನಾಜಿರಾವ ಕಲಾಲ, ದೇವರಾಜ ಗಂಡಗಾಳೇಕರ ಹಾಗೂ ರಾಜೇಶ ಮಂಡಲಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.